ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎಯೇತರ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವ, ಟಿಎಂಸಿ ನಾಯಕ ಯಶ್ವಂತ್ ಸಿನ್ಹಾ ಅವರಿಗೆ ಕೇಂದ್ರ ಸರ್ಕಾರ ಝಡ್ ಕೆಟಗರಿ ಭದ್ರತೆ ನೀಡಿರುವುದಾಗಿ ಇಂದು (ಶುಕ್ರವಾರ) ಘೋಷಣೆ ಮಾಡಿದೆ.
ಕೇಂದ್ರ ಗೃಹ ಸಚಿವಾಲಯವು ಸಿಆರ್ಪಿಎಫ್ನ ವಿಐಪಿ ಭದ್ರತಾ ವಿಭಾಗಕ್ಕೆ ನಿರ್ದೇಶನ ನೀಡಿದ್ದು, ಇದರ ಆಧಾರದ ಮೇಲೆ ಇಂದಿನಿಂದ ಯಶ್ವಂತ್ ಸಿನ್ಹಾಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗುತ್ತದೆ. ಸಿನ್ಹಾ ಭದ್ರತೆಯಲ್ಲಿರುವ ಯೋಧರು 8ರಿಂದ 10 ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸಿನ್ಹಾ ದೇಶದ ಯಾವುದೇ ಪ್ರದೇಶಕ್ಕೂ ಹೋದರೂ ಅವರ ಜೊತೆ ಭದ್ರತೆಗಾಗಿ ಈ ಯೋಧರು ಕೂಡ ತೆರಳಲಿದ್ದಾರೆ.
ಇದನ್ನು ಓದಿ| ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಆಯ್ಕೆ
ಕಳೆದ ಎರಡು ದಿನಗಳ ಹಿಂದೆ ಎನ್ಡಿಎ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿತ್ತು. ಈಗ ವಿರೋಧ ಪಕ್ಷದ ಅಭ್ಯರ್ಥಿಗೂ ಕೇಂದ್ರ ಸರ್ಕಾರ ಜೆಡ್ ಕೆಟಗರಿಯ ಭದ್ರತೆ ನೀಡಿದೆ.
ಜುಲೈ 24ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ಕ್ಕೆ ಫಲಿತಾಂಶ ಹೊರಬೀಳಲಿದೆ. ಯಶ್ವಂತ್ ಸಿನ್ಹಾ ಜೂನ್ 27ರಂದು ನಾಮನಿರ್ದೇಶನ ಮಾಡಲಿದ್ದಾರೆ. ಬಳಿಕ ದೇಶಾದ್ಯಂತ ಮತದಾನದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.