Site icon Vistara News

ಹಲವು ಜೀವಗಳನ್ನು ಉಳಿಸಿ ಉಸಿರು ತೊರೆದ 16 ತಿಂಗಳ ಮಗು! ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿ

youngest organ donor

ನವ ದೆಹಲಿ : ಇದೊಂದು ಹೃದಯಸ್ಪರ್ಶಿ ಘಟನೆ. ತನ್ನ ಸಾವಿನ ನಂತರವೂ ಹಲವು ಜೀವಗಳ ಬದುಕು ಉಳಿಸಿದ ಆ ಪುಟ್ಟ ಜೀವದ ವಯಸ್ಸು ಇನ್ನೂ 16 ತಿಂಗಳು. ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿ ಎನಿಸಿಕೊಂಡಿದೆ ಈ ಮಗು.

ಆ ಮಗುವಿನ ಹೆಸರು ರಿಶಾಂತ್.‌ ಇನ್ನೂ ಹೆಜ್ಜೆ ಊರಲು ಕಲಿಯುತ್ತಾ ಇತ್ತಷ್ಟೇ. ಹೆತ್ತವರ ಕಣ್ಣಲ್ಲಿ ಆನಂದದ ಕಣ್ಣೀರು ಮೂಡಬೇಕಾದ ಸಮಯ. ಆದರೆ ವಿಧಿ ಕ್ರೂರ ರೀತಿಯಲ್ಲಿ ಆಟವಾಡಿತು. ಆಗಸ್ಟ್‌ 17ರ ಮುಂಜಾನೆ, ರಿಶಾಂತ್‌ ಕೆಳಗೆ ಬಿದ್ದ, ಮೈಯಲ್ಲಿ ಹಲವು ಗಾಯಗಳಾದವು. ಖಾಸಗಿ ಕಾಂಟ್ರಾಕ್ಟರ್‌ ಆಗಿದ್ದ ತಂದೆ ಉಪೀಂದರ್‌ ಆಗ ತಾನೇ ಕೆಲಸಕ್ಕೆ ಹೊರಟಿದ್ದ. ಕೆಲಸ ಬಿಟ್ಟು ಮಗುವನ್ನು ಎತ್ತಿಕೊಂಡು ಜಮುನಾ ಪಾರ್ಕ್‌ನ ಖಾಸಗಿ ಆಸ್ಪತ್ರೆಗೆ ಧಾವಿಸಿದ. ನಂತರ ಅಲ್ಲಿಂದ ಜೈಪ್ರಕಾಶ್‌ ನಾರಾಯಣ್‌ ಟ್ರಾಮಾ ಸೆಂಟರ್‌ಗೆ, ಅಲ್ಲಿಂದ ದೆಹಲಿಯ ಏಮ್ಸ್‌ಗೆ- ಹೀಗೆ ಮಗುವನ್ನು ಕೊಂಡೊಯ್ಯಲಾಯಿತು. ಆಗಸ್ಟ್‌ 24ರಂದು, ತಲೆಗೆ ಬಿದ್ದ ಗಂಭೀರ ಗಾಯದಿಂದ ಮಗುವಿನ ಬ್ರೇನ್‌ ಡೆತ್‌ ಆಗಿದೆ ಎಂದು ವೈದ್ಯರು ಘೋಷಿಸಿದರು.

ಶೋಕದಲ್ಲಿ ಮುಳುಗಿದ್ದ ತಂದೆ ತಾಯಿಯನ್ನು ವೈದ್ಯರು ಸಂಪರ್ಕಿಸಿ, ಮಗುವಿನ ಅಂಗಗಳು ಹಲವು ಮಂದಿಗೆ ಜೀವದಾನ ಮಾಡಬಹುದಾದ ಸಾಧ್ಯತೆಯನ್ನು ಮನದಟ್ಟು ಮಾಡಿಸಿದರು. ಕೌನ್ಸೆಲಿಂಗ್‌ನ ಬಳಿಕ, ರಿಶಾಂತ್‌ನ ಪ್ರಮುಖ ಅಂಗಗಳು ಹಾಗೂ ಅಂಗಾಂಶಗಳನ್ನು ದಾನ ಮಾಡಲು ಭಾರವಾದ ಹೃದಯದಿಂದ ಹೆತ್ತವರು ಒಪ್ಪಿದರು.

ತಂದೆ ಉಪೀಂದರ್‌ ಹೇಳುವ ಪ್ರಕಾರ, ರಿಶಾಂತ್‌ ಅವರ ಆರನೇ ಮಗು. ಐದು ಹೆಣ್ಣುಮಕ್ಕಳ ಬಳಿಕ ಜನಿಸಿದ ಆತ ಅವರೆಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ನಾವು ಆತನನ್ನು ಕಳೆದುಕೊಂಡೆವು. ಆದರೆ ಅವನು ಬೇರೆಯವರ ಜೀವ ಉಳಿಸಿದರೆ ನಮಗೆ ಅದೇ ಸಾರ್ಥಕ್ಯ. ಇಂಥ ದೌರ್ಭಾಗ್ಯದಲ್ಲೂ ಸ್ಮರಣೀಯವಾದ ಸಂಗತಿ ಎಂದರೆ ಅಂಗದಾನ. ಬ್ರೇನ್‌ ಡೆತ್‌ನಿಂದ ಸತ್ತ ವ್ಯಕ್ತಿಯ ದೇಹ ಸ್ವಸ್ಥ ಸ್ಥಿತಿಯಲ್ಲಿದ್ದರೆ ಸುಮಾರು 6 ಜೀವಗಳ ತುರ್ತು ಅಂಗದ ಅಗತ್ಯಗಳನ್ನು ಪೂರೈಸಬಹುದು, ಅಷ್ಟು ಜೀವ ಉಳಿಸಬಹುದು.

ಏಮ್ಸ್‌ನ ಅಂಗದಾನ ವಿಭಾಗದ ವೈದ್ಯರು ಹೇಳುವಂತೆ, ಪ್ರತಿಯೊಂದು ಅಂಗದಾನದ ಪ್ರಕರಣದ ಹಿಂದೆಯೂ ತುಂಬಾ ಪರಿಶ್ರಮ, ಬೇಗುದಿ, ಇತ್ಯಾದಿಗಳಿರುತ್ತವೆ. ಸಂಬಂಧಿಕರನ್ನು ಅಂಗದಾನಕ್ಕೆ ಪ್ರೇರೇಪಿಸುವುದರಿಂದ ಹಿಡಿದು, ಅವುಗಳನ್ನು ತೆಗೆದು ಜಾಗ್ರತೆಯಿಂದ ಕಾಪಾಡಿಕೊಂಡು ಟ್ರಾನ್ಸ್‌ಪ್ಲಾಂಟ್‌ ಮಾಡುವವರೆಗೂ ಅದು ಚಾಚಿದೆ. ಬ್ರೇನ್‌ ಡೆತ್‌ ಸಂಭವಿಸಿದ ಪ್ರಕರಣಗಳಲ್ಲಿ ಬಂಧುಗಳು ಅಂಗದಾನದ ಬಗ್ಗೆ ಯೋಚಿಸಿದರೆ ಸತ್ತವರ ಸ್ಮರಣೆಯನ್ನು ಹೆಚ್ಚು ಜೀವಂತಗೊಳಿಸಬಹುದು ಎನ್ನುತ್ತಾರೆ ಏಮ್ಸ್‌ನ ವೈದ್ಯೆ ಆರ್ತಿ ವಿಜ್.‌

ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ ಮಾಡಿ ಮಾದರಿಯಾದಳು ಈ ಬಾಲೆ!

Exit mobile version