Site icon Vistara News

ಪರಸ್ಪರ ಒಪ್ಪಿಗೆಯಿಂದ ಜತೆಗಿದ್ದು ಕೊನೆಗೆ ಅತ್ಯಾಚಾರ ಆಯ್ತು ಅಂತ ಆರೋಪ ಮಾಡುವಂತಿಲ್ಲ ಎಂದ ಸುಪ್ರೀಂ

Live in relationship

ನವದೆಹಲಿ: ಮದುವೆ ಮೊದಲಾದ ಯಾವುದೇ ಕಟ್ಟುಪಾಡುಗಳಿಲ್ಲದೆ ದೀರ್ಘ ಕಾಲ ಜತೆಗೇ ವಾಸ ಮಾಡಿ ಬಳಿಕ ಕೊನೆಗೆ ಸಂಬಂಧ ಹದಗೆಟ್ಟಾಗ ಅತ್ಯಾಚಾರ ಪ್ರಕರಣ ದಾಖಲಿಸುವ ವಿದ್ಯಮಾನಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕಬಲ್ಲ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿದೆ.
ಒಬ್ಬ ಮಹಿಳೆ ಪುರುಷನ ಜತೆ ಸಂಬಂಧ ಹೊಂದಿದ್ದು, ಸಂಪೂರ್ಣ ಸಮ್ಮತಿಯೊಂದಿಗೆ ಆತನೊಂದಿಗೆ ಬಾಳುತ್ತಿದ್ದರೆ,  ಕೊನೆಗೆ ಸಂಬಂಧ ಹದಗೆಟ್ಟಿತೆಂದು ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ವಿಕ್ರಮ್‌ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಜತೆಗೆ ಅನ್ಸಾರ್‌ ಮೊಹಮ್ಮದ್‌ ಎಂಬವರ ಮೇಲೆ ಮಹಿಳೆಯೊಬ್ಬರು ಹೊರಿಸಿದ್ದ ಅತ್ಯಾಚಾರ, ಅನೈಸರ್ಗಿಕ ಅತಿಕ್ರಮ ಮತ್ತು ಕ್ರಿಮಿನಲ್‌ ಸಂಚಿನ ಆರೋಪಗಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದೆ.

ದೂರುದಾರರು ಪರಸ್ಪರ ಸಮ್ಮತಿಯಿಂದಲೇ ಅರ್ಜಿದಾರರ ಜತೆಗೆ ವಾಸವಾಗಿದ್ದರು ಮತ್ತು ಅವರ ನಡುವೆ ಸಂಬಂಧವೂ ಇತ್ತು. ಈಗ ಸಂಬಂಧ ಹಳಸಿ ಹೋಗಿದೆ ಎಂಬ ಕಾರಣಕ್ಕೆ, ಅದನ್ನು ಮುಂದಿಟ್ಟುಕೊಂಡು ಐಪಿಸಿ ಸೆಕ್ಷನ್‌ 376(2) ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದ್ದಾಗಿ ವರದಿಯಾಗಿದೆ.

ರಾಜಸ್ಥಾನದಿಂದ ಬಂದಿರುವ ಕೇಸು
ಅನ್ಸಾರ್‌ ಮೊಹಮ್ಮದ್‌ ಮತ್ತು ಮಹಿಳೆಯೊಬ್ಬರ ನಡುವೆ ನಾಲ್ಕು ವರ್ಷಗಳಿಂದ ಸಂಬಂಧವಿತ್ತು. ಸಂಬಂಧ ಶುರುವಾದಾಗ ಮಹಿಳೆಗೆ ೨೧ ವರ್ಷವಾಗಿತ್ತು. ಮದುವೆ ಆಗದಿದ್ದರೂ ಅವರಿಬ್ಬರ ಸಂಬಂಧದಲ್ಲಿ ಹೆಣ್ಣು ಮಗುವೊಂದು ಜನಿಸಿತ್ತು. ಈ ನಡುವೆ ಸಂಬಂಧ ಹಳಸಿತ್ತು. ಹೀಗಾಗಿ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಬಂಧನದ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಜಾಮೀನು ನಿರಾಕರಿಸಿತ್ತು.

ʻʻಮದುವೆಯಾಗುವ ಭರವಸೆ ನೀಡಿ ಮಹಿಳೆ ಜತೆ ಆರೋಪಿ ಸಂಬಂಧ ಹೊಂದಿದ್ದಾರೆ. ಅವರ ಸಂಬಂಧದಿಂದ ಒಂದು ಮಗು ಕೂಡಾ ಹುಟ್ಟಿದೆ. ಹೀಗಾಗಿ ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿರೀಕ್ಷಣಾ ಜಾಮೀನು ಕೊಡಲಾಗದು ಎಂದು ಹೈಕೋರ್ಟ್‌ ಕಳೆದ ಮೇ ೧೯ರ ಆದೇಶದಲ್ಲಿ ತಿಳಿಸಿತ್ತು.

ಈ ನಡುವೆ, ಅನ್ಸಾರ್‌ ಮೊಹಮ್ಮದ್‌ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದರು. ಸರ್ವೋಚ್ಚ ನ್ಯಾಯಾಲಯ ಪ್ರಕರಣದ ಇನ್ನೊಂದು ಮುಖವನ್ನು ಗ್ರಹಿಸಿತು. ಅವರಿಬ್ಬರ ಮದುವೆ ನಾಲ್ಕು ವರ್ಷದಿಂದ ಸಂಬಂಧವಿದೆ. ಸಂಬಂಧ ಆರಂಭವಾದಾಗ ಮಹಿಳೆಗೆ ೨೧ ವರ್ಷವೂ ಆಗಿತ್ತು. ಈಗ ಒಂದು ಮಗುವೂ ಇದೆ. ಹಾಗಿರುವಾಗ ಆಕೆ ಸರ್ವ ಸಮ್ಮತಿಯಿಂದಲೇ ಸಂಬಂಧವನ್ನು ಹೊಂದಿರುವುದರಿಂದ ಇದನ್ನು ಅತ್ಯಾಚಾರ ಪ್ರಕರಣವೆಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರವನ್ನಷ್ಟೇ ಪರಿಗಣಿಸಲಾಗಿದೆ. ಮುಂದಿನ ವಿಚಾರಗಳು ತನಿಖೆಯಾಗಲಿ ಎಂದು ಅಭಿಪ್ರಾಯಪಟ್ಟಿದೆ ಸುಪ್ರೀಂಕೋರ್ಟ್‌.
ಇದನ್ನೂ ಓದಿ| Sex work legal: ವೇಶ್ಯೆಯರನ್ನು ಬಂಧಿಸುವಂತಿಲ್ಲ, ದಂಡ ವಿಧಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್

Exit mobile version