ನವದೆಹಲಿ: ಇಸ್ಲಾಮಿಕ್ ಮೂಲಭೂತವಾದವನ್ನು ಪಸರಿಸುವುದು, ಉಗ್ರರಿಗೆ ಹಣಕಾಸು ನೆರವು ನೀಡುವುದು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಭಾಷಣಗಳಿಂದ ಸಂಕಷ್ಟಕ್ಕೆ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ವಿವಾದಿತ ಧರ್ಮಗುರು ಜಾಕೀರ್ ನಾಯ್ಕ್‌ನನ್ನು (Zakir Naik) ಬಂಧಿಸಲು ಭಾರತ ಮುಹೂರ್ತ ಫಿಕ್ಸ್ ಮಾಡಿದೆ. ಇಸ್ಲಾಮಿಕ್ ಮೂಲಭೂತವಾದಿಯನ್ನು ಗಡಿಪಾರು ಮಾಡಲು ಒಮಾನ್ ಸರ್ಕಾರದ ಜತೆ ಭಾರತ ಮಾತುಕತೆ ನಡೆಸುತ್ತಿದೆ. ಅಲ್ಲಿಯೇ ಈತನ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಒಮಾನ್ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಂಜಾನ್ ಹಿನ್ನೆಲೆಯಲ್ಲಿ ಎರಡು ಉಪನ್ಯಾಸ ನೀಡುವಂತೆ ಒಮಾನ್ ಸರ್ಕಾರವು ಜಾಕೀರ್ ನಾಯ್ಕ್‌ನನ್ನು ಆಹ್ವಾನಿಸಲಾಗಿದೆ. ‘ದಿ ಕುರಾನ್ ಎ ಗ್ಲೋಬಲ್ ನೆಸೆಸಿಟಿ’ ಎಂಬ ವಿಷಯದ ಕುರಿತು ಜಾಕೀರ್ ನಾಯ್ಕ್, ಮಾರ್ಚ್ 23ರಂದು ಉಪನ್ಯಾಸ ನೀಡಲಿದ್ದಾನೆ. ಹಾಗೆಯೇ, ಮಾರ್ಚ್ 25ರಂದು “ಪ್ರಾಫೆಟ್ ಮೊಹಮ್ಮದ್ ಎ ಮರ್ಸಿ ಟು ಹ್ಯೂಮನ್‌ಕೈಂಡ್” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾನೆ. ಒಮಾನ್‌ನ ಅವ್‌ಕಫ್ ಆ್ಯಂಡ್ ರಿಲಿಜಿಯಸ್ ಅಫೇರ್ಸ್ ಸಚಿವಾಲಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಕತಾರ್‌ನಲ್ಲಿ ಕಾಣಿಸಿಕೊಂಡಿದ್ದ ಜಾಕೀರ್
ಅಕ್ರಮವಾಗಿ ಹಣ ವರ್ಗಾವಣೆ, ಉಗ್ರರಿಗೆ ಹಣಕಾಸು ನೆರವು ಸೇರಿ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಜಾಕೀರ್ ನಾಯ್ಕ್ ಮೋಸ್ಟ್ ವಾಂಟೆಡ್ ಎನಿಸಿದ್ದಾನೆ. ಹಾಗಾಗಿ, ಒಮಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಒಮಾನ್‌ನ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳು ಕೂಡ ಒಮಾನ್ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಸ್ಥಳೀಯ ಕಾನೂನಿನ ಅಡಿಯಲ್ಲಿ ಜಾಕೀರ್ ನಾಯ್ಕ್‌ನನ್ನು ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡಬೇಕು ಎಂಬುದಾಗಿ ಕೋರಲಾಗಿದೆ. ಇದಕ್ಕೆ ಒಮಾನ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಿಕ್ ರಿಸರ್ಚ್ ಎಂಬ ಫೌಂಡೇಷನ್ ಸ್ಥಾಪಿಸಿದ ಜಾಕೀರ್ ನಾಯ್ಕ್, ವಿವಾದಿತ ಭಾಷಣಗಳಿಂದಲೇ ಖ್ಯಾತಿಯಾಗಿದ್ದ. ಹಿಂದುಗಳು, ಹಿಂದು ದೇವರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2016ರಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್‌ಅನ್ನು ನಿಷೇಧಿಸಿತ್ತು. ಹಾಗೆಯೇ, 2022ರ ಕೇಂದ್ರ ಸರ್ಕಾರವು ಜಾಕೀರ್ ನಾಯ್ಕ್‌ನ ಸಂಘಟನೆಯನ್ನು 5 ವರ್ಷ ನಿಷೇಧ ಹೇರಿದೆ.
ಪ್ರತಿ ಮುಸ್ಲಿಮನೂ ಹತ್ಯಾರ ಹೊಂದಬೇಕು, ಉಗ್ರಗಾಮಿಯಾಗಬೇಕು ಎಂಬುದಾಗಿ ಬೋಧಿಸುತ್ತಿದ್ದ ಈತ ಭಾರತದಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಬಳಿಕ ಮಲೇಷ್ಯಾದಲ್ಲಿ ಮೊದಲು ಕಾಣಿಸಿಕೊಂಡಿದ್ದ. ಈತ ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅತಿಥಿಯಾಗಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದ. ಈತನನ್ನು ಕತಾರ್ ಸರ್ಕಾರವೇ ಆಹ್ವಾನಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈಗ ಈತನನ್ನು ಭಾರತಕ್ಕೆ ಕರೆತರಲು ಗುಪ್ತಚರ ಇಲಾಖೆ ಅಧಿಕಾರಿಗಳು, ರಾಯಭಾರ ಕಚೇರಿ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.