ಮುಂಬೈ, ಮಹಾರಾಷ್ಟ್ರ: ದೇಶದಲ್ಲಿ ತ್ರಿವಳಿ ತಲಾಕ್ (Triple Talaq) ನಿಷೇಧಿಸಲಾಗಿದೆ. ಹಾಗಿದ್ದೂ, ಆಗಾಗ ಈ ತ್ರಿವಳಿ ತಲಾಕ್ ಮೂಲಕ ಮುಸ್ಲಿಮ್ ಮಹಿಳೆಗೆ ವಿಚ್ಚೇದನ ನೀಡಿದ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಈ ಮಧ್ಯೆ ಮುಂಬೈನಲ್ಲಿ ತ್ರಿವಳಿ ತಲಾಕ್ ಪ್ರಕರಣ ಪತ್ತೆಯಾಗಿದೆ. ಆದರೆ, ಪ್ರಕರಣದ ಕತೆ ಮಾತ್ರ ಭಿನ್ನವಾಗಿದೆ. ಏನೆಂದರೆ, ವಿಡಿಯೋ ಸಾಮಾಜಿಕ ಜಾಲತಾಣವಾಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹೆಂಡತಿ ವಿಡಿಯೋ (Reels Video) ಹಂಚಿಕೊಂಡಳು ಎಂಬ ಕಾರಣಕ್ಕೆ ಆಕೆಗೆ ತ್ರಿವಳಿ ತಲಾಕ್ ನೀಡಿದ್ದಾನೆ ಗಂಡ. ಅಲ್ಲದೇ, ಜಾಲತಾಣದಿಂದ ವಿಡಿಯೋ ತೆಗೆಯದೇ ಹೋದರೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಮುಸ್ಲಿಮ್ ಮಹಿಳೆಯು ಈಗ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದು, ಗಂಡ ಹಾಗೂ ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಿಸಿದ್ದಾಳೆ(Viral News).
ದೂರುದಾರರಾದ ಕುರ್ಲಾ ನಿವಾಸಿ ರುಖ್ಸಾರ್ ಅವರು ಮುತಕೀಮ್ ಸಿದ್ದಿಕಿ (23) ಅವರು ಕಳೆದ ವರ್ಷ ಮಾರ್ಚ್ 22 ರಂದು ಅಂಧೇರಿ (ಪೂರ್ವ) ನಿವಾಸಿ ಮುತಕೀಮ್ ಸಿದ್ದಿಕಿ ಅವರನ್ನು ವಿವಾಹವಾಗಿದ್ದರು. ಆದರೆ, ಮುತಕೀಮ್ ಅವರ ಪೋಷಕರು ಮತ್ತು ಸಹೋದರಿಯರು ವರದಕ್ಷಿಣೆಗಾಗಿ 5 ಲಕ್ಷ ರೂಪಾಯಿಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು. ಮನೆಗೆ ಭೇಟಿ ನೀಡುವ ಮಹಿಳೆಯೊಂದಿಗೆ ಮುತಕೀಮ್ ಸಂಬಂಧ ಹೊಂದಿದ್ದಾನೆ ಎಂದು ರುಖ್ಸಾರ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ರುಖ್ಸಾರ್ ಅವರು ತಮ್ಮ ತಂದೆ-ತಾಯಿ ಮನೆಗೆ ಹೋದರು. ಮತ್ತೆ ಅಲ್ಲೇ ಉಳಿದುಕೊಂಡರು. ಏಪ್ರಿಲ್ ತಿಂಗಳಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮುತಕೀಮ್ ಅವರೊಂದಿಗೆ ಇದ್ದ ವಿಡಿಯೋ (ರೀಲ್)ವೊಂದನ್ನು ಪೋಸ್ಟ್ ಮಾಡಿದರು. ಇದರಿಂದ ಸಿಟ್ಟಿಗೆದ್ದ ಮುತಕೀಮ್, ಪತ್ನಿಗೆ ಕರೆ ಮಾಡಿ ಕೂಡಲೇ ವಿಡಿಯೋವನ್ನು ಡಿಲಿಟ್ ಮಾಡುವಂತೆ ಹೇಳಿದ. ಆದರೆ, ಇದಕ್ಕೆ ರುಖ್ಸಾರ್ ಒಪ್ಪದೇ ಹೋದಾಗ, ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾನೆ. ಬಳಿಕ ರುಖ್ಸಾರ್ ಅವರು ಚುನಭಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯು ತಿಳಿಸಿದ್ದಾರೆ.
ಇದನ್ನೂ ಓದಿ: Triple Talaq: ಆನ್‌ಲೈನ್‌ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ
ಇಷ್ಟಾದ ಬಳಿಕ ರುಖ್ಸಾರ್ ಹಾಗೂ ಅವರ ತಾಯಿ ಮತ್ತು ಸಹೋದರಿ ಅವರು ಗಂಡ ಮತ್ತು ಹೆಂಡತಿಯರನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡಿದರು. ರಖ್ಸಾರ್ ಅವರನ್ನು ಕರೆದುಕೊಂಡು ಮುತಕೀಮ್ ಮನೆಗೆ ಏಪ್ರಿಲ್ 26ರಂದು ಹೋದರು. ಆದರೆ, ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ಆಗ ಅಕ್ರಮವಾಗಿ ರುಖ್ಸಾರ್‌ಗೆ ತ್ರಿವಳಿ ತಲಾಕ್ ಮೂಲಕ ಮುತಕೀಮ್ ವಿಚ್ಚೇದನ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಗಂಡ-ಹೆಂಡಿರ ಜಗಳವನ್ನು ಬಗೆಹರಿಸಲು ಕುಟುಂಬಸ್ಥರು ಮತ್ತು ಸ್ನೇಹಿತರು ವಾರಗಟ್ಟಲೇ ಪ್ರಯತ್ನಿಸಿದರೂ ಏನೂ ಪ್ರಯೋಜನವಾಗಿಲ್ಲ. ಬಳಿಕ ಸೋಮವಾರ ಪೊಲೀಸ್ ಸ್ಟೇಷನ್‌ಗೆ ತೆರಳಿದ ರುಖ್ಸಾರ್, ಮುಕೀಮ್ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.