Site icon Vistara News

World Brain Tumor Day: ಬ್ರೇನ್ ಟ್ಯೂಮರ್ ಬೇನೆ ಬಾಧಿಸುವ ಮುನ್ನವೇ ಎಚ್ಚರಗೊಳ್ಳಿ! ಲಕ್ಷಣಗಳೇನು? ಚಿಕಿತ್ಸೆ ಹೇಗೆ?

World Brain Tumour day

ಮೆದುಳಿನಲ್ಲಿ ಅಷ್ಟಾಗಿ ಸಕ್ರಿಯವಲ್ಲದ ಭಾಗಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡರೆ, ಹೆಚ್ಚಿನ ಲಕ್ಷಣಗಳು ಕಾಣಿಸುವಷ್ಟರಲ್ಲಿ ಗಡ್ಡೆಗಳು ಬಹಳಷ್ಟು ಬೆಳೆದಿರಬಹುದು. ಆದರೆ ಸಕ್ರಿಯ ಭಾಗಗಳಲ್ಲಿ ಗಂಟುಗಳು ಮೂಡಿದರೆ ಅಥವಾ ಅವು ಕ್ಯಾನ್ಸರ್‌ಕಾರಕ ಆಗಿದ್ದರೆ ಆಗ ಲಕ್ಷಣಗಳು ಶೀಘ್ರವೇ ಗೋಚರಿಸಲು ಸಾಧ್ಯವಿದೆ. ಜೊತೆಗೆ, ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ (World Brain Tumour Day) ಉಂಟಾಗಿದೆ ಎಂಬುದರ ಮೇಲೆ ಲಕ್ಷಣಗಳು ಕೊಂಚ ಭಿನ್ನವಾಗುವ ಸಾಧ್ಯತೆಯೂ ಇದೆ. ಮೆದುಳಿನ ಒಳಗೆ ಅಥವಾ ಹೊರಗಿನ ಕೋಶಗಳ ಮೇಲೆಯೂ ಈ ಬೇಡದ ಗಂಟುಗಳು ಗಂಟಿಕ್ಕಿಕೊಳ್ಳಲು ಸಾಕು. ಆನಂತರ ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವ ಇವನ್ನು ಮೆಟಾಸ್ಟಾಟಿಕ್‌ ಬ್ರೇನ್‌ ಟ್ಯೂಮರ್‌ ಎನ್ನಲಾಗುತ್ತದೆ. ಈ ಎಲ್ಲವುಗಳ ಬಗ್ಗೆ ಇನ್ನಷ್ಟು ಮಾಹಿತಿಯಿದು

ಬ್ರೇನ್ ಟ್ಯೂಮರ್ ಲಕ್ಷಣಗಳೇನು?

ಮೊದಲಿಗೆ ಕಾಣಿಸಿಕೊಳ್ಳುವುದು ತಲೆನೋವು. ಹಾಗೆಂದು ತಲೆನೋವು ಬಂದಾಕ್ಷಣ ಮೆದುಳಿಗೇನೋ ಆಗಿದೆ (World Brain Tumour Day) ಎಂದು ಹೌಹಾರುವುದಲ್ಲ. ಸೌಮ್ಯವಾಗಿ ಪ್ರಾರಂಭವಾಗುವ ನೋವು ಕ್ರಮೇಣ ತೀಕ್ಷ್ಣವಾಗಬಹುದು. ಜೊತೆಗೆ ಹೊಟ್ಟೆ ತೊಳೆಸುವುದು, ವಾಂತಿ, ತಲೆ ಸುತ್ತುವುದು, ದೃಷ್ಟಿ ಮಸುಕಾಗುವಂಥ ಸೂಚನೆಗಳು ತೋರಬಹುದು. ಅದಲ್ಲದೆ, ಸ್ಮೃತಿ ತಪ್ಪುವುದು, ಫಿಟ್ಸ್‌ ಬರುವುದು, ತನ್ನಷ್ಟಕ್ಕೇ ಕೈ-ಕಾಲುಗಳಲ್ಲಿ ಚಲನೆ- ಇಂಥವು ಕಂಡರೆ ನರರೋಗ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಇವು ಮಾತ್ರವಲ್ಲ, ದೃಷ್ಟಿಗೆ ಇದ್ದಕ್ಕಿದ್ದಂತೆ ಬೆಳಕು ಗೋಚರಿಸುವುದು, ಎದುರಿನ ವಸ್ತು ಸರಿಯಾಗಿ ಗೋಚರಿಸದಿರುವುದು ಅಥವಾ ಒಂದಿದ್ದಿದ್ದು ಎರಡಾಗಿ ಕಾಣುವುದು ಸಹ ವೈದ್ಯರನ್ನು ಕಾಣಬೇಕು ಎಂಬುದರ ಸೂಚನೆಗಳು.

ಅಕಾರಣವಾಗಿ ಪದೇಪದೆ ಕಾಡುವ ಹೊಟ್ಟೆಯ ಸಂಕಟಗಳು, ವಾಂತಿಗಳ ಬಗ್ಗೆಯೂ ಎಚ್ಚರ ಬೇಕು. ಈ ಹೊಟ್ಟೆಯ ಸಮಸ್ಯೆಗಳು ಉಳಿದಂತೆ ಜೀರ್ಣಾಂಗದ ತೊಂದರೆಗಳಿಗೆ ಸಂಬಂಧ ಪಡದೆಯೇ ಕಾಣಿಸಿಕೊಂಡರೆ, ದೇಹದ ಸಮತೋಲನ ತಪ್ಪುತ್ತಿದ್ದು, ನಡೆಯಲು ಕಷ್ಟವಾಗಿ, ಬೀಳುವುದು, ಆಗಾಗ ಎಡವುವುದು ಆಗುತ್ತಿದ್ದರೆ ಅದೂ ಸಹ ಮುನ್ಸೂಚನೆಗಳಾಗಬಹುದು. ಇದಲ್ಲದೆ, ಕೈ, ತೋಳು, ಕಾಲು ಮತ್ತು ಮುಖದ ಒಂದು ಭಾಗದಲ್ಲಿ ಮರಗಟ್ಟಿದಂತಾಗುವುದು, ದುರ್ಬಲ ಎನಿಸುವುದೂ ಸಹ ಟ್ಯೂಮರ್‌ ಸಂಕೇತಗಳಾಗಿರಬಹುದು. ಈ ಯಾವುದೇ ಲಕ್ಷಣಗಳು ದೇಹದಲ್ಲಿ ಬೇರೆ ಸಮಸ್ಯೆಗಳು ಇದ್ದಾಗಲೂ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ವೈದ್ಯರಲ್ಲಿ ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ.

ಬ್ರೇನ್ ಟ್ಯೂಮರ್ ಬಗ್ಗೆ ತಿಳಿಯುವುದು ಹೇಗೆ?

ಮೊದಲಿಗೆ ನರಗಳ ಕಾರ್ಯಚಟುವಟಿಕೆಯನ್ನು ಕುರಿತಂತೆ ವೈದ್ಯರು ವಿವರವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಕಣ್ಣುಗಳ ಪರೀಕ್ಷೆಯನ್ನೂ ನಡೆಸುತ್ತಾರೆ. ತಲೆಯೊಳಗೆ ಒತ್ತಡ ಹೆಚ್ಚಿದರೆ ಅದು ಕಣ್ಣಿನ ನರಗಳ ಮೇಲೂ ಪರಿಣಾಮ ತೋರಿಸುತ್ತದೆ. ಈ ಪ್ರಾಥಮಿಕ ಪರೀಕ್ಷೆಗಳ ನಂತರ ಅಗತ್ಯ ಎನಿಸಿದರೆ ಹೆಚ್ಚಿನ ಪರೀಕ್ಷೆಗಳಿಗೆ, ಅಂದರೆ ಸ್ಕ್ಯಾನ್‌ ಅಥವಾ ಎಂಆರ್‌ಐಯಂಥ ಪರೀಕ್ಷೆಗಳನ್ನು ವೈದ್ಯರು ಸೂಚಿಸಬಹುದು.

ಈ ಕಾಯಿಲೆಗೆ ಕಾರಣಗಳೇನು?

ಈ ಸಮಸ್ಯೆ ಇರುವ ಶೇ. 10ರಷ್ಟು ಮಂದಿಗೆ ಆನುವಂಶಿಕ ಬಳುವಳಿಯಾಗಿರುತ್ತದೆ. ಒಂದು ಕುಟುಂಬದಲ್ಲಿ ಹಲವರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದರೆ ಜೆನೆಟಿಕ್‌ ಕೌನ್ಸೆಲ್ಲಿಂಗ್‌ ಅಗತ್ಯವಾಗುತ್ತದೆ. ಇದಲ್ಲದೆ, ಅತಿಯಾಗಿ ವಿಕಿರಣಗಳಿಗೆ ಒಡ್ಡಿಕೊಳ್ಳುವುದು, ಮಿತಿಮೀರಿದ ಮೊಬೈಲ್‌ ಬಳಕೆ, ಹಾನಿಕಾರಕ ರಾಸಾಯನಿಕಗಳು ಅಥವಾ ವಾತಾವರಣದಲ್ಲಿರುವ ಅಪಾಯಕಾರಿ ಅಂಶಗಳೂ ಇದಕ್ಕೆ ಮೂಲವಾಗಬಹುದು.

ಈ ಸುದ್ದಿಯನ್ನೂ ಓದಿ: Health tips | ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್‌ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ

ಬ್ರೇನ್ ಟ್ಯೂಮರ್‌ಗೆ ಇದೆಯಾ ಚಿಕಿತ್ಸೆ?

ಈ ಸಮಸ್ಯೆ ಎಷ್ಟು ಬೇಗ ಪತ್ತೆಯಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಬಹುದು. ಟ್ಯೂಮರ್‌ ಮೆದುಳಿನ ಯಾವ ಭಾಗದಲ್ಲಿದೆ, ಎಂಥಾ ಟ್ಯೂಮರ್‌, ಎಷ್ಟು ದೊಡ್ಡದಿದೆ ಮತ್ತು ಆ ವ್ಯಕ್ತಿಯ ಆರೋಗ್ಯ ಉಳಿದಂತೆ ಹೇಗಿದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.

ಆರೋಗ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version