ಮಾಸ್ಕೊ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವುಗಳಿಗೆ ಪಾಕಿಸ್ತಾನವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಜಗತ್ತಿನ ರಾಷ್ಟ್ರಗಳನ್ನು ಲೆಕ್ಕಿಸದೆ, ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಂಡಿರುವ ಹಾಗೂ ಶಾಂತಿ ಪ್ರತಿಪಾದಿಸುತ್ತಲೇ ರಷ್ಯಾ-ಉಕ್ರೇನ್ ವಿಷಯದಲ್ಲಿ ತಟಸ್ಥ ನಿಲುವನ್ನು ವ್ಯಕ್ತಪಡಿಸಿದ್ದಕ್ಕೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರೇ ಹೊಗಳಿದ್ದಾರೆ. ಇದರ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ “ಪ್ರಧಾನಿ ನರೇಂದ್ರ ಮೋದಿ (Narendra Modi) ಅಪ್ರತಿಮ ದೇಶಭಕ್ತ” ಎಂದು ಬಣ್ಣಿಸಿದ್ದಾರೆ.
“ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲೂ ಮೋದಿ ಅವರು ಅಪ್ರತಿಮ ದೇಶಭಕ್ತರಾಗಿದ್ದಾರೆ. ಮೇಕ್ ಇನ್ ಇಂಡಿಯಾದಂತಹ ಯೋಜನೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಅದರಲ್ಲೂ, ದೇಶದ ಜನರ ಹಿತಾಸಕ್ತಿಗಾಗಿ ಅವರು ರೂಪಿಸಿದ ವಿದೇಶಾಂಗ ನೀತಿಯು ನಿರ್ಣಾಯಕವಾಗಿದೆ” ಎಂದು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಅವರನ್ನು ಬಣ್ಣಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ರಷ್ಯಾ ವಿರುದ್ಧ ಹಲವು ರಾಷ್ಟ್ರಗಳು ನಿರ್ಬಂಧ ವಿಧಿಸಿದವು. ಹಾಗೆಯೇ, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಭಾರತವು ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರ ಉಳಿಯುವ ಮೂಲಕ ತಟಸ್ಥ ನಿಲುವು ತಳೆಯಿತು. ಹಾಗೆಯೇ, ಜಗತ್ತಿನ ರಾಷ್ಟ್ರಗಳ ಆಕ್ಷೇಪವನ್ನೂ ಲೆಕ್ಕಿಸದೆ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಆಮದು ಮಾಡಿಕೊಂಡಿತ್ತು. ಇದರ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನೀಡಿದ ಸ್ಪಷ್ಟನೆಗಳ ಕುರಿತು ಸಹ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ | Imran Khan | ಭಾರತದ್ದು ಸ್ವತಂತ್ರ ವಿದೇಶಾಂಗ ನೀತಿ, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ