ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಡ್ಸ್ ಎಂಬುದರ ಬಗ್ಗೆ ಸಮಾಜದಲ್ಲಿ ಭಯಭೀತ ವಾತಾವರಣ ಇತ್ತು. ಆದರೆ ಇಂದು ಅದು ಕಡಿಮೆಯಾಗಿದೆ. ಇದನ್ನು ಹೇಗೆ ತಡೆಗಟ್ಟುವುದು, ಪರಿಹಾರಗಳೇನು ಎಂಬ ಅರಿವು ಮೂಡಿದೆ. ಆದರೂ ಆರೋಗ್ಯದ, ಎಚ್ಚರಿಕೆಯ ಮಾತುಗಳನ್ನು ಹೇಳುತ್ತಲೇ ಇರಬೇಕಾಗುತ್ತದೆ. ಇಂದು ವಿಶ್ವ ಏಡ್ಸ್ ದಿನ (World AIDS Day 2023). ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನ ಇತಿಹಾಸದಲ್ಲೇ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿರುವ ಏಡ್ಸ್ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬಲು ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ವಿಶ್ವ ಏಡ್ಸ್ ದಿನ.
ಯಾವಾಗ ಕಂಡುಬಂತು?
ಏಡ್ಸ್ ಸೋಂಕನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್‌ಗೆ ಕಾರಣವಾದ ವೈರಸ್ ಹೆಚ್‌ಐವಿ ಮೊಟ್ಟಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. ಇಲ್ಲಿಯವರೆಗೂ ಸುಮಾರು 3.5 ಕೋಟಿಗಿಂತಲೂ ಹೆಚ್ಚು ಜನರು ಹೆಚ್‌ಐವಿ ಅಥವಾ ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಡಿಸೆಂಬರ್ 1, 1988ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಏಡ್ಸ್ ದಿನವನ್ನು ಆಚರಿಸಲು ನಿರ್ಧರಿಸಿತು.
ಹೆಚ್‌ಐವಿ / ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದು, ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಹೆಚ್‌ಐವಿ ಸೋಂಕಿತರಾಗಿರುವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ಹಾಗೂ ಹೆಚ್‌ಐವಿ ಏಡ್ಸ್ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರತೀ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ರೋಗವನ್ನು ತಡೆಯುವ ಏಕೈಕ ಮಾರ್ಗವೆಂದರೆ ಜಾಗೃತಿ ಮಾತ್ರ. ಆರಂಭದಲ್ಲಿ ವಿಶ್ವ ಏಡ್ಸ್ ದಿನವು ಕುಟುಂಬಗಳ ಮೇಲೆ ಏಡ್ಸ್ ಪ್ರಭಾವದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತರಲು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. 1996ರಿಂದ, ವಿಶ್ವ ಏಡ್ಸ್ ದಿನದ ಕಾರ್ಯಾಚರಣೆಗಳನ್ನು ಕುರಿತು ಜಂಟಿ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಮಹಿಳಾ ಮತ್ತು ಬಾಲಕಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ವಿಶ್ವ ಏಡ್ಸ್ ದಿನ ಆಚರಣೆಯಂದು ಏಡ್ಸ್ / ಹೆಚ್‌ಐವಿ ಸೋಂಕಿನ ಕುರಿತು ಅರಿವು ಮೂಡಿಸುವುದು. ಮತ್ತು ಇದರಿಂದ ಹೇಗೆ ರಕ್ಷಣೆ ಪಡೆಯುವುದು, ಸುರಕ್ಷಿತವಾಗಿರಬೇಕು ಎನ್ನುವುದನ್ನ ತಿಳಿಸಿಕೊಡುವುದು. ಜಾಗೃತಿ ವಿರುದ್ಧದ ಹೋರಾಟವನ್ನು ಮತ್ತು ಹೆಚ್‌ಐವಿ / ಏಡ್ಸ್‌ನ ಸುತ್ತ ಸುತ್ತುವ ಶಿಕ್ಷಣವನ್ನು ಸುಧಾರಿಸಲು ಅವಶ್ಯಕತೆಯಿದೆ ಎಂದು ಸಾರ್ವಜನಿಕರಿಗೆ ನೆನಪಿಸುವುದು. ವಿಶ್ವಾದ್ಯಂತ ಹೆಚ್‌ಐವಿ ಜತೆ ವಾಸಿಸುವ ಲಕ್ಷಾಂತರ ಜನರೊಂದಿಗೆ ಒಗ್ಗಟ್ಟನ್ನು ತೋರಿಸಲು ಒಂದು ಅವಕಾಶವಾಗಿದೆ. ಈ ದಿನದಂದು ಹೆಚ್ಚಿನ ಜನರು ಕೆಂಪು ರಿಬ್ಬನ್ ಧರಿಸಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಯಾವುದರಿಂದ ಬರುತ್ತದೆ?
- ಲೈಂಗಿಕ ಸಂಪರ್ಕದಿಂದ.
- ಎಚ್ಐಪಿ ಪೀಡಿತರಿಂದ ರಕ್ತ ಪಡೆಯುವುದರಿಂದ.
ಯಾವುದರಿಂದ ಬರುವುದಿಲ್ಲ?
- ಮುತ್ತು ಕೊಡುವುದರಿಂದ.
- ರೋಗಿಗಳು ಬಳಸಿದ ಪಾತ್ರೆ ತೊಳೆಯುವುದು.
- ರೋಗಿಗಳು ಬಳಸಿದ ಟಾಯ್ಲೆಟ್ ಸೀಟ್ ಬಳಸುವುದು.
- ರೋಗಿಗಳು ಮಾಡಿದ ಅಡುಗೆ ಸೇವನೆಯಿಂದ
- ಕೀಟಗಳ ಕಡಿತದಿಂದ
ಇದನ್ನೂ ಓದಿ: World Aids Day 2022 | ಏಡ್ಸ್ ಸುತ್ತ ಭಾವುಕ ಸಂದೇಶ ಸಾರಿದ ಬಾಲಿವುಡ್ ಚಿತ್ರಗಳಿವು