Site icon Vistara News

Brothers day: ಬೇಸರಗೊಂಡ ತಮ್ಮನ ಕ್ಷಮೆ ಕೋರಿ 434 ಮೀ. ಉದ್ದದ ಪತ್ರ ಬರೆದ ಅಕ್ಕ!

ಪೀರುಮೇಡು: ಅಕ್ಕ ಮತ್ತು ತಮ್ಮನ ಸಂಬಂಧ ಜಗತ್ತಿನ ಶ್ರೇಷ್ಠ ಸಂಬಂಧಗಳಲ್ಲಿ ಒಂದು. ತಾಯಿಯನ್ನು ಬಿಟ್ಟರೆ ಆ ಸ್ಥಾನವನ್ನು ತುಂಬಬಲ್ಲ ಶಕ್ತಿ ಇರುವ ಮತ್ತೊಬ್ಬ ಹೆಣ್ಣು ಅಕ್ಕನೇ. ಇಂತಹ ಸುಮಧುರ ಬಾಂಧವ್ಯಕ್ಕೆ ಬೇರೊಂದು ಭಾಷ್ಯವನ್ನೇ ಬರೆದಿದ್ದಾರೆ ಕೇರಳದ ಒಬ್ಬ ಯುವತಿ. ಬೇಸರಗೊಂಡು ಸಿಟ್ಟು ಮಾಡಿಕೊಂಡ ತಮ್ಮನಲ್ಲಿ ಕ್ಷಮೆ ಕೋರಿ, ಪ್ರೀತಿ ತೋರಿ ಆಕೆ ಬರೆದಿರುವ ಆ ಒಂದು ಪತ್ರ ನಮ್ಮೆಲ್ಲರನ್ನು ಇನ್ನಿಲ್ಲದಂತೆ ಕಾಡುತ್ತದೆ, ಮೆಲ್ಲಗೆ ಕಣ್ಣೀರು ಜಿನುಗುವಂತೆ ಮಾಡುತ್ತದೆ. ಬಹುಶಃ ಹೊಸ ಇತಿಹಾಸವನ್ನೇ ಬರೆಯಬಲ್ಲ ತಾಕತ್ತು ಹೊಂದಿರುವ ಈ ಪತ್ರ ದಾಖಲೆಯಾಗುವತ್ತಲೂ ಸಾಗುತ್ತಿದೆ.

ಕೃಷ್ಣಪ್ರಿಯಾ ಎಂಬ ಆ ಹೆಣ್ಮಗಳು ತನ್ನ ಪ್ರೀತಿಯ ಸೋದರ ಕೃಷ್ಣ ಪ್ರಸಾದ್‌ಗೆ ಬರೆದಿರುವ ಪತ್ರ ಸುಮಾರು ೪೩೪ ಮೀಟರ್‌ ಉದ್ದವಿದೆ. ತೂಗಿದರೆ ಬರೋಬ್ಬರಿ ೫.೨೭ ಕೆಜಿ ಭಾರವಿದೆ ಎಂದರೆ ನಂಬುತ್ತೀರಾ? ಬನ್ನಿ ಹಾಗಿದ್ದರೆ ತಾಯಿಯಂತೆ ಪ್ರೀತಿಸುತ್ತಿದ್ದ ಅಕ್ಕನ ಮೇಲೆ ಅವಳ ಸಹೋದರ ಮುನಿಸಿಕೊಂಡಿದ್ದು ಯಾಕೆ? ಹಾಗೂ 5 ಕೆಜಿ ಪತ್ರದಲ್ಲಿ ಕೃಷ್ಣಪ್ರಿಯ ಏನು ಬರೆದಿದ್ದಾರೆ ತಿಳಿಯೋಣ.

ಪೀರುಮೇಡು ನಿವಾಸಿಯಾಗಿರುವ ಕೃಷ್ಣ ಪ್ರಸಾದ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ. ಅವನ ಅಕ್ಕ ಕೃಷ್ಣಪ್ರಿಯಾ ಕೂಡಾ ಎಂಜಿನಿಯರ್‌. ಪೆರುವಂತಾನಮ್‌ ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗಿ. ಮದುವೆಯಾದ ಬಳಿಕ ಮುಂಡಕಾಯಂನಲ್ಲಿ ವಾಸವಾಗಿದ್ದಾರೆ.

ಮೇ 24ರಂದು ವಿಶ್ವ ಸಹೋದರರ ದಿನ ಇತ್ತು. ಆವತ್ತು ಅಂದು ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ಶುಭ ಹಾರೈಸುವುದು ರೂಢಿ. ತಿರುವನಂತಪುರಂ ಮೂಲದ ಕೃಷ್ಣಪ್ರಿಯಾ ಕೂಡ ಪ್ರತಿ ವರ್ಷ ತನ್ನ ಸಹೋದರ ಕೃಷ್ಣಪ್ರಸಾದ್‌ಗೆ ತಪ್ಪದೇ ಶುಭ ಕೋರುತ್ತಾ ಬಂದಿದ್ದರು. ಆದರೆ ಈ ವರ್ಷ ಅವರ ಕೆಲಸದ ಒತ್ತಡದ ಮಧ್ಯೆ ತಮ್ಮನಿಗೆ ಶುಭ ಕೋರುವುದನ್ನು ಮರೆತುಬಿಟ್ಟರು.

ಇದರಿಂದ ಬೇಸರಗೊಂಡ ಕೃಷ್ಣ ಪ್ರಸಾದ್‌ ಬೇರೆಯವರು ಕಳುಹಿಸಿದ ಶುಭಾಶಯ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ಕಳುಹಿಸಿದ. ʻಒಬ್ಬ ಸಹೋದರನಿಗೆ ಅಕ್ಕನ ಶುಭ ಹಾರೈಕೆ ತುಂಬ ಮುಖ್ಯʼ ಎಂಬ ಸಂದೇಶ ಕಳುಹಿಸಿದ. ಆದರೆ, ಇದ್ಯಾವುದೂ ಆಕೆಗೆ ಗೊತ್ತೇ ಆಗಿರಲಿಲ್ಲ. ತುಂಬ ಹೊತ್ತಿನ ಬಳಿಕ ಮೊಬೈಲ್‌ ತೆರೆದು ನೋಡಿದರೆ ತಮ್ಮನಿಂದ ಸಾಲು ಸಾಲು ಸಂದೇಶ ಬಂದಿದೆ. ಕೂಡಲೇ ಸಂಪರ್ಕಿಸಲು ಯತ್ನಿಸಿದರೆ ವಾಟ್ಸ್‌ ಆ್ಯಪ್‌ನಲ್ಲಿ ಬ್ಲಾಕ್‌ ಮಾಡಿದ್ದ. ಕರೆ ಮಾಡಿದರೆ ಕಾಲ್‌ ರಿಸೀವ್‌ ಮಾಡುತ್ತಿರಲಿಲ್ಲ.

ಕೃಷ್ಣಪ್ರಿಯಾ ಹಾಗೂ ಸಹೋದರ ಕೃಷ್ಣಪ್ರಸಾದ್

ತಮ್ಮ ತನ್ನ ಮೇಲೆ ಕೋಪಗೊಂಡಿದ್ದಾನೆ ಎನ್ನುವುದನ್ನು ಕೃಷ್ಣ ಪ್ರಿಯಾಗೆ ಅರಿವಾಯಿತು. ಬಿಡುವಿಲ್ಲದ ಕೆಲಸದಿಂದಾಗಿ ತಮ್ಮನಿಗೆ ಶುಭ ಹಾರೈಸುವುದನ್ನೂ ಮರೆತೆನಲ್ಲ ಎಂದು ತಾನೇ ಬೇಸರಿಸಿಕೊಂಡರು. ತಮ್ಮನಿಂದ ಬಂದ ಸಂದೇಶ ಹಾಗೂ ಸ್ಕ್ರೀನ್‌ ಶಾಟ್ ಗಳನ್ನು ನೋಡಿ ದುಃಖವೇ ಬಂತು.

ಈಗ ತಮ್ಮನನ್ನು ಸಮಾಧಾನ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಅವರಿಗೆ ಹೊಳೆದ ಐಡಿಯಾ ಪತ್ರ ಬರೆಯುವುದು. ಆದರೆ A4 ಗಾತ್ರದ ಸಾಮಾನ್ಯ ಕಾಗದದಲ್ಲಿ ಬರೆದು ಮುಗಿಯದು ಈ ಪತ್ರ ಅನಿಸಿತು ಅವರಿಗೆ ಸ್ಟೇಷನರಿ ಅಂಗಡಿಗೆ ಹೋದರೆ ಅಲ್ಲೂ ಬೇಕಾದಷ್ಟು ಕಾಗದ ಸಿಗಲಿಲ್ಲ. ಹೀಗಾಗಿ ಅವರು ಪೇಪರ್‌ ಬಿಲ್‌ನ ೧೫ ರೋಲ್‌ಗಳನ್ನು ಖರೀದಿಸಿದರು. ಪೇಪರ್‌ ಬಿಲ್‌ನ ಒಂದು ರೋಲ್‌ನಲ್ಲಿ ಸುಮಾರು ೩೦ ಮೀಟರ್‌ ಪೇಪರ್‌ ಇರುತ್ತದೆ. ಅಗಲ ಸುಮಾರು ೮೦ ಮಿ.ಮೀ. ಮೇ 25 ರಂದು ಪತ್ರ ಬರೆಯಲು ಆರಂಭಿಸಿದ ಅವರಿಗೆ ಪತ್ರ ಬರೆದು ಮುಗಿಸಲು ೧೨ ಗಂಟೆ ಬೇಕಾಯಿತು.

ಕೃಷ್ಣಪ್ರಿಯಾ ಹಾಗೂ ಕೃಷ್ಣಪ್ರಸಾದ್ ಪ್ರವಾಸ ಹೋದಾಗ

ಪತ್ರದಲ್ಲಿ ಏನಿದೆ?
“ಈ ಪತ್ರದ ಮೂಲಕ ನಿನ್ನ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಲು ನನ್ನ ಹತ್ತಿರ ಪದಗಳಿಲ್ಲ. ಎಲ್ಲೇ ಮಿರಿದ ಪ್ರೀತಿ ನಮ್ಮಿಬ್ಬರದು, ನಿನ್ನಂತಹ ತಮ್ಮನನ್ನು ಪಡೆಯಲು ನಾನು ನಿಜಕ್ಕೂ ಪುಣ್ಯ ಮಾಡಿದ್ದೇನೆ. ದೇವರು ನನಗೆ ನೀಡಿದ ಅತಿ ದೊಡ್ಡ ಗಿಫ್ಟ್‌ ನೀನು. ನಮ್ಮಿಬ್ಬರ ಜೀವನ ಪಯಣದ ನೆನಪುಗಳು ಎಂದೂ ಮರೆಯಲಾಗದಂಥವುಗಳುʼʼ ಎಂದು ಪ್ರೀತಿಯಿಂದ ಬರೆದಿದ್ದಾರೆ ಕೃಷ್ಣಪ್ರಿಯಾ.

ಪತ್ರ ಬರೆಯಲಾ….

“ನೀನು ಜನಿಸಿದ ದಿನ ನನಗೆ ಸಂತೋಷದ ದಿನವಾಗಿತ್ತು, ಅಂದು ನನ್ನ ಖುಷಿಗೆ ಪಾರವೇ ಇರಲಿಲ್ಲ. ಅಮ್ಮ ನಿನ್ನ ನನ್ನ ಮಡಿಲಲ್ಲಿ ಇಟ್ಟಾಗ ನನಗೆ ಇನ್ನೂ ಏಳು ವರ್ಷ ಅಷ್ಟೆ. ಎಷ್ಟು ಚಂದವಿದ್ದಾನೆ ನನ್ನ ಪುಟ್ಟ ಕೃಷ್ಣ ಎಂದಿದ್ದೆ ನಾನು. ನೀನು ನನ್ನ ಸುಂದರ ಲೋಕದ ದೊರೆ ಎಂದು ಮನದಲ್ಲೆ ಅದೆಷ್ಟು ಖುಷಿ ಪಟ್ಟಿದ್ದೆ ಗೊತ್ತಾ? ನಿನ್ನ ಮೊದಲ ತೊದಲು ನುಡಿ, ನಿನ್ನ ಅಂಬೆಗಾಲಿನ ನಡಿಗೆ, ನಿನಗೆ ನಾನು ತಿನ್ನಿಸಿದ ಮೊದಲ ತುತ್ತು, ನಿನಗೆ ನೆನಪಿದೆಯಾ ತಮ್ಮಾ! ನಮ್ಮಿಬ್ಬರ ಹುಟ್ಟುಹಬ್ಬವನ್ನು ನಾವು ಎಷ್ಟು ಬಾರಿ ಒಟ್ಟಿಗೆ ಆಚರಿಸಿದ್ದೇವೆ. ನನ್ನ ಫೇವರಿಟ್‌ ಬಣ್ಣ ನಿನಗೂ ಫೇವರಿಟ್‌ ಆಗಿತ್ತು. ಇಂದಿಗೂ ನಮ್ಮಿಬ್ಬರ ಇಷ್ಟ ಕಷ್ಟಗಳು ಒಂದೇ ಅನ್ನುವುದು ನನಗೆ ಖುಷಿಯ ಸಂಗತಿ”

“ಬೇರೆ ಮಕ್ಕಳಿಗೆ ಹೋಲಿಸಿದರೆ ನೀನು ಸ್ವಲ್ಪ ತಡವಾಗಿ ಮಾತನಾಡಲು ಪ್ರಾರಂಭಿಸಿದ್ದೆ. ಅದಕ್ಕಾಗಿ ನಾನು ದಿನವೂ ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತಿದ್ದೆ. ನನ್ನ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಒಂದು ದಿನ ನೀನು ಮಾತನಾಡಲು ಪ್ರಾರಂಭಿಸಿದ್ದೆ. ಆವತ್ತು ನನ್ನ ಖುಷಿಗೆ ಪಾರವೇ ಇರಲಿಲ್ಲ. ನಿನ್ನನ್ನು ನಾನು ಯಾವತ್ತೂ ಮಗನ ಹಾಗೇ ಕಾಣುತ್ತೇನೆ, ಎಷ್ಟೇ ಬೆಳೆದು ದೊಡ್ಡವನಾದರೂ ನೀನು ನನ್ನ ಪುಟ್ಟ ಕಂದ”.

“ನಾನು ನಿನ್ನ ಅಕ್ಕ, ನಿನಗೆ ಬುದ್ದಿ ಹೇಳುವುದು ನನ್ನ ಕರ್ತವ್ಯ. ತಮ್ಮಾ.. ನಾವಿಬ್ಬರೂ ಅಮ್ಮನ ಆದರ್ಶಗಳನ್ನು ಪಾಲಿಸೋಣ. ಅಮ್ಮನಂತೆ ಸಮಾಜ ಸೇವೆ ಮಾಡೋಣ. ನಿನ್ನ ಮೇಲೆ ನಾವು ಹೆಚ್ಚಿನ ನಿರೀಕ್ಷೆ ಇಟ್ಟಿದ್ದೇವೆ. ಇದು ನಿನಗೆ ನೆನಪಿರಲಿ ತಮ್ಮಾ.. ನಮ್ಮ ಗಳಿಕೆಯ 100 ರೂಪಾಯಿಯಲ್ಲಿ ಕನಿಷ್ಠ 10 ರೂಪಾಯಿ ಆದರೂ ನಾವು ಸಮಾಜಕ್ಕೆ ಕೊಡಬೇಕುʼʼ

ಹೀಗೆ ಬರೆಯುತ್ತಾ ಹೋಗಿದ್ದಾರೆ ಕೃಷ್ಣ ಪ್ರಿಯಾ.

ಕೃಷ್ಣ ಪ್ರಿಯಾಗೆ ಬರೆಯುವುದು ಕಷ್ಟವಾಗಲಿಲ್ಲ. ಯಾಕೆಂದರೆ, ತಮ್ಮ ಬಗ್ಗೆ ಅಷ್ಟು ಪ್ರೀತಿ ಇತ್ತು. ನೆನಪುಗಳು ನುಗ್ಗಿ ನುಗ್ಗಿ ಬರುತ್ತಿತ್ತು. ಆದರೆ, ಕಷ್ಟವಾಗಿದ್ದು ಪೋಸ್ಟ್‌ ಮಾಡುವುದಕ್ಕೆ. ಒಟ್ಟು ೧೫ ರೋಲ್‌ಗಳನ್ನು ಜೋಡಿಸಿದಾಗ ಅದು ೪೩೪ ಮೀಟರ್‌ ಪತ್ರವಾಯಿತು. ಕೃಷ್ಣಪ್ರಿಯಾ ಅದನ್ನು ಸುತ್ತಿ ಒಂದು ಬಾಕ್ಸ್‌ನಲ್ಲಿ ಹಾಕಿ ಟೇಪ್‌ ಮತ್ತು ಗಮ್‌ ಹಾಕಿದರು. ಅಂಚೆ ಕಚೇರಿಗೆ ತೆಗೆದುಕೊಂಡು ಹೋದರೆ ಏನಿದು ಎಂದು ಕೇಳಿದರು. ತೂಕ ಮಾಡಿ ನೋಡಿದರೆ ೫.೨೭ ಕೆಜಿ ಇತ್ತು! ಅನ್ನು ನೋಡಿ ಅಂಚೆ ಕಚೇರಿಯವರೇ ಶಾಕ್‌ ಆದರು. ಆದರೆ, ಅಕ್ಕ-ತಮ್ಮನ ಬಾಂಧವ್ಯದ ಕಥೆ ಕೇಳಿ ಅವರೂ ಗದ್ಗದಿತರರಾದರು. ನಿಮ್ಮ ಪ್ರೀತಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂದು ಹರಸಿದರು.

ಈ ಕಡೆ ಅಂಚೆಯಣ್ಣ ಒಂದು ಬಾಕ್ಸ್‌ ತಂದುಕೊಟ್ಟಾಗ ಕೃಷ್ಣ ಪ್ರಸಾದ್‌ಗೆ ಇದು ಅಕ್ಕ ಕಳುಹಿಸಿದ ಗಿಫ್ಟ್‌ ಇರಬಹುದು ಅನಿಸಿತು. ಆದರೆ, ತೆರೆದು ನೋಡಿದಾಗ ಒಂದು ಕಡೆ ಕಟ್ಟೆಯೊಡೆದ ದುಃಖ. ಇನ್ನೊಂದು ಕಡೆ ಹೇಳಿ ಮುಗಿಯದಷ್ಟು ಸಂತೋಷ! ಪತ್ರವನ್ನು ಮತ್ತೆ ಮತ್ತೆ ಓದಿ ಕಣ್ಣೀರಾದರು ಕೃಷ್ಣ ಪ್ರಸಾದ್‌.

ಈ ನಡುವೆ, ಈ ಸುದೀರ್ಘ ಪತ್ರವನ್ನು ಗಿನ್ನೆಸ್‌ ದಾಖಲೆಗೆ ಕಳುಹಿಸಬಹುದೇ ಎಂದು ಪರಿಶೀಲಿಸಿ ಅರ್ಜಿ ಸಲ್ಲಿಸಿದ್ದಾರೆ. ಅದರ ದೃಢೀಕರಣಕ್ಕಾಗಿ ಕಾಯ್ತಾ ಇದ್ದಾರೆ. ಅಲ್ಲಿ ದಾಖಲಾಗುತ್ತದೋ ಗೊತ್ತಿಲ್ಲ. ಆದರೆ, ಈ ಕಥೆಯನ್ನು ಕೇಳಿದ ಎಲ್ಲರ ಹೃದಯದಲ್ಲಿ ಅಕ್ಕ-ತಮ್ಮನ ಅನುಪಮ ಪ್ರೀತಿ ಮಾತ್ರ ಅಚ್ಚಳಿಯದೆ ದಾಖಲಾಗುತ್ತದೆ.

ಇದನ್ನೂ ಓದಿ: Chandan & Kavitha | ಸಿಹಿ ಸುದ್ದಿ ನೀಡಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ ಮತ್ತು ಕವಿತಾ

Exit mobile version