ನವ ದೆಹಲಿ: ಜಗತ್ತಿನಾದ್ಯಂತ ಮುಸ್ಲಿಮರನ್ನು ಅನ್ಯಧರ್ಮೀಯರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಮಾಡುತ್ತಿರುವ ಅಲ್ ಖೈದಾ ನಾಯಕ ಅಲ್ ಜವಾಹಿರಿ ಇದೀಗ ಜಗತ್ತಿನ ಮುಸ್ಲಿಮರಿಗೆ ಜಿಹಾದಿಗಳೇ ರೋಲ್ ಮಾಡೆಲ್ ಅಗಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಅಲ್‌ಖೈದಾದ ಮಾಧ್ಯಮ ವಿಭಾಗವಾಗಿರುವ ʻಆಸ್ ಸಾಹಬ್ʼ ಮೂಲಕ ಬಿಡುಗಡೆಯಾಗಿರುವ ವಿಡಿಯೊದಲ್ಲಿ ಆತ ಈ ಹೇಳಿಕೆ ನೀಡಿದ್ದಾನೆ.
ಡೀಲ್ ಆಫ್ ದ ಸೆಂಚೂರಿ ಅಥವಾ ಕ್ರುಸೇಡ್ಸ್ ಸ್ಪ್ಯಾನಿಂಗ್ ಸೆಂಚೂರೀಸ್ (ಶತಮಾನದ ಒಪ್ಪಂದ ಅಥವಾ ಶತಮಾನಗಳವರೆಗೆ ಹರಡಿರುವ ಧರ್ಮಯುದ್ಧ) ಎಂಬ ಶೀರ್ಷಿಕೆಯಡಿ ಐದು ವಿಡಿಯೊಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್‌ಖೈದಾ ನಾಯಕನಾಗಿರುವ ಜವಾಹರಿ ಇತ್ತೀಚೆಗಷ್ಟೇ ಭಾರತದ ಪ್ರಮುಖ ನಗರಗಳನ್ನು ಗುರಿಯಾಗಿಟ್ಟು ಆತ್ಮಹತ್ಯಾ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದ. ನೂಪುರ್ ಶರ್ಮ ಅವರು ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡಿದ್ದಕ್ಕೆ ಪ್ರತಿಯಾಗಿ ಉಗ್ರ ದಾಳಿಯ ಬೆದರಿಕೆ ಹಾಕಿದ್ದ.
ಗುಪ್ತಚರ ಮೂಲಗಳು ಪ್ರಕಾರ ಅಲ್ ಜವಾಹಿರಿ ಈಗ ಅಫಘಾನಿಸ್ತಾನ ಸಮೀಪದ ಡುರಾಂಡ್ ಲೈನ್ ಗಡಿಯಲ್ಲಿದ್ದಾನೆ. ಆದರೆ, ತಾಲಿಬಾನ್ ಇದನ್ನು ನಿರಾಕರಿಸಿದ್ದು, ಆತ ಇರಾನ್‌ನಲ್ಲಿದ್ದಾನೆ ಎನ್ನುತ್ತಿದೆ.
ಕಳೆದ ಹಲವು ವರ್ಷಗಳಿಂದ ಅಫಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ಪಾರಮ್ಯ ಹೊಂದಿದ್ದವು. ಆದರೆ, ಈಗ ಅಮೆರಿಕ ಪಡೆಗಳು ಬಿಟ್ಟು ಹೋಗಿರುವುದರಿಂದ ಮತ್ತೆ ತಾಲಿಬಾನಿಗಳು ತಲೆ ಎತ್ತುವ ಪ್ರಯತ್ನ ನಡೆಸುತ್ತಿದ್ದಾರೆ.
ಅಲ್‌ಖೈದಾದ ಮಾಧ್ಯಮ ವಿಭಾಗದ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದು ಸದ್ಯಕ್ಕೆ ಜಗತ್ತಿನ ಎಲ್ಲೆಡೆಯಿಂದ ಮುಸ್ಲಿಂ ಯುವಕರನ್ನು ಆಕರ್ಷಿಸಿ ಅವರನ್ನು ಜಿಹಾದಿಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಈ ಕೃತ್ಯಕ್ಕೆ ಕತಾರ್, ಟರ್ಕಿ ಸೇರಿದಂತೆ ಕೆಲವು ಮಧ್ಯಪ್ರಾಚ್ಯ ದೇಶಗಳು ಹಣಕಾಸಿನ ನೆರವು ಕೂಡಾ ನೀಡುತ್ತಿವೆ ಎಂದು ಹೇಳಲಾಗಿದೆ.
ಜವಾಹಿರಿ ಸಂದೇಶವೇನು?
ಮುಸ್ಲಿಮರಿಗೆ ಜಿಹಾದಿಗಳು ಆದರ್ಶವಾಗಲಿ ಎಂಬ ಅಲ್ ಜವಾಹಿರಿಯ ಈ ವಿಡಿಯೊ ಸಂದೇಶ ಈಗ ಹೆಚ್ಚುತ್ತಿರುವ ಇಸ್ಲಾಮಿಕ್ ಮೂಲಭೂತವಾದಕ್ಕೆ ಇನ್ನಷ್ಟು ಕುಮ್ಮಕ್ಕನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ಜಗತ್ತಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುವ ಸಾಧ್ಯತೆ ಕಂಡುಬಂದಿದೆ. ಜವಾಹಿರಿಯ ಹಿಂದಿನ ಕೆಲವು ವಿಡಿಯೊಗಳಲ್ಲಿ ಆತನ ಅರಬ್ ರಾಷ್ಟ್ರಗಳಲ್ಲಿ ಮುಸ್ಲಿಮರಿಗೆ ಶಿಕ್ಷಣ ನೀಡುತ್ತಿರುವುದನ್ನು ಆಕ್ಷೇಪಿಸಿದ್ದ.