ಇಂದು ವಿಶ್ವ ಪಾರ್ಕಿನ್ಸನ್ಸ್ ರೋಗದ ಜಾಗೃತಿ ದಿನ(World Parkinson’s Disease Day). ಆರಂಭವಾದ ಮೇಲೆ ವರ್ಧಿಸುತ್ತಲೇ ಹೋಗುವ ಈ ನರರೋಗದ ಲಕ್ಷಣಗಳನ್ನು ಗುರುತಿಸಿ, ರೋಗಿಯ ಬದುಕು ಸುಲಭವಾಗುವಂಥ ಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸುವ ಮತ್ತು ಗಮನ ಸೆಳೆಯುವ ಕೆಲಸವೂ ಆಗಬೇಕಿದೆ. ಚಿಕಿತ್ಸೆಯೇ ಇಲ್ಲದ ರೋಗವಿದು ಎನ್ನುವ ದಿನಗಳಿಂದ ಹಿಡಿದು ಈವರೆಗೆ ದೀರ್ಘ ದಾರಿಯನ್ನು ಈ ರೋಗ ನಿಯಂತ್ರಣದ ಕ್ರಮಗಳು ಕ್ರಮಿಸಿ ಬಂದಿವೆ. ಏನು ರೋಗವಿದು? ಬಂದರೆ ಏನಾಗುತ್ತದೆ? ಇದಕ್ಕೇನು ಚಿಕಿತ್ಸೆ ಎಂಬಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಇದೊಂದು ಗುಣವಾಗದ ನರರೋಗ. ದೇಹದ ನ್ಯೂರಾನ್‌ಗಳು ನಿಧಾನಕ್ಕೆ ತಮ್ಮಷ್ಟಕ್ಕೇ ಸಾಯಲು ಆರಂಭಿಸುವುದರಿಂದ ಈ ರೋಗ ಅಮರಿಕೊಳ್ಳುತ್ತದೆ. ದೇಹದಲ್ಲಿ ಡೋಪಮಿನ್ ಚೋದಕವನ್ನು ಸೃಜಿಸುವ ನರಕೋಶಗಳು ನಶಿಸಲು ಆರಂಭಿಸುತ್ತೆ. ಆನುವಂಶಿಕವಾಗಿ ಈ ರೋಗ ಬರುವುದಿಲ್ಲ ಎಂದು ಮೊದಲಿಗೆ ಭಾವಿಸಿದ್ದರೂ, ಬಹಳಷ್ಟು ಪ್ರಕರಣಗಳಲ್ಲಿ ಆನುವಂಶಿಕತೆ ಕಂಡುಬಂದಿದೆ. ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದ ಪಾರ್ಕಿನ್ಸನ್ಸ್ ಲಕ್ಷಣಗಳು ಉಂಟಾಗಿವೆ. ಇನ್ನು ಕೆಲವೊಮ್ಮೆ ಈ ರೋಗ ಬಂದಿದ್ದೇಕೆ ಎಂಬುದೇ ಪತ್ತೆಯಾಗುವುದಿಲ್ಲ.
ಪಾರ್ಕಿನ್ಸನ್ಸ್ ರೋಗಿಗೆ ಏನಾಗುತ್ತದೆ?
ಆರಂಭಿಕ ಲಕ್ಷಣಗಳು ತೀವ್ರವಾಗೇನೂ ಇರದಿದ್ದರೂ, ಕ್ರಮೇಣ ಉಲ್ಭಣಿಸುತ್ತದೆ. ದೇಹದ ಅಂಗಾಗಗಳಲ್ಲಿ ಪೆಡಸುತನ, ಕೈ, ತಲೆ ಹಾಗೂ ದೇಹದ ಇತರ ಭಾಗಗಳಲ್ಲಿ ಅಯಾಚಿತವಾದ ನಡುಕ, ನಿರ್ಭಾವುಕ ಮುಖ, ಬರೆಯುವುದು ಮತ್ತು ತಿನ್ನುವಂಥ ನಿತ್ಯದ ಕೆಲಸಗಳಲ್ಲಿ ತೊಂದರೆ, ನಡಿಗೆ ನಿಧಾನವಾಗುವುದು, ಮರೆವು, ದೇಹದ ಮೇಲಿನ ನಿಯಂತ್ರಣ ತಪ್ಪಿ ಬೀಳುವುದು, ಗಾಯಗೊಳ್ಳುವುದು ಮುಂತಾದವು ಮೇಲ್ನೋಟಕ್ಕೆ ತಿಳಿಯಬಹುದಾದ ಲಕ್ಷಣಗಳು. ಆದರೆ ದೇಹದೊಳಗೆ ಆಗುವ ಬದಲಾವಣೆಗಳು ಬಹಳಷ್ಟು. ಮೆದುಳಿನ ಕ್ಷಮತೆ ಕುಗ್ಗುತ್ತದೆ, ಆತಂಕ, ಖಿನ್ನತೆಯ ಸಮಸ್ಯೆಗಳು ಬರಬಹುದು, ಕಿಡ್ನಿಯ ಕ್ಷಮತೆ ಕ್ಷೀಣಿಸಬಹುದು, ವಾಸನೆ ತಿಳಿಯದಿರುವುದು, ರಕ್ತದ ಒತ್ತಡದ ಏರಿಳಿತ, ನಿದ್ರಾಹೀನತೆ, ದೇಹದೆಲ್ಲೆಡೆ ನೋವು, ಅಜೀರ್ಣ ಮುಂತಾದ ಹಲವಾರು ತೊಂದರೆಗಳು ಎದುರಾಗಬಹುದು.
ಈ ಕಾಯಿಲೆಗೆ ಪಾರ್ಕಿನ್ಸನ್ಸ್ ಹೆಸರೇಕೆ?
ರೋಗಕ್ಕೆ ಈ ಹೆಸರೇಕೆ ಬಂತು ಎನ್ನುವುದಕ್ಕೂ ಹಿನ್ನೆಲೆಯಿದೆ. ಏಪ್ರಿಲ್ ೧೧ನೇ ತಾರೀಖು ಡಾ. ಜೇಮ್ಸ್ ಪಾರ್ಕಿನ್ಸನ್ ಅವರ ಜನ್ಮ ದಿನ. ಜಗತ್ತಿಗೆ ಅಷ್ಟಾಗಿ ಪರಿಚಿತವಲ್ಲದಿದ್ದ ಈ ರೋಗದ ಬಗ್ಗೆ ೧೮೧೭ರಲ್ಲೇ ವಿವರವಾಗಿ ಅಧ್ಯಯನ ನಡೆಸಿ, ಬೆಳಕು ಚೆಲ್ಲಿದ್ದವರು ಡಾ. ಪಾರ್ಕಿನ್ಸನ್. ಅವರ ನೆನಪಿಗಾಗಿ ರೋಗವನ್ನು ಈ ಹೆಸರಿನಿಂದ ಕರೆಯಲಾಗಿದ್ದು, ಇಂದಿನ ದಿನವನ್ನು ಜಾಗೃತಿಗಾಗಿ ಮೀಸಲಿಡಲಾಗಿದೆ. ಈ ರೋಗದ ಲಕ್ಷಣಗಳು ಕಾಣುವುದು ಸಾಮಾನ್ಯವಾಗಿ ೬೦ ವರ್ಷದ ನಂತರವೇ. ಆದರೆ ೫೦ರ ನಂತರ ದಿನಗಳಲ್ಲಿ ಪ್ರಾರಂಭವಾಗಬಹುದು ಎನ್ನುತ್ತವೆ ಅಧ್ಯಯನಗಳು.
ಇದನ್ನೂ ಓದಿ: World Health Day : ಆಹಾರಕ್ಕೂ ಮಾನಸಿಕ ಆರೋಗ್ಯಕ್ಕೂ ಇದೆ ಸಂಬಂಧ; ಊಟದ ವಿಷಯದಲ್ಲಿ ಇರಲಿ ಎಚ್ಚರ
ಪಾರ್ಕಿನ್ಸನ್ಸ್ ಕಾಯಿಲೆಗೆ ಚಿಕಿತ್ಸೆ ಏನು?
ಈ ರೋಗದ ಚಿಕಿತ್ಸೆಗಳು ಸಾಕಷ್ಟು ಮುಂದುವರಿದಿದ್ದರೂ, ಇದು ಸಂಪೂರ್ಣ ಗುಣವಾಗುವಂಥದ್ದಲ್ಲ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ, ನಡೆಯುತ್ತಲೂ ಇವೆ. ಹಾಗಾಗಿ ಒಮ್ಮೆ ಈ ರೋಗ ಇದೆಯೆಂಬುದು ಪತ್ತೆಯಾದರೆ, ಗುಣವಾಗುವುದಲ್ಲ ಎಂದು ಕೈಕಟ್ಟಿ ಕೂರುವ ಪ್ರಮೇಯವಿಲ್ಲ. ಒಂದೊಮ್ಮೆ ಸೂಕ್ತ ಚಿಕಿತ್ಸೆಗಳು ರೋಗಿಗೆ ತಲುಪದಿದ್ದರೆ ಬದುಕು ಬಿಗಡಾಯಿಸುವುದು ಖಚಿತ. ಇದಕ್ಕಾಗಿ ಔಷಧಿಗಳು, ಫಿಸಿಯೊಥೆರಪಿ, ಮೆದುಳನ್ನು ಪ್ರಚೋದಿಸುವ ಕ್ರಮಗಳು- ಹೀಗೆ ಹಲವಾರು ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಇದಿಷ್ಟೇ ಅಲ್ಲ, ಮಾತಿನ ಸಮಸ್ಯೆ ಎದುರಿಸುವವರಿಗೆ ಸ್ಪೀಚ್ ಥೆರಪಿ, ಮಾಂಸಖಂಡಗಳು ದುರ್ಬಲ ಆಗದಂತೆ ನಿಗದಿತ ವ್ಯಾಯಾಮಗಳು, ದೈನಂದಿನ ನಡಿಗೆಯಂಥ ಬಹಳಷ್ಟು ಕ್ರಮಗಳ ಮೂಲಕ ರೋಗಿಯ ಬದುಕನ್ನು ಆದಷ್ಟೂ ಸಹಜವಾಗಿರಿಸಲು ವೈದ್ಯ ವಿಜ್ಞಾನ ಪ್ರಯತ್ನಿಸುತ್ತಿದೆ. ಒಂದು ಚಿಕಿತ್ಸೆ ಎಲ್ಲಾ ರೋಗಿಗಳಿಗೂ ಉಪಯುಕ್ತ ಎನ್ನುವಂತಿಲ್ಲ. ಹಾಗಾಗಿ ಆಯಾ ರೋಗಿಗಳ ಲಕ್ಷಣಗಳು ಮತ್ತು ಅಗತ್ಯಗಳ ಅನುಸಾರವಾಗಿ ಚಿಕಿತ್ಸಾ ಕ್ರಮಗಳನ್ನು ನಿರ್ಧರಿಸಲಾಗುತ್ತದೆ.