Site icon Vistara News

ಸಮರಾಂಕಣ: ಭಾರತಕ್ಕೆ ಬರಲಿದೆಯೇ ಎಫ್-35 ಯುದ್ಧ ವಿಮಾನ?: ಏನಿದರ ಸಾಮರ್ಥ್ಯ?

F-35 fighter jet

ಲಾಕ್‌ಹೀಡ್‌ ಮಾರ್ಟಿನ್ ಎಫ್-35 ಲೈಟ್ನಿಂಗ್ II ಒಂದು ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಅಪಾರ ಪ್ರಮಾಣದ ವಾಯು ಪಾರಮ್ಯವನ್ನು ಹೊಂದಿದೆ. ಇದು ಭೂ ದಾಳಿ, ವಿಚಕ್ಷಣೆ, ಮತ್ತು ವಾಯು ರಕ್ಷಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸಬಲ್ಲದಾಗಿದ್ದು, ಅದು ಹೊಂದಿರುವ ಸ್ಟೆಲ್ತ್ ತಂತ್ರಜ್ಞಾನ ಈ ಕಾರ್ಯಾಚರಣೆಗಳಿಗೆ ಪೂರಕವಾಗಿದೆ. ಆದರೆ, ಭಾರತ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಲು ನಿರ್ಧರಿಸುವ ಮೊದಲು, ವಿವಿಧ ಕಾರ್ಯತಂತ್ರದ, ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಗಮನಿಸಬೇಕಿದೆ.
ಭಾರತ ಅಧಿಕೃತವಾಗಿ ಎಫ್-35 ಖರೀದಿಗೆ ಪ್ರಯತ್ನ ನಡೆಸಿಲ್ಲ ಮತ್ತು ಖರೀದಿಸಿಯೂ ಇಲ್ಲವಾದರೂ, ರಕ್ಷಣಾ ವಲಯದಲ್ಲಿ ಭಾರತ ಈ ವಿಮಾನಗಳನ್ನು ಖರೀದಿಸಬಹುದು ಎಂಬ ಕುರಿತು ಚರ್ಚೆಗಳಾಗಿವೆ. ಆದರೆ, ಒಂದು ವೇಳೆ ಭಾರತ ಏನಾದರೂ ಎಫ್-35 ವಿಮಾನವನ್ನು ಖರೀದಿಸಲು ಮುಂದಾದರೆ, ರಕ್ಷಣಾ ಖರೀದಿಯಲ್ಲಿರುವ ಅಂತರ್ಗತ ಸಮಸ್ಯೆಗಳ ಕಾರಣದಿಂದ, ಎಫ್-35 ವಿಮಾನದ ಬೆಲೆ ನಿಗದಿ ಪ್ರಕ್ರಿಯೆ ಸಂಕೀರ್ಣಗೊಳ್ಳಬಹುದು.

ಎಫ್-35 ಬೆಲೆಯಲ್ಲಿನ ಸಂಕೀರ್ಣತೆ

ಎಫ್-35 ವಿಮಾನದ ಮೂಲ ಬೆಲೆ ಕೇವಲ ವಿಮಾನದ ಬೆಲೆಯನ್ನು ಮಾತ್ರವೇ ಹೊಂದಿದೆ. ಆದರೆ, ಭಾರತ ವಿಮಾನ ಖರೀದಿಸುವಾಗ ಅದಕ್ಕೆ ವಿವಿಧ ಹೆಚ್ಚುವರಿ ವೆಚ್ಚಗಳೂ ತಗಲುತ್ತವೆ. ಈ ವಿಮಾನದ ಬೆಲೆಯನ್ನು ಬಿಡಿ ಬಿಡಿಯಾಗಿ ಗಮನಿಸಿದಾಗ, ಇದು ಕೇವಲ ವಿಮಾನದ ಬೆಲೆ ಮಾತ್ರವೇ ಆಗಿರದೆ, ಇತರ ಉಪಕರಣಗಳ ಬೆಲೆಯನ್ನೂ ಒಳಗೊಂಡಿರುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ (R&D) ಸಂಬಂಧಿಸಿದ ವೆಚ್ಚ

ಈ ಒಟ್ಟು ವೆಚ್ಚವನ್ನು ಪ್ರತಿಯೊಂದು ವಿಮಾನದ ಮೇಲೆ ವಿಧಿಸುವುದರಿಂದ, ಒಟ್ಟಾರೆಯಾಗಿ ಪ್ರತಿಯೊಂದು ವಿಮಾನದ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.

ವಿಮಾನದ ಪೂರ್ಣ ಜೀವಿತಾವಧಿಯಲ್ಲಿ ಒಟ್ಟು ಖರ್ಚಿನ ಅರ್ಥೈಸುವಿಕೆ

ವಿಮಾನದ ನಿರ್ವಹಣೆ, ಸಿಬ್ಬಂದಿಗಳ ತರಬೇತಿ, ಸಹಾಯಕ ಉಪಕರಣಗಳು, ಹಾಗೂ ಸಿಬ್ಬಂದಿಗಳ ವೆಚ್ಚಗಳು ನಿರಂತರವಾಗಿರಲಿದ್ದು, ಇವುಗಳು ಆರಂಭಿಕ ಖರೀದಿ ಮೊತ್ತವನ್ನು ಮೀರಿ ಹೆಚ್ಚಲಿವೆ.

ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು

ಈ ವೆಚ್ಚಗಳಲ್ಲಿ ವಿಮಾನದ ಇಂಧನ, ದುರಸ್ತಿ, ಕೂಲಂಕಷ ಪರೀಕ್ಷೆ, ಮತ್ತು ವಿಮಾನದ ಕಾರ್ಯಾಚರಣಾ ಅವಧಿಯಾದ್ಯಂತ ಅದರ ಮೇಲ್ದರ್ಜೆಗೇರಿಸುವಿಕೆಯ ವೆಚ್ಚಗಳು ಸೇರಿರುತ್ತವೆ.

ಖರೀದಿ ಒಪ್ಪಂದ ಹೇಗಿರುತ್ತದೆ?

ಭಾರತ ಖರೀದಿ ಒಪ್ಪಂದ ನಡೆಸುವಾಗ ಸರ್ಕಾರದಿಂದ ಸರ್ಕಾರಕ್ಕೆ ವಿದೇಶೀ ಮಿಲಿಟರಿ ವ್ಯಾಪಾರ (ಫಾರೀನ್ ಮಿಲಿಟರಿ ಸೇಲ್ – ಎಫ್ಎಂಎಸ್) ನಡೆಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನೇರ ವ್ಯಾಪಾರ ಪ್ರಕ್ರಿಯೆಗಿಂತ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುತ್ತದೆ. ಈ ಹೆಚ್ಚುವರಿ ವೆಚ್ಚ ಸಾಮಾನ್ಯವಾಗಿ ಸರ್ಕಾರದ ಹೆಚ್ಚುವರಿ ಪಾಲ್ಗೊಳ್ಳುವಿಕೆ ಮತ್ತು ಸಹಾಯದ ಪರಿಣಾಮದಿಂದ ಉಂಟಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತು ಈಗಾಗಲೇ ಇರುವ ರಕ್ಷಣಾ ವ್ಯವಸ್ಥೆಗಳು ಮತ್ತು ಮೂಲ ಸೌಕರ್ಯಗಳನ್ನು ಒಳಗೊಂಡು, ಎಫ್-35 ಯುದ್ಧ ವಿಮಾನದ ಒಟ್ಟಾರೆ ವೆಚ್ಚ ಮಾತುಕತೆಯ ಮೂಲಕ ಬದಲಾಯಿಸಬಹುದಾಗಿದ್ದು, ಯಾವುದೋ ಒಂದು ನಿರ್ದಿಷ್ಟ, ನಿಗದಿತ ಬೆಲೆಯಾಗಿರುವುದಿಲ್ಲ.

ಕಾಲ್ಪನಿಕ ಬೆಲೆ ನಿಗದಿ ಪ್ರಕ್ರಿಯೆಗೊಂದು ಒಳನೋಟ

ಪ್ರತಿಯೊಂದು ಎಫ್-35ಎ ವಿಮಾನದ ಬೆಲೆಯೂ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದಕ್ಕೆ ಉತ್ಪಾದನಾ ದಕ್ಷತೆಯ ಹೆಚ್ಚಳ ಮತ್ತು ವಿಮಾನಕ್ಕೆ ಹೆಚ್ಚಾದ ದೊಡ್ಡ ಖರೀದಿ ಬೇಡಿಕೆಗಳು ಕಾರಣವಾಗಿದೆ. 2023ರ ವೇಳೆಗೆ, ವಿಮಾನದ ಅಂದಾಜು ಮೊತ್ತ 80 ಮಿಲಿಯನ್ ಡಾಲರ್ ಆಸುಪಾಸಿನಲ್ಲಿತ್ತು. ಆದರೆ, ಭಾರತದ ಖರೀದಿಗೆ ಈ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗಮನಾರ್ಹ ವಿಚಾರವೆಂದರೆ, ಯಾವುದಾದರೂ ಒಂದು ಅಧಿಕೃತ ಹೇಳಿಕೆಯ ಹೊರತಾಗಿ, ಅಥವಾ ಸಾರ್ವಜನಿಕವಾಗಿ ಲಭ್ಯವಿರುವ ಒಪ್ಪಂದದ ಹೊರತಾಗಿ, ಭಾರತದಲ್ಲಿ ಎಫ್-35 ವಿಮಾನದ ಬೆಲೆಯ ಕುರಿತ ಚರ್ಚೆ ಕೇವಲ ಊಹಾಪೋಹಗಳಷ್ಟೇ ಆಗಿರುತ್ತದೆ. ಆದ್ದರಿಂದ ವಿಮಾನದ ಅಂತಿಮ ಖರೀದಿ ಬೆಲೆ ನಿರ್ದಿಷ್ಟ ಷರತ್ತುಗಳು ಮತ್ತು ಖರೀದಿ ಒಪ್ಪಂದದ ಸಂದರ್ಭದಲ್ಲಿ ನಡೆಸುವ ಬೆಲೆಯ ಕುರಿತಾದ ಚರ್ಚೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಕಾರ್ಯತಂತ್ರದ ಮೌಲ್ಯ ಮತ್ತು ಆರ್ಥಿಕ ಪರಿಣಾಮ

ಎಫ್-35 ಯುದ್ಧ ವಿಮಾನದ ಖರೀದಿಯ ನಿರ್ಧಾರ ಭಾರತದ ಪಾಲಿಗೆ ಕಾರ್ಯತಂತ್ರದ ಹೂಡಿಕೆಯಾಗಿರಲಿದ್ದು, ಇದು ಭಾರತದ ಮಿಲಿಟರಿ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸಲಿದೆ. ಆದರೆ, ಇದರ ನಿರ್ವಹಣೆ ಮತ್ತು ಕಾರ್ಯಾಚರಣಾ ವೆಚ್ಚವನ್ನು ಗಮನಿಸಿದರೆ, ಇದರ ಖರೀದಿ ಆರ್ಥಿಕ ಸವಾಲುಗಳನ್ನೂ ಒಡ್ಡಲಿದೆ ಎಂಬುದನ್ನು ಭಾರತ ಗಮನಿಸಬೇಕಾಗುತ್ತದೆ. ಭಾರತ ಈ ಅತ್ಯಾಧುನಿಕ ಯುದ್ಧ ವಿಮಾನದ ಪ್ರಯೋಜನಗಳು ಮತ್ತು ಅದರ ನಿರ್ವಹಣೆಗಾಗಿ ದೀರ್ಘಕಾಲದ ಹಣಕಾಸು ವೆಚ್ಚಗಳ ನಡುವೆ ತುಲನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಭಾರತಕ್ಕೆ ಎಫ್-35 ವಿಮಾನ ಖರೀದಿಸಲು ಆಸಕ್ತಿ ಇದೆಯೇ?

ಭಾರತ ಇಲ್ಲಿಯತನಕ ಅಧಿಕೃತವಾಗಿ ಎಫ್-35 ವಿಮಾನದ ಖರೀದಿಯ ಕುರಿತು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ. ಈ ವಿಮಾನದ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಗಳನ್ನೂ ನಡೆಸಿಲ್ಲ.

ಎಫ್-35 ವಿಮಾನ ಖರೀದಿಯಿಂದ ಭಾರತವನ್ನು ನಿರುತ್ತೇಜನಗೊಳಿಸುವ ಅಂಶಗಳು

ಭಾರತದ ರಕ್ಷಣಾ ಬಜೆಟ್‌ನ ಇತಿಮಿತಿಗಳು, ಈಗಾಗಲೇ ಇರುವ ರಕ್ಷಣಾ ಬದ್ಧತೆಗಳು, ಹಾಗೂ ಭಾರತ ನಡೆಸುತ್ತಿರುವ ಸ್ವದೇಶೀ ಯುದ್ಧ ವಿಮಾನ ನಿರ್ಮಾಣ ಸಾಮರ್ಥ್ಯ ಅಭಿವೃದ್ಧಿಯ ಪ್ರಯತ್ನಗಳು ಎಫ್-35 ವಿಮಾನ ಖರೀದಿಯಿಂದ ಭಾರತ ಹಿಂದೆ ಸರಿಯುವಂತೆ ಮಾಡಬಲ್ಲ ಅಂಶಗಳಾಗಿವೆ.

ಎಫ್-35 ಮತ್ತು ಭಾರತದ ಪ್ರಸ್ತುತ ಯುದ್ಧ ವಿಮಾನಗಳ ನಡುವಿನ ಹೋಲಿಕೆ

ಎಫ್-35 ಯುದ್ಧ ವಿಮಾನ ಸ್ಟೆಲ್ತ್ ಸಾಮರ್ಥ್ಯ (ಶತ್ರುಗಳ ರೇಡಾರ್‌ಗೆ ಕಾಣಿಸಿಕೊಳ್ಳದೆ ಚಲಿಸುವ ಸಾಮರ್ಥ್ಯ), ಅದು ಒಳಗೊಂಡಿರುವ ಅತ್ಯಾಧುನಿಕ ಸೆನ್ಸರ್‌ಗಳು, ಹಾಗೂ ಬಹುಪಾತ್ರಗಳ ಕಾರ್ಯಾಚರಣಾ ಸಾಮರ್ಥ್ಯದಿಂದ ಎಫ್-35 ಯುದ್ಧ ವಿಮಾನ ಭಾರತದ ಬಳಿ ಇರುವ ಯಾವುದೇ ಯುದ್ಧ ವಿಮಾನಕ್ಕಿಂತ ಹೆಚ್ಚು ಸಮರ್ಥವೂ, ಆಧುನಿಕವೂ ಆಗಿದೆ.

ಭಾರತಕ್ಕೆ ಎಫ್-35 ಯುದ್ಧ ವಿಮಾನದಿಂದ ಕಾರ್ಯತಂತ್ರದ ಮೇಲುಗೈ

ಎಫ್-35 ಯುದ್ಧ ವಿಮಾನ ಭಾರತಕ್ಕೆ ಬಹಳಷ್ಟು ಕಾರ್ಯತಂತ್ರದ ಮೇಲುಗೈ ಒದಗಿಸಬಲ್ಲದು. ಅದರಲ್ಲಿ ಹೆಚ್ಚಿನ ತಾಂತ್ರಿಕ ಸಾಮರ್ಥ್ಯ ಹಾಗೂ ನೆಟ್‌ವರ್ಕ್ ಕೇಂದ್ರಿತ ಯುದ್ಧ ಸಾಮರ್ಥ್ಯಗಳು ಪ್ರಮುಖವಾಗಿವೆ.
ಭಾರತ ಇನ್ನೂ ಎಫ್-35 ಯುದ್ಧ ವಿಮಾನ ಖರೀದಿಯ ಕುರಿತು ಅಧಿಕೃತವಾಗಿ ಆಸಕ್ತಿ ವ್ಯಕ್ತಪಡಿಸಿಲ್ಲ. ಆದ್ದರಿಂದ ವಿಮಾನದ ಬೆಲೆಯ ಕುರಿತ ಚರ್ಚೆಗಳೂ ಕೇವಲ ಊಹಾಪೋಹಗಳಷ್ಟೇ ಆಗಿವೆ. ಒಂದು ವೇಳೆ ಭಾರತ ಏನಾದರೂ ಈ ವಿಮಾನದ ಖರೀದಿಗೆ ಆಸಕ್ತಿ ತೋರಿದರೆ, ಆಗ ನಡೆಯುವ ಅಧಿಕೃತ ಮಾತುಕತೆಗಳು ಹಣಕಾಸಿನ ಆಯಾಮದ ಕುರಿತು ಸ್ಪಷ್ಟವಾಗಿ ಬೆಳಕು ಚೆಲ್ಲಬಲ್ಲವು. ಭಾರತದ ಏರೋಸ್ಪೇಸ್ ಹೆಬ್ಬಯಕೆಗಳ ಕುರಿತು ಆಸಕ್ತಿ ಹೊಂದಿರುವವರಿಗೆ, ಎಫ್-35ಗಳು ಕೇವಲ ವಿಮಾನಗಳಾಗಿರದೆ, ಭಾರತದ ಹೆಚ್ಚುತ್ತಿರುವ ರಕ್ಷಣಾ ಕಾರ್ಯತಂತ್ರ ಮತ್ತು ಖರೀದಿ ವಿಧಾನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Sukhoi Su-57: ರಷ್ಯಾದ ಸು-57 ಯುದ್ಧ ವಿಮಾನ ಪವರ್‌ಫುಲ್‌; ಆದರೆ ಭಾರತ ಖರೀದಿಸುತ್ತಿಲ್ಲ, ಏಕೆಂದರೆ…

Exit mobile version