ಪಟನಾ: ‘ಪಲ್ಟು ರಾಮ್’, ‘ಪಲ್ಟು ಕುಮಾರ್’… ಬಿಹಾರದಲ್ಲಿ ನಿತೀಶ್ ಕುಮಾರ್ (Nitish Kumar) ಅವರನ್ನು ಜನ, ರಾಜಕಾರಣಿಗಳು ಹೀಗೆಯೇ ಕರೆಯುತ್ತಾರೆ. ಈಗ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು, ಇಂಡಿಯಾ ಒಕ್ಕೂಟಕ್ಕೆ ಗುಡ್ ಬೈ ಹೇಳಿ ಬಿಜೆಪಿ ಜತೆ ಮತ್ತೆ ದೋಸ್ತಿ ಮಾಡಿಕೊಳ್ಳಲು ಹೊರಟಿರುವ ನಿತೀಶ್ ಕುಮಾರ್ ಅವರನ್ನು ಜನ ಹೀಗೆಯೇ ಕರೆಯುತ್ತಿದ್ದಾರೆ. ಜನವರಿ 28ರಂದು ಬಿಜೆಪಿ ಜತೆಗೂಡಿ ಅವರು ಸರ್ಕಾರ (BJP JDU Alliance) ರಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೀಶ್ ಕುಮಾರ್ ಅವರು ಇರುವುದೇ ಹಾಗೆ, ಯಾರು ಏನೆಂದುಕೊಂಡರೂ, ಜನ ಯಾವ ಅಡ್ಡ ಹೆಸರಿನಿಂದ ಕರೆದು ವ್ಯಂಗ್ಯ ಮಾಡಿದರೂ, ಅವರು ಮಾತ್ರ ಮುಖ್ಯಮಂತ್ರಿ ಗದ್ದುಗೆಗಾಗಿ ಯಾವ ಪಕ್ಷದ ಜತೆಗೆ ಬೇಕಾದರೂ ಕೈಜೋಡಿಸುತ್ತಾರೆ. ಅವರ ರಾಜಕೀಯ ಇತಿಹಾಸ ಇರುವುದು ಹಾಗೆಯೇ…
24 ವರ್ಷ ಆಡಳಿತ ನಡೆಸಿದ್ದು ಹೀಗೆಯೇ…
ಬಿಹಾರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ರಚಿಸದಿದ್ದರೂ ನಿತೀಶ್ ಕುಮಾರ್ ಅವರು 2005ರಿಂದಲೂ (8 ತಿಂಗಳು ಹೊರತುಪಡಿಸಿ) ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ಬಿಜೆಪಿ ಜತೆಗೂಡಿ 20 ವರ್ಷ ಸಿಎಂ ಹುದ್ದೆಯಲ್ಲಿದ್ದರು. ಹಾಗೆಯೇ, ಮಹಾಘಟಬಂಧನ್ ಎಂಬ ಮೈತ್ರಿ ರಚಿಸಿ 4 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಿತೀಶ್ ಕುಮಾರ್ ಅವರು ಮೈತ್ರಿಪಕ್ಷಗಳನ್ನು ಆಗಾಗ ಬದಲಾಯಿಸಿದರೂ, ಅವರೇ ಸಿಎಂ ಆದರೂ, ಬೇರೆ ಪಕ್ಷಗಳು ಮಾತ್ರ ಅವರಿಗೆ ಆಫರ್ ನೀಡುತ್ತಲೇ ಇರುತ್ತವೆ. ಈಗ ಬಿಜೆಪಿಯು ಅವರ ಜತೆ ಮತ್ತೆ ಜೋಡಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ನಿತೀಶ್ ಕುಮಾರ್ ರಾಜಕೀಯ ಹಾದಿ
- 1985: ಮೊದಲ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆ
- 1998: ಮೊದಲ ಬಾರಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಿತೀಶ್ ಕುಮಾರ್, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯ
- 2000: ಬಿಜೆಪಿ ಬೆಂಬಲದೊಂದಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ, ವಿಶ್ವಾಸಮತ ಗೆಲ್ಲಲು ಆಗದೆ ಏಳು ದಿನದಲ್ಲೇ ರಾಜೀನಾಮೆ
- 2003: ಜನತಾದಳದೊಂದಿಗೆ ಸಮತಾ ಪಕ್ಷ ವಿಲೀನ, ಸಿಎಂ ಆಗಿ ಆಯ್ಕೆಯಾದ ನಿತೀಶ್
- 2005: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಗೆ ಬಹುಮತ, ಸಿಎಂ ಆದ ನಿತೀಶ್ ಕುಮಾರ್
- 2013: ನರೇಂದ್ರ ಮೋದಿ ಮೇಲಿನ ಮುನಿಸಿನಿಂದಾಗಿ ಬಿಜೆಪಿ ಜತೆಗಿನ ಮೈತ್ರಿಗೆ ವಿದಾಯ
- 2014: ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ
- 2015: ಆರ್‌ಜೆಡಿ ಜತೆಗೂಡಿ ಮಹಾಘಟಬಂಧನ್ ರಚನೆ, ಮತ್ತೆ ಸಿಎಂ ಆದ ನಿತೀಶ್
- 2017: ಮಹಾಘಟಬಂಧನ್ಗೆ ಕೈ ಕೊಟ್ಟ ನಿತೀಶ್, ಬಿಜೆಪಿ ಜತೆ ಭಾಯಿ ಭಾಯಿ
- 2022: ಮತ್ತೆ ಕಮಲ ಪಾಳಯ ತೊರೆದ ನಿತೀಶ್ ಕುಮಾರ್, ಆರ್‌ಜೆಡಿ ಜತೆಗೂಡಿ ಸರ್ಕಾರ ರಚನೆ
ಇದನ್ನೂ ಓದಿ: Nitish Kumar: ಬಿಜೆಪಿ ಜತೆ ನಿತೀಶ್ ಕುಮಾರ್ ದೋಸ್ತಿ ಪಕ್ಕಾ; ಜ.28ಕ್ಕೆ ಸಿಎಂ ಆಗಿ ಪದಗ್ರಹಣ
ಲೋಕಸಭೆ ಚುನಾವಣೆ ಲೆಕ್ಕಾಚಾರ
ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್ ಕುಮಾರ್ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ