Site icon Vistara News

ವಿಶ್ವದಲ್ಲೇ ಅತ್ಯಂತ ದಾರಿದ್ರ್ಯತೆ ಇರುವ ದೇಶ ಯಾವುದು?; ಭಾರತ, ಯುಎಸ್​, ಪಾಕಿಸ್ತಾನ ಎಷ್ಟನೇ ಸ್ಥಾನದಲ್ಲಿವೆ?

most miserable countries of world

#image_title

ವಿಶ್ವದಲ್ಲಿಯೇ ಅತ್ಯಂತ ಶೋಚನೀಯ (Economic Crisis) ಪರಿಸ್ಥಿತಿಯಲ್ಲಿರುವ ದೇಶ ಯಾವುದು ಗೊತ್ತಾ?-ಪಾಕಿಸ್ತಾನ, ಅಫ್ಘಾನಿಸ್ತಾನ..ಎಂಬಿತ್ಯಾದಿ ದೇಶಗಳ ಹೆಸರು ನಿಮ್ಮ ತಲೆಗೆ ಬಂದರೆ, ಅದು ತಪ್ಪು ಉತ್ತರ. ಹೆಸರಾಂತ ಅರ್ಥಶಾಸ್ತ್ರಜ್ಞ, ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿರುವ ಜಾನ್ಸ್​ ಹಾಪ್ಕಿನ್ಸ್​ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಸ್ಟೀವ್ ಹ್ಯಾಂಕೆ ಅವರ ಪ್ರಕಾರ, ವಿಶ್ವದಲ್ಲೇ ಅತ್ಯಂತ ದಟ್ಟ ದಾರಿದ್ರ್ಯವಿರುವ ದೇಶ ಜಿಂಬಾಬ್ವೆ. ಸ್ಟೀವ್ ಹ್ಯಾಂಕ್​ ಅವರು ತಮ್ಮ ವಾರ್ಷಿಕ ಮಿಸರಿ (ದಾರಿದ್ರ್ಯ) ಸೂಚ್ಯಂಕ ಪಟ್ಟಿಯನ್ನು (Annual Misery Index) ಬಿಡುಗಡೆ ಮಾಡಿದ್ದಾರೆ. ಮುಖ್ಯವಾಗಿ ದೇಶಗಳ ಆರ್ಥಿಕ ಸ್ಥಿತಿಯನ್ನು ಆಧರಿಸಿ ನಡೆಸಲಾದ ಸರ್ವೇಯ ಫಲಿತಾಂಶ ಪಟ್ಟಿ ಇದಾಗಿದೆ. ಟಾಪ್​ 15 ದೇಶಗಳನ್ನು ಹ್ಯಾಂಕೆ ಇಲ್ಲಿ ಉಲ್ಲೇಖಿಸಿದ್ದಾರೆ.

ಜಿಂಬಾಬ್ವೆ ಒಂದು ಆಫ್ರಿಕನ್ ದೇಶವಾಗಿದೆ. ಸದ್ಯ ಸಿರಿಯಾ, ಸುಡಾನ್​, ಉಕ್ರೇನ್​​ ದೇಶಗಳಲ್ಲಿ ಯುದ್ಧದ ಸ್ಥಿತಿ ಇದೆ. ಅಲ್ಲೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಂಘರ್ಷ ನಡೆಯುತ್ತಲೇ ಇದೆ. ಹಾಗಿದ್ದಾಗ್ಯೂ ಆರ್ಥಿಕತೆ ವಿಷಯದಲ್ಲಿ ಜಿಂಬಾಬ್ವೆಯಲ್ಲಿರುವಷ್ಟ ದಾರಿದ್ರ್ಯ ಅಲ್ಲೆಲ್ಲ ಇಲ್ಲ. ಆದರೆ ಈ ದೇಶಗಳೂ ಕೂಡ ಟಾಪ್​ 15ರ ಲಿಸ್ಟ್​​ನಲ್ಲಿ ಸೇರಿವೆ. ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ.243.8ರಷ್ಟಿದೆ. ಇನ್ನುಳಿದಂತೆ ಉಕ್ರೇನ್​, ಸಿರಿಯಾ, ಸುಡಾನ್​ಗಳಲ್ಲಿ ಕೂಡ ಹಣದುಬ್ಬರ ಗಗನಚುಂಬಿಯಾಗಿದೆ ಎಂದು ಹೇಳಲಾಗಿದೆ. ಅಂದಹಾಗೇ, ಸ್ಟೀವ್ ಹ್ಯಾಂಕೆ ಅವರು ಸುಮಾರು 157 ದೇಶಗಳ ಹಣದುಬ್ಬರ, ನಿರುದ್ಯೋಗ ಪ್ರಮಾಣ, ಬ್ಯಾಂಕ್​ ಸಾಲ, ​ಒಂದು ದೇಶದ ಪ್ರತಿ ವ್ಯಕ್ತಿಯ ತಲಾ ಆದಾಯದ ಜಿಡಿಪಿ ಮತ್ತಿತರ ವಿಷಯಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದರು. ಈ 157 ದೇಶಗಳಲ್ಲಿ ಅಮೆರಿಕ 103ನೇ ಸ್ಥಾನದಲ್ಲಿದ್ದರೆ, ಯುಎಸ್​ 134ನೇ ಸ್ಥಳದಲ್ಲಿದೆ.

ಇದನ್ನೂ ಓದಿ: Economic review : ಭಾರತದ ಆರ್ಥಿಕತೆಗೆ ಎಲ್‌ ನಿನೋ ಎಫೆಕ್ಟ್?‌ ಹಣಕಾಸು ಸಚಿವಾಲಯ ವರದಿಯಲ್ಲೇನಿದೆ

ಸ್ಟೀವ್​ ಅವರು ಈ ಸೂಚ್ಯಂಕ ಬಿಡುಗಡೆ ಮಾಡುವ ಜತೆಗೆ, ಆಯಾ ದೇಶಗಳಲ್ಲಿನ ದಾರಿದ್ರ್ಯಕ್ಕೆ ಬಹುಮುಖ್ಯವಾದ ಅಂಶ ಯಾವುದು ಎಂಬುದನ್ನೂ ಉಲ್ಲೇಖಿಸಿದ್ದಾರೆ. ಅದರ ಅನ್ವಯ ಜಿಂಬಾಬ್ವೆ ಅತ್ಯಂತ ದಾರಿದ್ರ್ಯ ದೇಶ ಎನ್ನಿಸಿಕೊಳ್ಳಲು ಅಲ್ಲಿರುವ ಮಿತಿಮೀರಿದ ಹಣದುಬ್ಬರವೇ ಕಾರಣ ಎನ್ನಲಾಗಿದೆ. ಹಾಗೇ, 103ನೇ ಸ್ಥಿತಿಯಲ್ಲಿರುವ ಭಾರತಕ್ಕೆ ಸಂಕಷ್ಟವಾಗಿ ಕಾಡುತ್ತಿರುವುದು ನಿರುದ್ಯೋಗ ಸಮಸ್ಯೆ ಎಂದು ಸ್ಟೀವ್ ವಿಶ್ಲೇಷಿಸಿದ್ದಾರೆ. ಇನ್ನು ಜಿಂಬಾಬ್ವೆ ಬಿಟ್ಟರೆ ಎರಡನೇ ಸ್ಥಾನದಲ್ಲಿ ವೆನೆಜುವೆಲಾ, 3ನೇ ಸ್ಥಾನದಲ್ಲಿ ಸಿರಿಯಾ ದೇಶಗಳಿವೆ. ಇನ್ನುಳಿದಂತೆ ಕ್ರಮವಾಗಿ ಲೆಬನಾನ್, ಸುಡಾನ್, ಅರ್ಜಿಂಟೀನಾ, ಯೆಮೆನ್​, ಉಕ್ರೇನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ ದೇಶಗಳು ಇವೆ.

ಯಾವ ದೇಶ ಟಾಪ್​​ನಲ್ಲಿದೆ?
ಸ್ಟೀವ್ ಹ್ಯಾಂಕೆ ಅವರ ಪಟ್ಟಿಯಲ್ಲಿ 157ನೇ ಸ್ಥಾನದಲ್ಲಿ ಇರುವುದು ಸ್ವಿಜರ್​ಲ್ಯಾಂಡ್​. ಅಂದರೆ ಇಲ್ಲಿ ನಿರುದ್ಯೋಗ, ಹಣದುಬ್ಬರ, ಬ್ಯಾಂಕ್ ಸಾಲಗಳೆಲ್ಲ ಕಡಿಮೆಯಿರುವುದಾಗಿ ಅವರು ಅಂಕಿ-ಸಂಖ್ಯೆ ನೀಡಿದ್ದಾರೆ. 156ನೇ ಸ್ಥಾನದಲ್ಲಿ ಕುವೈತ್​, 155ರಲ್ಲಿ ಐರ್ಲೆಂಡ್ ದೇಶಗಳಿವೆ. ಅದು ಬಿಟ್ಟರೆ ಕ್ರಮವಾಗಿ ಜಪಾನ್, ಮಲೇಷ್ಯಾ, ತೈವಾನ್, ನೈಜರ್, ಥೈಲ್ಯಾಂಡ್, ಟೋಗೋ ಮತ್ತು ಮಾಲ್ಟ್​ ದೇಶಗಳಿವೆ. ನಮ್ಮ ನೆರೆರಾಷ್ಟ್ರ ಪಾಕಿಸ್ತಾನ, ಸದ್ಯ ಆರ್ಥಿಕತೆಯಲ್ಲಿ ಕಂಗೆಟ್ಟಿ ಹೋಗಿರುವ ಪಾಕಿಸ್ತಾನ ಈ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದು, ಇಲ್ಲಿನ ದಾರಿದ್ರ್ಯಕ್ಕೆ ಬಹುಮುಖ್ಯ ಕೊಡುಗೆ ಕೊಟ್ಟಿದ್ದು ಹಣದುಬ್ಬರದ ಭೂತ ಎನ್ನಲಾಗಿದೆ.

Exit mobile version