Site icon Vistara News

Operation Ajay: ಇಸ್ರೇಲ್‌ನಿಂದ ಭಾರತೀಯರ ರಕ್ಷಣೆಗೆ ಆಪರೇಷನ್‌ ಅಜಯ್; ಏನಿದು? ಪ್ಲಾನ್‌ ಹೇಗಿದೆ?

Operation Ajay

What Is Operation Ajay? How India Plans To Bring Back Stranded Citizens From Israel

ನವದೆಹಲಿ: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ಆರನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು, ಹಮಾಸ್‌ ಉಗ್ರರ ನೆಲೆಯಾಗಿರುವ ಗಾಜಾಪಟ್ಟಿ ಮೇಲೆ ಇಸ್ರೇಲ್‌ ವಾಯುಪಡೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಎರಡೂ ರಾಷ್ಟ್ರಗಳಲ್ಲಿ ಸುಮಾರು 3,700ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ನಾಗರಿಕರ ರಕ್ಷಣೆಗೆ ಭಾರತ ಸರ್ಕಾರವು ‘ಆಪರೇಷನ್‌ ಅಜಯ್’‌ (Operation Ajay) ಘೋಷಿಸಿದೆ.

ಏನಿದು ಆಪರೇಷನ್‌ ಅಜಯ್?‌

ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರವು ಮಾಡಿರುವ ವಿಶೇಷ ವಿಮಾನಗಳ ವ್ಯವಸ್ಥೆ ಹಾಗೂ ರಕ್ಷಣಾ ಕಾರ್ಯಾಚರಣೆಯೇ ಆಪರೇಷನ್‌ ಅಜಯ್.‌ ಕನ್ನಡಿಗರು ಸೇರಿ ಎಲ್ಲ ರಾಜ್ಯಗಳ ನಾಗರಿಕರನ್ನು ವಿಶೇಷ ಚಾರ್ಟರ್ಡ್‌ ವಿಮಾನಗಳ ಮೂಲಕ ದೇಶಕ್ಕೆ ಕರೆತರಲಾಗುತ್ತಿದೆ. ನೂರಾರು ಭಾರತೀಯರನ್ನು ಹೊತ್ತು ಮೊದಲ ವಿಮಾನವು ಗುರುವಾರ (ಅಕ್ಟೋಬರ್‌ 12) ಭಾರತಕ್ಕೆ ಆಗಮಿಸಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಸಕಲ ವ್ಯವಸ್ಥೆ ಮಾಡಿದೆ.

ಇಸ್ರೇಲ್‌ನಲ್ಲಿರುವ ಭಾರತೀಯರೆಷ್ಟು?

ಇಸ್ರೇಲ್‌ನಲ್ಲಿ ಕರ್ನಾಟಕದವರು ಸೇರಿ ಹಲವು ರಾಜ್ಯಗಳ ವಿದ್ಯಾರ್ಥಿಗಳು, ವೃತ್ತಿಪರರ, ವೈದ್ಯರು, ನರ್ಸ್‌ಗಳು ಸೇರಿ ಸುಮಾರು 18 ಸಾವಿರ ಭಾರತೀಯರು ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೂ ಜನರನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ. ನೋಂದಣಿ ಮಾಡಿಕೊಂಡಿರುವ ಭಾರತೀಯರಿಗೆ ಇ-ಮೇಲ್‌ ಮೂಲಕ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ನೀಡಲಾಗುತ್ತದೆ. ಇ-ಮೇಲ್‌ ಆಧಾರದ ಮೇಲೆ ಆಯಾ ನಾಗರಿಕರು ವಿಮಾನ ನಿಲ್ದಾಣಗಳಿಗೆ ಆಗಮಿಸಿ, ಅಲ್ಲಿಂದ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕಂಟ್ರೋಲ್‌ ರೂಮ್‌ ಸ್ಥಾಪನೆ

ಇಸ್ರೇಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೆಹಲಿಯಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪಿಸಿದೆ. ಟೆಲ್‌ ಅವಿವ್‌ ಹಾಗೂ ರಾಮಲ್ಲಾಹ್‌ನಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ದಿನದ 24 ಗಂಟೆಯೂ ಸ್ಪಂದಿಸುವ ದಿಸೆಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಭಾರತಕ್ಕೆ ಆಗಮಿಸುವ ನಾಗರಿಕರು ಇಸ್ರೇಲ್‌ನಲ್ಲಿರುವ ರಾಯಭಾರ ಹಾಗೂ ರಾಜತಾಂತ್ರಿಕ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಭಾರತೀಯರ ರಕ್ಷಣೆಗೆ ರಾಯಭಾರ ಕಚೇರಿ ಅಧಿಕಾರಿಗಳು ಇಸ್ರೇಲ್‌ ಜತೆ ಮಾತುಕತೆ ನಡೆಸಿ, ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Israel Palestine War: ಪ್ರತಿ ಉಗ್ರನ ಹೆಣ ಬೀಳುವುದು ನಿಶ್ಚಿತ ಎಂದ ಇಸ್ರೇಲ್;‌ 3,700 ಸಾವು

ಇದಕ್ಕೂ ಮೊದಲಿನ ಕಾರ್ಯಾಚರಣೆಗಳು

ವಿದೇಶಗಳಲ್ಲಿ ಸಂಘರ್ಷ ಏರ್ಪಟ್ಟಾಗ, ಉಗ್ರರ ದಾಳಿಯಾದಾಗ, ಬೇರೆ ದೇಶ ಆಕ್ರಮಣ ಮಾಡಿದಾಗ ಕೇಂದ್ರ ಸರ್ಕಾರವು ಭಾರತೀಯರನ್ನು ರಕ್ಷಿಸಿದೆ. 2021ರಲ್ಲಿ ಅಫಘಾನಿಸ್ತಾನದಿಂದ ಅಮೆರಿಕ ಸೇನೆ ನಿರ್ಗಮಿಸಿದ ಬಳಿಕ ತಾಲಿಬಾನ್‌ ಉಗ್ರರು ಇಡೀ ದೇಶವನ್ನು ನರಕ ಮಾಡಿದಾಗ ಭಾರತ ಸರ್ಕಾರವು ಆಫ್ಘನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಜನರನ್ನು “ಆಪರೇಷನ್‌ ದೇವಿ ಶಕ್ತಿ” ಅಡಿಯಲ್ಲಿ ವಿಶೇಷ ವಿಮಾನಗಳ ಮೂಲಕ ಕರೆತಂದಿತ್ತು. ಹಾಗೆಯೇ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ 2022ರಲ್ಲಿ “ಆಪರೇಷನ್‌ ಗಂಗಾ” ಕೈಗೊಂಡು, ಸುಮಾರು 20 ಸಾವಿರ ವಿದ್ಯಾರ್ಥಿಗಳು, ನಾಗರಿಕರನ್ನು ರಕ್ಷಿಸಿದೆ.

Exit mobile version