Site icon Vistara News

Yogi Adityanath: ಮುಖ್ಯಮಂತ್ರಿಯ ಕಾರ್ಯದರ್ಶಿ ಹೆಸರಲ್ಲಿ ವಂಚಿಸುತ್ತಿದ್ದ ಖತರ್ನಾಕ್‌ ಕ್ರಿಮಿನಲ್‌ ಪೊಲೀಸ್‌ ಬಲೆಗೆ

Yogi Adityanath

Yogi Adityanath

ಲಕ್ನೋ: ಉತ್ತರ ಪ್ರದೇಶದ ಮುಖುಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಫೋನ್ ಮೂಲಕ ವಂಚಿಸುತ್ತಿದ್ದವನು ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ. ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (STF) ಆತನನ್ನು ಭಾನುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಕಾರ್ಯದರ್ಶಿಯ ಹೆಸರಿನಲ್ಲಿ ನಕಲಿ ಫೋನ್ ಕರೆಗಳನ್ನು ಮಾಡುವ ಮೂಲಕ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ವಿವೇಕ್ ಶರ್ಮಾ ಅಲಿಯಾಸ್ ಬಂಟು ಚೌಧರಿಯನ್ನು ಬಸ್ತಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಎಸ್‌ಟಿಎಫ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವು ದಿನಗಳ ಹಿಂದೆ ಬಸ್ತಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿಗೆ ಮೋಸ ಮಾಡುವ ಸಲುವಾಗಿ ಅವರ ಮೊಬೈಲ್‌ ಫೊನ್‌ಗೆ ಕರೆ ಮಾಡಿ ತನ್ನನ್ನು ಮುಖ್ಯಮಂತ್ರಿಯ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿರುವುದಾಗಿ ಎಂದು ವಿವೇಕ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ಅಪ್ಲಿಕೇಶನ್ ‘ಟ್ರೂ ಕಾಲರ್’ನಲ್ಲಿ ವಿವೇಕ್‌ನ ಫೋನ್‌ ನಂಬರ್‌ ʼಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ʼ ಎಂದು ಕಾಣಿಸಿಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಸ್ತಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419 (ವ್ಯಕ್ತಿಗಳಿಗೆ ಮೋಸ ಮಾಡಿದ್ದಕ್ಕೆ ಇರುವ ಶಿಕ್ಷೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರಚೋದನೆ), 384 (ಸುಲಿಗೆ) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಂಚನೆ ಆರೋಪದ ಮೇಲೆ ಅಲಿಗಢ, ಬಲರಾಂಪುರ, ಮಥುರಾ, ಕಾನ್ಪುರ ನಗರ ಮತ್ತು ಹರ್ದೋಯ್ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಟಿಎಫ್‌ ತಿಳಿಸಿದೆ. ಸದ್ಯ ವಿವೇಕ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.

ಭಾವಿ ಯೋಧರಿಗೆ ನೇಮಕ ಹೆಸರಲ್ಲಿ ವಂಚನೆ

ಬೆಂಗಳೂರು: ದೇಶ ಸೇವೆ ಮಾಡಲು ಯೋಧನಾಗಬೇಕೆಂದು ಗುರಿ ಹೊಂದಿರುವ ಯುವಕರನ್ನೇ ಟಾರ್ಗೆಟ್‌ ಮಾಡಿ ವಂಚಿಸಿರುವ ಘಟನೆ ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ವರದಿಯಾಗಿತ್ತು. ಸೇನಾ ಸೆಲೆಕ್ಷನ್ ರ‍್ಯಾಲಿ ವೇಳೆ ಮಿಲಿಟರಿ ಆಫೀಸರ್ ಡ್ರೆಸ್ ಹಾಕಿ ಬಂದಿದ್ದ ಪ್ರಸನ್ ಜಿನ್ ಘೋಷ್ ಎಂಬಾತ ಅಭ್ಯರ್ಥಿಗಳಿಗೆ ವಂಚಿಸಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ತಿವಾರಿ ಅವರು ದೂರು ನೀಡಿದ್ದಾರೆ. ಅಶೋಕ್ ನಗರ ಬಳಿ ಇರುವ ಸಿಎಂಪಿ ಸೆಂಟರ್ ಹಾಗೂ ಬಿಹಾರ ಸೇನೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ರ‍್ಯಾಲಿ ನಡೆದಿತ್ತು. ಈ ವೇಳೆ ಆರ್ಮಿ ಶಾಲೆಗೆ ಮಿಲಿಟರಿ ಆಫೀಸರ್ ಡ್ರೆಸ್‌ನಲ್ಲಿ ಪ್ರಸನ್ ಜಿನ್ ಘೋಷ್ ಬಂದಿದ್ದಾನೆ. ಅಲ್ಲಿದ್ದ ಕೆಲ ಅಭ್ಯರ್ಥಿಗಳಿಗೆ ಹಿಂದಿಯಲ್ಲಿ ಮಾತನಾಡಿ ಸಲಹೆಗಳನ್ನು ನೀಡಿದ್ದಾನೆ.

ಇತ್ತ ಅಸ್ಸಾಂ ಹಾಗು ಬಿಹಾರ ಮೂಲದ ಅಭ್ಯರ್ಥಿಗಳು ಈ ವಂಚಕನನ್ನು ಆಫೀಸರ್ ಎಂದೇ ನಂಬಿದ್ದರು. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದು ಬೇಡ. ನಾನೇ ನಿಮ್ಮನ್ನು ಸೇನೆಗೆ ಸೇರಿಸುತ್ತಿನಿ ಎಂದು ಅಭ್ಯರ್ಥಿಗಳಿಗೆ ನಂಬಿಸಿ 20 ಅಭ್ಯರ್ಥಿಗಳಿಂದ ತಲಾ 30 ಸಾವಿರ ರೂ. ಹಣ ಪಡೆದಿದ್ದ. ನಂತರ ಸಿಎಂಪಿ ಸ್ಟ್ಯಾಂಪ್ ಹಾಗೂ ನಕಲಿ ಸಹಿ ಮಾಡಿ ಅಪಾಯಿಂಟ್‌ಮೆಂಟ್‌ ಲೆಟರ್‌ ನೀಡಿ ಡ್ಯೂಟಿಗೆ ರಿಪೋರ್ಟ್‌ ಮಾಡಿಕೊಳ್ಳಿ ಎಂದಿದ್ದ. ನಂತರ ಯುವಕರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಸಂಬಂಧ ಖುದ್ದು ಲೆಫ್ಟಿನೆಂಟ್ ಕರ್ನಲ್ ಅವರೇ ದೂರು ನೀಡಿದ್ದಾರೆ. 

ಇದನ್ನೂ ಓದಿ: Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್‌

Exit mobile version