ನವದೆಹಲಿ : ಜುಲೈ 18ಕ್ಕೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆ (President Election) ಹಿನ್ನಲೆಯಲ್ಲಿ ಎನ್ಡಿಎ ಮೈತ್ರಿಕೂಟದ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರತಿಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಅದರಲ್ಲೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಂದಾಳತ್ವದಲ್ಲಿ ಹಲವು ಪ್ರತಿಪಕ್ಷಗಳ ಮುಖಂಡರು ಈಗಾಗಲೇ ಸಭೆ ನಡೆಸಿ ಕೆಲ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದವು. ಇದೀಗ ಈ ಹಿಂದೆ ಬಿಜೆಪಿಯಲ್ಲಿದ್ದು ಸದ್ಯ ಟಿಎಂಸಿ ಉಪಾಧ್ಯಕ್ಷರಾಗಿರುವ ಯಶ್ವಂತ್ ಸಿನ್ಹಾ ಅವರ ಹೆಸರು ಕೇಳಿ ಬರುತ್ತಿದೆ. ಇಂದು (ಮಂಗಳವಾರ) ಪ್ರತಿಪಕ್ಷಗಳ ಮುಖಂಡರು ಸಭೆ ನಡೆಸಿ ಸಿನ್ಹಾ ಹೆಸರನ್ನು ಅಮತಿಮಗೊಳಿಸುವ ಸಾಧ್ಯತೆ ಇದೆ.
ಈ ಹಿಂದೆ ಜೂನ್ 15 ರಂದು 21 ಪ್ರತಿ ಪಕ್ಷಗಳ ಜತೆ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿ ಹಲವು ನಾಯಕರು ಪಾಲ್ಗೊಂಡಿದ್ದರು. ಎನ್‌ಸಿಪಿ ಮುಖಂಡ ಶರದ್ ಪವಾರ್ ಹೆಸರನ್ನು ಆರಂಭದಲ್ಲಿ ಪರಿಗಣಿಸಲಾಯಿತಾದರೂ ಈ ಮನವಿಯನ್ನು ಪವಾರ್ ತಿರಸ್ಕರಿಸಿದರು. ಬಳಿಕ ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲ , ಮಹಾತ್ಮಾ ಗಾಂಧೀಜಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರಿಬ್ಬರ ಹೆಸರನ್ನು ಪ್ರತಿಪಕ್ಷಗಳು ಪರಿಗಣಿಸಿದ್ದವಾದರೂ ಈ ಇಬ್ಬರೂ ಮುಖಂಡರು ಸ್ಪರ್ಧಿಸಲು ನಿರಾಕರಿಸಿದರು. ಸದ್ಯ ಟಿಎಂಸಿ ಉಪಾಧ್ಯಕ್ಷರಾಗಿರುವ ಯಶ್ವಂತ್ ಸಿನ್ಹಾ ಹೆಸರು ಕೇಳಿ ಬರುತ್ತಿದ್ದು, ಬಹುತೇಕ ಇಂದು (ಮಂಗಳವಾರ) ನಡೆಯುವ ಸಭೆಯಲ್ಲಿ ಅವರ ಹೆಸರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ.
ಇದನ್ನು ಓದಿ|ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷದಿಂದ ಫಾರೂಖ್ ಅಬ್ದುಲ್ಲಾ, ಗೋಪಾಲಕೃಷ್ಣ ಗಾಂಧಿ ಹೆಸರು, ಗೌಡರ ಪ್ರಸ್ತಾಪ ಇಲ್ಲ
ಇಂದು (ಮಂಗಳವಾರ) ಶರದ್ ಪವಾರ್ ನಿವಾಸದಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಿಗದಿಯಾಗಿದೆ. ಈ ಮಧ್ಯೆ ಸಭೆಗೂ ಮುನ್ನವೇ ಯಶ್ವಂತ್ ಸಿನ್ಹಾ ಈ ಕುರಿತು ಟ್ವೀಟ್ ಮಾಡಿದ್ದು, ʻಮಮತಾಜೀ ಅವರು ಟಿಎಂಸಿಯಲ್ಲಿ ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಅಭಾರಿಯಾಗಿದ್ದೇನೆ. ಈಗ ಒಂದು ದೊಡ್ಡ ಉದ್ದೇಶಕ್ಕಾಗಿ ನಾನು ಕೆಲಸ ಮಾಡಬೇಕಿದೆ. ಹೀಗಾಗಿ ಟಿಎಂಸಿ ಪಕ್ಷ ತೊರೆಯಬೇಕಿದೆ. ಮಮತಾ ಜೀ ಅವರು ಕೂಡ ನನ್ನ ಈ ನಿರ್ಧಾರವನ್ನು ಅನುಮೋದಿಸುವ ನಂಬಿಕೆ ಇದೆʼ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸರಕಾರದ ಹಣಕಾಸು ಮತ್ತು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿರುವ ಯಶ್ವಂತ್ ಸಿನ್ಹಾ ಅವರು ಸದ್ಯ ತೃಣಮೂಲ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದಾರೆ. 2018ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರ್ಪೆಡೆಯಾಗಿದ್ದರು.