Site icon Vistara News

ʻಮಿಂಚಿನ ವೇಗದಲ್ಲಿʼ ನೇಮಕಗೊಂಡ ನೂತನ ಚುನಾವಣಾ ಆಯುಕ್ತ ಅರುಣ್‌ ಗೋಯಲ್‌: ಯಾರಿವರು?

arun goel

ನವ ದೆಹಲಿ : ʼʼಇಷ್ಟೊಂದು ಅವಸರವೇಕೆ?ʼʼ ಎಂದು ನೂತನ ಚುನಾವಣಾ ಆಯುಕ್ತ ಅರುಣ್‌ ಗೋಯಲ್‌ ಅವರ ನೇಮಕಾತಿಯ ಬಗೆಗೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಮಿಂಚಿನ ವೇಗದಲ್ಲಿ ಅರುಣ್‌ ಗೋಯಲ್‌ ಅವರ ನೇಮಕಾತಿ ಆಗಿರುವುದು ಸುಪ್ರೀಂ ಕೋರ್ಟ್‌ ಮಾತ್ರವಲ್ಲ ದೇಶದ ಕುತೂಹಲವನ್ನೂ ಕೆರಳಿಸಿದೆ.

1985ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಅರುಣ್‌ ಗೋಯಲ್‌ ಅವರು ನ.18ರಂದು ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅದಾದ ಮರುದಿನವೇ, ಅಂದರೆ ನ.19ರಂದು ಚುನಾವಣಾ ಆಯುಕ್ತರಾಗಿ ಅವರನ್ನು ರಾಷ್ಟ್ರಪತಿ ನೇಮಕ ಮಾಡಿದ್ದರು. ಎರಡು ದಿನ ನಂತರ, ನ.21ರಂದು ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ನ.23ರಂದು, ಅವರ ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ತನ್ನ ಮುಂದಿಡುವಂತೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ನೇಮಕ ಪ್ರಕ್ರಿಯೆ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೋರ್ಟ್‌ ಮುಂದಾಗಿದೆ. ಐವರು ನ್ಯಾಯಮೂರ್ತಿಗಳನ್ನು ಹೊಂದಿರುವ ಸಾಂವಿಧಾನಿಕ ಪೀಠವು, ಚುನಾವಣಾ ಆಯೋಗದ ನೇಮಕಗಳು ಹಾಗೂ ಸುಧಾರಣೆಯ ಕುರಿತಾದ ಅರ್ಜಿಗಳ ಪರಿಶೀಲನೆಯ ವಿಚಾರವನ್ನು ಎತ್ತಿಕೊಂಡಿದೆ.

ಅರುಣ್‌ ಗೋಯಲ್‌ ಅವರು ಪಂಜಾಬ್‌ ಕೇಡರ್‌ನ ಐಎಎಸ್‌ ಅಧಿಕಾರಿ. ಅವರು ಇಂಗ್ಲೆಂಡಿನ ಕೇಂಬ್ರಿಡ್ಜ್‌ ಯೂನಿವರ್ಸಿಟಿಯ ಚರ್ಚಿಲ್‌ ಕಾಲೇಜಿನಲ್ಲಿ ಡೆವಲಪ್‌ಮೆಂಟ್‌ ಎಜುಕೇಶನ್‌ನಲ್ಲಿ ಪಿಜಿ ಪದವಿ ಪಡೆದಿದ್ದಾರೆ. ಸ್ವಯಂ ನಿವೃತ್ತಿ ಪಡೆಯುವ ವೇಳೆಗೆ ಅವರು ಭಾರಿ ಕೈಗಾರಿಕೆಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. 2020ರಿಂದ ಅವರು ಅಲ್ಲಿದ್ದಾರೆ.

ಇದಕ್ಕೂ ಮುನ್ನ ಅವರು ಸಂಸ್ಕೃತಿ ಸಚಿವಾಲಯದಲ್ಲಿ ಕಾರ್ಯದರ್ಶಿ ಹಾಗೂ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪಾಧ್ಯಕ್ಷರಾಗಿದ್ದರು. 2012-14ರ ನಡುವೆ ವಿತ್ತ ಸಚಿವಾಲಯದ ಕಂದಾಯ ವಿಭಾಗದಲ್ಲಿ ಸಹ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ 2011ರಲ್ಲಿ ನಗರಾಭಿವೃದ್ಧಿ ಸಚಿವಾಲಯದ ಸಹ ಕಾರ್ಯದರ್ಶಿಯಾಗಿದ್ದರು.‌

ಇದನ್ನೂ ಓದಿ | Supreme Court | ಪ್ರಧಾನಿ ವಿರುದ್ಧ ಎಲೆಕ್ಷನ್‌ ಕಮಿಷನರ್‌ ಕ್ರಮ ಕೈಗೊಳ್ಳುತ್ತಾರೆಯೇ? ಆ ಶಕ್ತಿ ಇದೆಯೇ? ಎಂದ ಸುಪ್ರೀಂ ಕೋರ್ಟ್

ಕೇಂದ್ರ ಸಚಿವಾಲಯಗಳಿಗೆ ಆಗಮಿಸುವ ಮುನ್ನ ಪಂಜಾಬ್‌ನ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದರು. 1993- 95ರಲ್ಲಿ ಭಟಿಂಡಾ ಹಾಗು ಲುಧಿಯಾನ ಜಿಲ್ಲಾ ಚುನಾವಣಾಧಿಕಾರಿಯಾಗಿ, ನಂತರ ಪಂಜಾಬ್‌ ವೇರ್‌ಹೌಸಿಂಗ್‌ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕರಾಗಿ, ಪಂಜಾಬ್‌ ಉದ್ಯಮ ಮತ್ತು ರಫ್ತು ಆಡಳಿತ ನಿರ್ದೇಶಕರಾಗಿ, ವೆಚ್ಚ ವಿಭಾಗದ ಕಾರ್ಯದರ್ಶಿಯಾಗಿ, ವಿದ್ಯುತ್‌ ಮತ್ತು ನೀರಾವರಿ, ವಸತಿ ಮತ್ತು ನಗರಾಭಿವೃದ್ಧಿ ಕಾರ್ಯಾಲಯಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಗೋಯಲ್‌ ಅವರಿಗೆ ನಿವೃತ್ತಿಗೆ 2022ರ ಡಿ.31ರವರೆಗೂ ಸಮಯವಿತ್ತು. ಚುನಾವಣಾ ಆಯೋಗದಲ್ಲಿ ಅವರು 2027ರ ಡಿಸೆಂಬರ್‌ವರೆಗೂ ಸೇವೆ ಸಲ್ಲಿಸಲಿದ್ದಾರೆ. ಈಗಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ಅವಧಿ 2025 ಫೆಬ್ರವರಿಯಲ್ಲಿ ಮುಗಿಯಲಿದ್ದು, ನಂತರ ಗೋಯಲ್‌ ಅವರು ಆ ಸ್ಥಾನಕ್ಕೆ ಹೋಗಲಿದ್ದಾರೆ.

ಇದನ್ನೂ ಓದಿ | Arun Goel | ಚುನಾವಣೆ ಆಯುಕ್ತರಾಗಿ ಅರುಣ್‌ ಗೋಯಲ್‌ ನೇಮಕ

Exit mobile version