ಮಾಸ್ಕೊ: ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವು (India Russia Friendship) ಮೊದಲಿನಿಂದಲೂ ಉತ್ತಮವಾಗಿದೆ. ಅದರಲ್ಲೂ, ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ ಅವರ ಗೆಳೆತನವು ಗಟ್ಟಿಯಾಗಿದೆ. ಹಾಗಾಗಿಯೇ, ಉಕ್ರೇನ್ ಬಿಕ್ಕಟ್ಟಿನ ಬಳಿಕವೂ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡು ದೇಶದಲ್ಲಿ ತೈಲ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಹೀಗೆ ಎರಡು ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಇರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ವ್ಲಾಡಿಮಿರ್ ಪುಟಿನ್ (Vladimir Putin) ಅವರು ತಮ್ಮ ದೇಶಕ್ಕೆ ಆಹ್ವಾನಿಸಿದ್ದಾರೆ. ಹಾಗೆಯೇ, ಲೋಕಸಭೆ ಚುನಾವಣೆಯಲ್ಲಿ ಗೆಳೆಯ ಗೆಲ್ಲಲಿ ಎಂದು ಆಶಿಸಿದ್ದಾರೆ.
ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಭೇಟಿಯಾಗಿದ್ದು, ಇದಾದ ಬಳಿಕ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿ ಅವರನ್ನು ರಷ್ಯಾಗೆ ಆಹ್ವಾನಿಸಿದರು. “ನನ್ನ ಗೆಳೆಯ ನರೇಂದ್ರ ಮೋದಿ ಅವರನ್ನು ರಷ್ಯಾದಲ್ಲಿ ಭೇಟಿಯಾಗುವುದೇ ಸಂತಸದ ಕ್ಷಣವಾಗಿದೆ. ಅಂತಹ ಸಂತಸದ ಕ್ಷಣಗಳಿಗೆ ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು. ಇದಕ್ಕೂ ಮೊದಲು ಕೂಡ, ರಷ್ಯಾದಲ್ಲಿ ಮೋದಿ ಹಾಗೂ ಪುಟಿನ್ ಅವರು ವಾರ್ಷಿಕ ಸಭೆ ನಡೆಸುವ ವಿಶ್ವಾಸವಿದೆ ಎಂದಿದ್ದರು.
Breaking: Russian President Vladimir Putin meets EAM Jaishankar in Moscow. First visuals released by the Kremlin: pic.twitter.com/ymBIglmvY1
— Sidhant Sibal (@sidhant) December 27, 2023
“ನರೇಂದ್ರ ಮೋದಿ ಅವರಿಗೆ ನನ್ನ ಪರವಾಗಿ ನೀವು ಶುಭಾಶಯ ತಿಳಿಸಿ” ಎಂದು ಎಸ್. ಜೈಶಂಕರ್ ಅವರಿಗೆ ಪುಟಿನ್ ಕೋರಿದರು. “ನರೇಂದ್ರ ಮೋದಿ ಅವರ ಆಗಮನಕ್ಕಾಗಿ ರಷ್ಯಾ ಕಾಯುತ್ತಿದೆ. 2024ರಲ್ಲಿ ಭಾರತದಲ್ಲಿ ಚುನಾವಣೆ ಸೇರಿ ಹಲವು ರಾಜಕೀಯ ಚಟುವಟಿಕೆಗಳು ಇವೆ ಎಂಬುದು ಗೊತ್ತು. ಚುನಾವಣೆಯಲ್ಲಿ ನನ್ನ ಗೆಳೆಯ ಗೆಲ್ಲಲಿ. ಅವರು ಬ್ಯುಸಿ ಇದ್ದರೂ ಅವರಿಗಾಗಿ ಕಾಯುತ್ತಿದ್ದೇವೆ. ರಷ್ಯಾ-ಉಕ್ರೇನ್ ಯುದ್ಧದ ಕುರಿತು ಈಗಾಗಲೇ ಮೋದಿ ಅವರ ಜತೆ ಚರ್ಚಿಸಲಾಗಿದೆ. ಮೋದಿ ಅವರ ನಿಲುವುಗಳನ್ನು ನಾವು ಮೆಚ್ಚಿದ್ದೇವೆ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂಬುದು ಮೋದಿ ಆಶಯವಾಗಿದೆ. ರಷ್ಯಾ ಕೂಡ ತನ್ನ ನಿಲುವನ್ನು ತಿಳಿಸಿದೆ” ಎಂದು ಪುಟಿನ್ ಹೇಳಿದರು. ಪುಟಿನ್ ಅವರ ಜತೆಗಿನ ಭೇಟಿ, ಭಾರತ-ರಷ್ಯಾ ಸಂಬಂಧದ ಕುರಿತು ಎಸ್. ಜೈಶಂಕರ್ ಕೂಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಮೋದಿಯನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ…ʼ ವ್ಲಾದಿಮಿರ್ ಪುಟಿನ್ ಹೀಗಂದಿದ್ದೇಕೆ?
ಮೋದಿಯನ್ನು ಹೊಗಳಿದ್ದ ಪುಟಿನ್
ಕೆಲ ತಿಂಗಳ ಹಿಂದಷ್ಟೇ ನರೇಂದ್ರ ಮೋದಿ ಅವರನ್ನು ವ್ಲಾಡಿಮಿರ್ ಪುಟಿನ್ ಹಾಡಿ ಹೊಗಳಿದ್ದರು. “1990ರಲ್ಲಿ ರಷ್ಯಾದಲ್ಲಿ ದೇಶೀಯವಾಗಿ ಕಾರುಗಳ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ, ಈಗ ರಷ್ಯಾದಲ್ಲಿಯೇ ಕಾರುಗಳ ಉತ್ಪಾದನೆಯಾಗುತ್ತಿದೆ. ಆದರೂ, ದೇಶೀಯವಾಗಿ ಕಾರು ಉತ್ಪಾದನೆಯಲ್ಲಿ ನಮ್ಮ ಸಹಭಾಗಿತ್ವ ದೇಶವಾದ ಭಾರತವನ್ನು ನೋಡಿ ಕಲಿಯಬೇಕು. ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಮೂಲಕ ದೇಶೀಯವಾಗಿಯೇ ಕಾರುಗಳ ಉತ್ಪಾದನೆಗೆ ಆದ್ಯತೆ ನೀಡಿರುವುದು ಸರಿಯಾಗಿದೆ. ಇದನ್ನು ನೋಡಿ ನಾವೂ ಕಲಿಯಬೇಕು” ಎಂದು ಪುಟಿನ್ ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ