Site icon Vistara News

ಸಂಸತ್‌ ದಾಳಿ: ಯಾರು ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಲಲಿತ್ ಝಾ?

lalith jha loksabha

lalith jha loksabha

ನವದೆಹಲಿ: ಬುಧವಾರ (ಡಿಸೆಂಬರ್‌ 13) ಇಬ್ಬರು ಆಗುಂತಕರು ಲೋಕಸಭೆಗೆ ಆಗಮಿಸಿ ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿ (Color Smoke Bomb) ಆತಂಕ ಸೃಷ್ಟಿಸಿದ್ದರು. ಈ ಲೋಕಸಭೆ ಭದ್ರತಾ ಲೋಪ ಪ್ರಕರಣಕ್ಕೆ (Security Breach in Lok Sabha) ಸಂಬಂಧಿಸಿದಂತೆ ಕರ್ನಾಟಕದ ಮನೋರಂಜನ್ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾಗಿದ್ದ ಲಲಿತ್ ಝಾ(Masterminde Lalit Jha) ನವದೆಹಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಹೋಗಿ ಗುರುವಾರ ಶರಣಾಗಿದ್ದ. ಈತ ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಮೂಲತಃ ಬಿಹಾರದವನು

ಲಲಿತ್ ಝಾ ಬಿಹಾರ ಮೂಲದವನಾಗಿದ್ದು, ಕೋಲ್ಕತ್ತಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರಿಂದ ಲಲಿತ್ ಝಾ ಸ್ಫೂರ್ತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ನಿಯೋಜಿಸುವ ವಿಡಿಯೊಗಳನ್ನು ಆರೋಪಿಗಳು ಚಿತ್ರೀಕರಿಸಿದ್ದರು ಮತ್ತು ಮಾಧ್ಯಮ ಪ್ರಸಾರಕ್ಕಾಗಿ ಎನ್‌ಜಿಒಗೆ ವಿಡಿಯೊಗಳನ್ನು ಹಸ್ತಾಂತರಿಸಿದ್ದರು ಎನ್ನಲಾಗಿದೆ. ನೀಲಾಕ್ಷ ಐಚ್ ನಡೆಸುತ್ತಿರುವ ಎನ್‌ಜಿಒದ ಪ್ರಧಾನ ಕಾರ್ಯದರ್ಶಿಯಾಗಿ ಲಲಿತ್ ಝಾ ಕಾರ್ಯ ನಿರ್ವಹಿಸುತ್ತಿದ್ದ.

ಲಲಿತ್ ಝಾ ಶಾಂತ ಸ್ವಭಾವದ ವ್ಯಕ್ತಿ, ಅವರು ಸ್ಥಳೀಯ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಅವರು ಕೋಲ್ಕತ್ತಾದ ಬುರ್ರಾಬಜಾರ್‌ಗೆ ಒಬ್ಬರೇ ಬಂದಿದ್ದರು. ಎರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಈ ಪ್ರದೇಶ ತೊರೆದಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಘಟನೆಯ ಬಳಿಕ ಲಲಿತ್ ಝಾ ಬಸ್ ಮೂಲಕ ರಾಜಸ್ಥಾನದ ನಾಗೌರ್ ತಲುಪಿದ್ದ. ನಂತರ ಇಬ್ಬರು ಸ್ನೇಹಿತರನ್ನು ಭೇಟಿಯಾಗಿ ರಾತ್ರಿ ಹೋಟೆಲ್‌ನಲ್ಲಿ ತಂಗಿದ್ದ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ಅರಿತುಕೊಂಡ ಲಲಿತ್ ಝಾ ಬಸ್ ಮೂಲಕ ದೆಹಲಿಗೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಆರೋಪಿಗಳು

ಲಲಿತ್ ಝಾ, ಮನೋರಂಜನ್ ಡಿ, ಸಾಗರ್ ಶರ್ಮ, ನೀಲಂ ಆಜಾದ್, ಅಮೋಲ್ ಶಿಂಧೆ ಅವರು ಬುಧವಾರ ಸಂಸತ್ತಿನಲ್ಲಿ ಮತ್ತು ಸುತ್ತಮುತ್ತಲಿನ ದಾಂಧಲೆ ಮಾಡಿದ ಪ್ರಕರಣದ ಐದು ಪ್ರಮುಖ ಆರೋಪಿಗಳು. ಈ ‘ಮಿಷನ್’ಗೆ ಮುಂಚಿತವಾಗಿ ಅವರೆಲ್ಲರೂ ತಮ್ಮ ರಾಜ್ಯಗಳಿಂದ ಡಿಸೆಂಬರ್ 10 ರಂದು ದೆಹಲಿಯನ್ನು ತಲುಪಿದ್ದರು. ವಿಶಾಲ್ ಶರ್ಮ ಅವರಿಗೆ ತಮ್ಮ ಗುರುಗ್ರಾಮ್ ಮನೆಯಲ್ಲಿ ಆಶ್ರಯ ನೀಡಿದ್ದರು. ಮನೋರಂಜನ್, ಸಾಗರ್, ನೀಲಂ ಮತ್ತು ಅಮೋಲ್ ಅವರನ್ನು ಬಂಧಿಸಲಾಗಿದೆ.

ಒಂದೂವರೆ ವರ್ಷದ ಹಿಂದೆ ಲಲಿತ್ ಝಾ, ಸಾಗರ್ ಶರ್ಮ ಮತ್ತು ಮನೋರಂಜನ್ ಡಿ ಅವರು ಮೈಸೂರಿನಲ್ಲಿ ಪರಸ್ಪರ ಭೇಟಿಯಾದರು ಮತ್ತು ಸಂಸತ್‌ ಮೇಲೆ ದಾಳಿ ನಡೆಸುವ ಸಂಬಂಧ ಯೋಜನೆಯನ್ನು ಆರಂಭಸಿದರು. ಬಳಿಕ ಈ ನೀಲಂ ಹಾಗೂ ಅಮೋಲ್ ಕೂಡ ಈ ಯೋಜನೆಯ ಭಾಗವಾದರು. ಸದ್ಯ ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ (UAPA) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: Security Breach in Lok Sabha: ಸಂಸತ್ತಿಗೆ ಭೇಟಿ ನೀಡಿ ಭದ್ರತಾ ಲೋಪ ಪತ್ತೆ ಹಚ್ಚಿದ್ದ ಮನೋರಂಜನ್

Exit mobile version