ಮೈಸೂರು: ಜಗತ್ತಿನ ಸರ್ವ ಸಮಸ್ಯೆಗಳಿಗೆ ಯೋಗವೊಂದೇ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅದು ವೈಯಕ್ತಿಕ ಸಮಸ್ಯೆಯೇ ಇರಲಿ, ಜಾಗತಿಕ ಸಮಸ್ಯೆಯೇ ಇರಲಿ… ಅದಕ್ಕೆ ಯೋಗದಲ್ಲಿ ಪರಿಹಾರವಿದೆ ಎಂದು ಮೈಸೂರಿನಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮಿಕ ಮತ್ತು ಯೋಗ ಶಕ್ತಿಯ ಕೇಂದ್ರ. ಅಂದು ಮೈಸೂರು ಯೋಗವನ್ನು ಬೆಳಗಿಸಿತು. ಇಂದು ಯೋಗ ಇಡೀ ಜಗತ್ತನ್ನು ಬೆಳಗಿಸುತ್ತಿದೆ. ಇಡೀ ಮನುಕುಲಕ್ಕೆ ಆರೋಗ್ಯವನ್ನು ನೀಡುತ್ತಿದೆ ಎಂದು ಮೋದಿ ಹೇಳಿದರು.
ಯೋಗ ಮೊದಲು ಮನೆ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಣಿಸುತ್ತಿತ್ತು ಈಗ ಮೂಲೆ ಮೂಲೆಗೆ ಪಸರಿಸಿದೆ. ಕೊರೊನಾದ ಬಳಿಕ ಒಂದಿಷ್ಟು ಕಳೆದುಹೋದಿದ್ದ ನಮ್ಮ ಜೀವನೋತ್ಸಾಹ ಮರಳಿ ಬಂದಿರುವುದರ ಪ್ರತೀಕವಾಗಿ ಯೋಗ ದಿನ ಅದ್ಧೂರಿಯಾಗಿ ಆಚರಣೆಯಾಗುತ್ತಿದೆ ಎಂದರು ಪ್ರಧಾನಿ ಮೋದಿ.
ಯೋಗ ಕೇವಲ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ. ಹಾಗಾಗಿ ಮಾನವತೆಗಾಗಿ ಯೋಗ ಎಂಬ ಈ ಬಾರಿ ಧ್ಯೇಯವಾಗಿ ಅನ್ವರ್ಥವಾಗಿದೆ. ಹೀಗಾಗಿ ಭಾರತ ಯೋಗವನ್ನು ಇಡೀ ಜಗತ್ತಿಗೆ ಪಸರಿಸಿದ ವಿಶ್ವ ಸಂಸ್ಥೆ ಮತ್ತು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಧನ್ಯವಾದ ಎಂದರು.
ಶಾಂತಿಂ ಯೋಗೇನ್ ಮಿಂದತಿ: ಯೋಗ ನಮಗೆಲ್ಲ ಶಾಂತಿಯನ್ನು ತರುತ್ತದೆ ಎಂಬ ಮಾತಿದು. ಯೋಗ ನಮಗೆ ವೈಯಕ್ತಿಕವಾಗಿ ಮಾತ್ರವಲ್ಲ, ಇಡೀ ದೇಶ ಶಾಂತಿಯನ್ನು ಕೊಡುತ್ತದೆ. ಮಾತ್ರವಲ್ಲ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದು ಮೋದಿ ವ್ಯಾಖ್ಯಾನಿಸಿದರು.
ಯತ್ ಪಿಂಡೇ ತಥ್ ಬ್ರಹ್ಮಾಂಡೇ: ಇಡೀ ಜಗತ್ತು ಆರಂಭವಾಗುವುದು ನಮ್ಮಿಂದ, ನಮ್ಮ ದೇಹದಿಂದ. ಅಂದರೆ ಇದು ನಮ್ಮ ನಮ್ಮ ಆತ್ಮ ಜಾಗೃತಿಯಿಂದ ಆರಂಭವಾಗುತ್ತದೆ ಅದು ಜಾಗತಿಕ ಜಾಗೃತಿ ಆಗುತ್ತದೆ. ನಮ್ಮೊಳಗೆ ಮತ್ತು ಜಗತ್ತಿನಲ್ಲಿ ಜಾಗೃತಿ ಕಾರಣವಾಗುವ ಯೋಗ ಜಗತ್ತಿನ ಸರ್ವ ಸಮಸ್ಯೆಗೆ ಪರಿಹಾರವಾಗುತ್ತದೆ ಎಂದರು ಮೋದಿ.
ಅದು ವೈಯಕ್ತಿಕ ಸಮಸ್ಯೆ ಇರಬಹುದು, ಜಾಗತಿಕ ಹವಾಮಾನ ಸಮಸ್ಯೆ ಇರಬಹುದು ಅದಕ್ಕೆ ಯೋಗವೇ ಪರಿಹಾರ. ಇದು ಜನರನ್ನು ಜೋಡಿಸುತ್ತದೆ, ದೇಶದೇಶಗಳನ್ನು ಜೋಡಿಸುತ್ತದೆ. ಜಗತ್ತಿನ ಪ್ರಾಬ್ಲಂ ಸಾಲ್ವರ್ ಯೋಗ ಎಂದು ಹೆಮ್ಮೆಯಿಂದ ಹೇಳಿದರು ಮೋದಿ.
ಮೋದಿ ಆಗಮನ: ಬೆಳಗ್ಗೆ ೬.೨೦ಕ್ಕೆ ರ‍್ಯಾಡಿಸನ್ ಬ್ಲೂ ಹೋಟೆಲ್‌ನಿಂದ ಹೊರಟ ಪ್ರಧಾನಿ ಅವರು ಅರಮನೆ ಎದುರಿನ ಜಯಮಾರ್ತಾಂಡ ಗೇಟ್ ನಿಂದ ವೇದಿಕೆಯ ಕಡೆಗೆ ಆಗಮಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವರು ಅವರ ಜತೆಗಿದ್ದರು. ಯೋಗ ವೇದಿಕೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದಾರೆ. ಜತೆಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಿದ್ದಾರೆ. ಸಚಿವರಾದ ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಮೈಸೂರು ಸಂಸದ ಪ್ರತಾಪ್ ಸಿಂಹ, ಚಾಮರಾಜ ನಗರ ಸಂಸದ ಶ್ರೀನಿವಾಸ ಪ್ರಸಾದ್ ಭಾಗವಹಿಸಿದ್ದಾರೆ.
ಭಾರತ್ ಮಾತಾಕಿ ಜೈ…
ಮೋದಿ ಅವರನ್ನು ಭಾರತ್ ಮಾತಾಕೀ ಜೈ ಎಂಬ ಉದ್ಘೋಷದೊಂದಿಗೆ ಸ್ವಾಗತಿಸಲಾಯಿತು.
ನರೇಂದ್ರ ಮೋದಿ ಅವರ ಜತೆ 7 ಸಾವಿರ ಜನ ಯೋಗಾಭ್ಯಾಸ ಮಾಡಲಿದ್ದಾರೆ. ಉಳಿದ ಸುಮಾರು ೮ ಸಾವಿರ ಮಂದಿ ಉಳಿದವರು ಅರಮನೆಯ ಎಲ್ಲ ಭಾಗದಲ್ಲಿ ಕುಳಿತು ಯೋಗ ಮಾಡಲಿದ್ದಾರೆ. ಕುವೆಂಪು ವಿರಚಿತ ನಾಡಗೀತೆ ಜೈ ಭಾರತ ಜನನಿಯ ತನುಜಾತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಆಯುಷ್ ಖಾತೆ ಮಂತ್ರಿ ಸರ್ಬಾನಂದ ಸೋನಾವಾಲಾ ಸ್ವಾಗತಿಸಿದರು. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದು. ಇಡೀ ಜಗತ್ತು ಇಂದು ಯೋಗಕ್ಕೆ ಮೊರೆ ಹೋಗಿರುವುದಕ್ಕೆ ಅವರೇ ಕಾರಣ ಎಂದು ಹೇಳಿದರು.