Site icon Vistara News

World Hypertension Day 2023: ರಕ್ತದೊತ್ತಡ ಹತೋಟಿಯೇ ದೀರ್ಘಾಯಸ್ಸಿನ ಗುಟ್ಟು

World Hypertension Day 2023

ಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ನಿಗದಿತ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುತ್ತಿದ್ದರೆ ಅದನ್ನು ರಕ್ತದ ಏರೊತ್ತಡ ಅಥವಾ ಬಿಪಿ ಎಂದು ಕರೆಯಲಾಗುತ್ತದೆ. ಇಂದಿನ ಜೀವನಶೈಲಿಯಲ್ಲಿ ವಯಸ್ಸು, ಲಿಂಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಯಾರೆಂದ್ರೆ ಯಾರನ್ನೂ ಕಾಡಬಹುದಾದ ಸಮಸ್ಯೆಯಿದು. ಕೇವಲ ರಕ್ತದ ಏರೊತ್ತಡ ಎಂಬುದರಿಂದ ಆರಂಭವಾಗುವ ಸಮಸ್ಯೆಯು ಕ್ರಮೇಣ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಜನರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಮೇ ತಿಂಗಳ 17ನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನ (World Hypertension Day) ಎಂದು ಗುರುತಿಸಲಾಗಿದೆ. ಈ ವರ್ಷದ ಘೋಷ ವಾಕ್ಯ- ನಿಮ್ಮ ರಕ್ತದೊತ್ತಡವನ್ನು ಸರಿಯಾಗಿ ಅಳೆಯಿರಿ ಮತ್ತು ದೀರ್ಘಾಯಸ್ಸಿಗಾಗಿ ಅದನ್ನು ಹತೋಟಿಯಲ್ಲಿಡಿ (Measure your blood pressure accurately and control it for a longer life). ಮೊದಲಿಗೆ, 2005ರಲ್ಲಿ ಮೇ 17ರಂದು ಈ ದಿನವನ್ನು (World Hypertension Day 2023) ಆಚರಿಸಲಾಗಿದ್ದರೂ, ಮರುವರ್ಷದಿಂದ ಮೇ 17 ಅನ್ನು ಜಾಗೃತಿ ದಿನವೆಂದು ಗುರುತಿಸಲಾಗಿದೆ.

ವಿಶ್ವದೆಲ್ಲೆಡೆ 178 ಕೋಟಿಗೂ ಹೆಚ್ಚಿನ ಮಂದಿ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅವರಲ್ಲಿ ಶೇ.66ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ವರದಿ. ಮೊದಲಿಗೆ ತನ್ನ ಇರುವಿಕೆಯನ್ನು ಅಷ್ಟಾಗಿ ಪ್ರಕಟಿಸದ ರಕ್ತದ ಏರೊತ್ತಡದ ಸಮಸ್ಯೆಯು, 180/120 ರ ಆಜೂಬಾಜು ಬಿಪಿ ತಲುಪುತ್ತಿದ್ದಂತೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಸಾಮಾನ್ಯವಾಗಿ- ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಒಂದು ಅಂದಾಜಿನ ಪ್ರಕಾರ, ಸುಮಾರು ಶೇ. ೪೬ರಷ್ಟು ಮಂದಿಗೆ ತಮಗೆ ರಕ್ತದೊತ್ತಡ ಇರುವ ವಿಷಯವೇ ತಿಳಿದಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಈ ಸಮಸ್ಯೆ ಹಾಗೆ ದಿನ ಬೆಳಗಾಗುವುದರಲ್ಲಿ ಎದುರಾಗುವಂಥದ್ದಲ್ಲ. ದೀರ್ಘಕಾಲದವರೆಗೆ ಅನಾರೋಗ್ಯಕರ ಆಹಾರ, ವ್ಯಾಯಾಮ ರಹಿತ ಜಡ ಜೀವನ, ಒತ್ತಡದ ಬದುಕು, ಬೊಜ್ಜು, ಮಧುಮೇಹ- ಇಂಥ ಹಲವಾರು ಕಾರಣಗಳಿಂದ ರಕ್ತದ ಒತ್ತಡ ಏರುಪೇರಾಗಬಹುದು.

World Hypertension Day 2023: ರಕ್ತದೊತ್ತಡ ನಿಯಂತ್ರಣಕ್ಕೆ ಏನು ಮಾಡಬಹುದು?

ಮುಖ್ಯವಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲೇಬೇಕಾಗುತ್ತದೆ. ಮೊದಲಿಗೆ ಆಹಾರದಲ್ಲಿ ನೋಡುವುದಾದರೆ, ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಅಗತ್ಯ. ದಿನಕ್ಕೆ ಗರಿಷ್ಠ ಎರಡು ಗ್ರಾಂ ಉಪ್ಪನ್ನಷ್ಟೆ ಸೇವಿಸಬಹುದು ಎನ್ನುತ್ತವೆ ಅಧ್ಯಯನಗಳು. ಉಪ್ಪು ಹಾಕಿ ಹುರಿದ ತಿನಿಸುಗಳು, ಉಪ್ಪಿನಕಾಯಿ, ಪ್ಯಾಕೆಟ್ ನಲ್ಲಿರುವ ಚಿಪ್ಸ್ ಮುಂತಾದವು ಬಾಯಿಗೆ ರುಚಿ ಎಂಬುದು ನಿಜವಾದರೂ ಆರೋಗ್ಯಕ್ಕೆ ಮಾರಕ.

ನಿತ್ಯ ತಿನ್ನುವ ಕೊಬ್ಬಿನ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಗಮನ ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳ ಬದಲಿಗೆ ಆರೋಗ್ಯಕರ ಕೊಬ್ಬಿರುವ ಎಣ್ಣೆ ಬೀಜಗಳು, ಅವಕಾಡೊ ಮುಂತಾದವು ದೇಹಕ್ಕೆ ಹಿತವಾಗುತ್ತವೆ. ಬಳಸುವ ಎಣ್ಣೆಯ ಬಗ್ಗೆಯೂ ಸರಿಯಾದ ಅರಿವು ಅಗತ್ಯ. ಕರಿದ ತಿಂಡಿಗಳನ್ನು ದೂರ ಮಾಡಿದಷ್ಟೂ ಒಳ್ಳೆಯದು. ಬದಲಿಗೆ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ವ್ಯಾಯಾಮದ ಬಗ್ಗೆ ಗಮನ ನೀಡಲೇಬೇಕು. ಅವರವರ ಪ್ರಾಯಕ್ಕೆ ತಕ್ಕಂತೆ ವಾಕಿಂಗ್, ಈಜು, ಸೈಕಲ್ ಹೊಡೆಯುವುದು, ನೃತ್ಯ, ಯೋಗ- ಹೀಗೆ ಯಾವುದೂ ಆದೀತು. ಆದರೆ ದಿನಕ್ಕೆ 40 ನಿಮಿಷಗಳ ದೈಹಿಕ ಚಟುವಟಿಕೆ ಕಡ್ಡಾಯವಾಗಿ ಬೇಕು. ದೇಹದ ತೂಕ ಹೆಚ್ಚಿದ್ದರೆ ಅದನ್ನು ಇಳಿಸಿಕೊಳ್ಳುವುದು ಹಲವು ರೀತಿಯ ಉಪಯೋಗಗಳನ್ನು ತರುತ್ತದೆ.

ಇದನ್ನೂ ಓದಿ: Best Fruit For Controlling Blood Pressure: ರಕ್ತದೊತ್ತಡ ಹತೋಟಿಗೆ ಈ ಹಣ್ಣುಗಳು ಸೂಕ್ತ

ಸಿಗರೇಟ್ ಮತ್ತು ಆಲ್ಕೋಹಾಲ್ ಚಟಗಳು ಆರೋಗ್ಯದ ಏರುಪೇರಿಗೆ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತವೆ. ಈ ಚಟಗಳನ್ನು ಬಿಟ್ಹಾಕಿ. ಬದಲಿಗೆ, ಬದುಕಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಮಾರ್ಗಗಳತ್ತ ಮನಸ್ಸು ಮಾಡಿ. ಕಾಲಕಾಲಕ್ಕೆ ರಕ್ತದೊತ್ತಡ ಪರೀಕ್ಷಿಸಿಕೊಂಡು, ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ನಿಯಂತ್ರಣಕ್ಕೆ ಔಷಧಿಯ ಅಗತ್ಯವಿದ್ದರೆ ಆಗಾಗ ವೈದ್ಯರನ್ನು ಕಾಣಲೇಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version