Site icon Vistara News

World AIDS Day | ಏಡ್ಸ್‌ಗಾಗಿ ಕೆಂಪು ರಿಬ್ಬನ್, ಯಾಕಾಗಿ ಬಂತು, ಏನ್ ಈ ಸಂಕೇತ?

World AIDS Day @ Red Ribbon

ಡಿಸೆಂಬರ್‌ ತಿಂಗಳ ಮೊದಲ ದಿನವನ್ನು ವಿಶ್ವದೆಲ್ಲೆಡೆ ಏಡ್ಸ್‌ (World AIDS Day) ದಿನವನ್ನಾಗಿ ಗುರುತಿಸಲಾಗುತ್ತದೆ. ಎಚ್‌ಐವಿ ಮತ್ತು ಏಡ್ಸ್‌ ರೋಗದ ಬಗ್ಗೆ, ರೋಗಿಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂಬುದು ಇಂದಿಗೂ ನಿರ್ವಿವಾದ. ಆದರೆ ಇದಕ್ಕಾಗಿ ಬಳಸಲಾಗುವ ಕೆಂಪು ರಿಬ್ಬನ್‌ ಏನನ್ನು ಸೂಚಿಸುತ್ತದೆ? ಏಕಾಗಿ ಬಳಕೆಗೆ ಬಂತು ಎಂಬ ಮಾಹಿತಿ ಇಲ್ಲಿದೆ.

ಏಡ್ಸ್‌ ಜೊತೆಗೆ ಬದುಕುತ್ತಿರುವವರಿಗೆ ಬೆಂಬಲ ನೀಡಲು ಮತ್ತು ಈ ರೋಗದಿಂದ ಮೃತಪಟ್ಟವರ ನೆನಪಿಗಾಗಿ ಕೆಂಪು ರಿಬ್ಬನ್‌ ಬಳಸಲಾಗುತ್ತದೆ. ಇದೊಂದು ಅಂತಾರಾಷ್ಟ್ರೀಯವಾಗಿ ಬಳಸಲಾಗುತ್ತಿರುವ ಚಿಹ್ನೆ. ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಗುಲಾಬಿ ರಿಬ್ಬನ್‌ ಬಳಕೆಯಾಗುತ್ತಿರುವಂತೆಯೇ ಇದೂ ಸಹ ಬಳಕೆಯಲ್ಲಿದೆ. ಅಮೆರಿಕದಲ್ಲಿ ಕೆಲವು ಕಲಾವಿದರು ೧೯೮೮ರಲ್ಲಿ ವಿಶುವಲ್‌ ಏಡ್ಸ್‌ (Visual AIDS) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಕಲಾವಿದ ವರ್ಗವನ್ನು ಏಡ್ಸ್‌ ಬಾಧಿಸುತ್ತಿರುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿತ್ತು. ಇದೇ ಮುಂದುವರಿದು, ಕಲಾವಿದರು ಮಾತ್ರವಲ್ಲದೆ ಏಡ್ಸ್‌ ರೋಗಿಗಳು ಮತ್ತು ಅವರ ಶುಶ್ರೂಷಕರನ್ನು ಬೆಂಬಲಿಸುವ ಬಗ್ಗೆ ಒಂದು ಚಿಹ್ನೆಯನ್ನು ರೂಪಿಸಬೇಕೆಂದು ೧೯೯೧ರಲ್ಲಿ ಈ ಸಂಸ್ಥೆಯ ಕಲಾವಿದರು ಉದ್ದೇಶಿಸಿದರು. ಕೊಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಯೋಧರ ಬೆಂಬಲವಾಗಿ ರೂಪಿಸಿದ್ದ ಹಳದಿ ರಿಬ್ಬನ್‌ ಮಾದರಿಯಲ್ಲೇ ಇದನ್ನೂ ರೂಪಿಸಲು ನಿರ್ಧರಿಸಲಾಯಿತು. ರಕ್ತ, ಪ್ರೀತಿ, ಪ್ರೇಮ ಎಂಬಂಥ ವಿಷಯಗಳನ್ನು ಮುಖ್ಯವಾಗಿ ಇರಿಸಿಕೊಂಡು, ಈ ರಿಬ್ಬನ್‌ ಗೆ ಕೆಂಪು ಬಣ್ಣವನ್ನು ನೀಡಲಾಯಿತು. ಇದೇ ಹಿನ್ನೆಲೆಯಲ್ಲಿ ಇಡೀ ಯೋಜನೆಗೆ ರೆಡ್‌ ರಿಬ್ಬನ್‌ ಪ್ರೊಜೆಕ್ಟ್‌ ಎಂದು ಹೆಸರಿಡಲಾಗಿತ್ತು.

ಅದೇ ವರ್ಷ ಅಮೆರಿಕದ ಟೋನಿ ಅವಾರ್ಡ್‌ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲಾ ಅತಿಥಿಗಳಿಗೆ ಕೆಂಪು ರಿಬ್ಬನ್‌ ಉಡುಗೊರೆಯಾಗಿ ನೀಡಲು ಈ ಯೋಜನೆಯ ಸ್ವಯಂಸೇವಕರು ನಿರ್ಧರಿಸಿದರು. ಜೆರೆಮಿ ಐರನ್ಸ್‌ ಆದಿಯಾಗಿ ಹಲವು ಪ್ರಮುಖ ತಾರೆಯರು ರೆಡ್‌ ರಿಬ್ಬನ್‌ ಧರಿಸಿ ಜಾಗೃತಿ ಮೂಡಿಸಲು ಯತ್ನಿಸಿದ್ದರು. ೧೯೯೨ರಲ್ಲಿ ಈ ಚಿಹ್ನೆ ಯುರೋಪ್‌ ದೇಶಗಳಲ್ಲೂ ಪರಿಚಿತಗೊಳ್ಳತೊಡಗಿತು. ೯೦ರ ದಶಕದ ಅಂತ್ಯದಲ್ಲಿ ಈ ಬಗ್ಗೆ ಅರಿವಿನ ಮಾತು ಮತ್ತು ಚರ್ಚೆ ಇನ್ನಷ್ಟು ಹೆಚ್ಚಿ, ರಾಜಕುಮಾರಿ ಡಯಾನ ಸಹ ಕೆಂಪು ರಿಬ್ಬನ್‌ ಧರಿಸಿ ತಮ್ಮ ಬೆಂಬಲ ಸೂಚಿಸಿದ್ದರು. ಇದೀಗ ಎಲ್ಲೆಡೆ ಏಡ್ಸ್‌ ಕುರಿತ ಅರಿವು ಮತ್ತು ಜಾಗೃತಿ ಕೆಲಸಗಳಿಗೆ ಕೆಂಪು ರಿಬ್ಬನ್‌ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ಇದನ್ನೂ ಓದಿ | Blood Donors Day 2022: ಯಾರ್ಯಾರು ರಕ್ತದಾನ ಮಾಡಬಾರದು?

Exit mobile version