ಬೆಂಗಳೂರು: ಆರು ವರ್ಷದ ನಂತರ ರಾಜ್ಯಸಭೆ ಚುನಾವಣೆ ನಡೆಯುತ್ತಿದೆ. ಈ ಬಾರಿಯೂ ಅಡ್ಡಮತದಾನದ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿಯೂ ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಆಗಿತ್ತು. ಅದೂ ಜೆಡಿಎಸ್‌ನ ಏಳು ಶಾಸಕರೇ ಅಡ್ಡ ಮತದಾನ ಮಾಡಿದ್ದರು. ಈ ಬಾರಿಯೂ ಇದೇ ಸನ್ನಿವೇಶ ಎದುರಾಗಿದ್ದು, ಈ ಬಾರಿಯೂ ಜೆಡಿಎಸ್ ಶಾಸಕರೇ ಗುರಿಯಾಗಿದ್ದಾರೆ.
2016ರ ಜೂನ್‌ನಲ್ಲಿಯೂ ರಾಜ್ಯಸಭೆ ಚುನಾವಣೆ ನಡೆಯಿತು. ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಿದ್ದ ಕಾರಣಕ್ಕೆ ಕಾಂಗ್ರೆಸ್‌ಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಈ ಮತಗಳ ಆಧಾರದಲ್ಲಿ ಆಸ್ಕರ್ ಫರ್ನಾಂಡೀಸ್ ಹಾಗೂ ಜೈರಾಮ್ ರಮೇಶ್ ಆಯ್ಕೆ ಖಚಿತವಾಗಿತ್ತು. ಬಿಜೆಪಿಯಿಂದ ಒಬ್ಬ ಅಭ್ಯರ್ಥಿಗೆ ಅವಕಾಶವಿದ್ದು, ನಿರ್ಮಲಾ ಸೀತಾರಾಮನ್ ಆಯ್ಕೆಯಾಗುವುದಿದ್ದರು. ಜೆಡಿಎಸ್‌ಗೆ ಆಗಲೂ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಷ್ಟು ಮತ ಇರಲಿಲ್ಲ. ಆದರೂ ಜೆಡಿಎಸ್‌ನಿಂದ ಬಿ.ಎಂ. ಫಾರೂಕ್ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್ ಮೂರನೇ ಅಭ್ಯರ್ಥಿ ಆಯ್ಕೆ ಆಗಲು ಸಾಕಷ್ಟು ಮತ ಇಲ್ಲದಿದ್ದರೂ ಕೆ.ಸಿ. ರಾಮಮೂರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು.
ಇದನ್ನೂ ಓದಿ | ಇಂದು ರಾಜ್ಯಸಭೆ ಮತದಾನ, ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯುವುದು ಹೀಗೆ
ಕೊನೆಗೆ, ಜೆಡಿಎಸ್‌ನ ಎಂಟು ಶಾಸಕರು- ಜಮೀರ್ ಅಹಮದ್ ಖಾನ್, ಚೆಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಗೋಪಾಲಯ್ಯ, ಭೀಮಾ ನಾಯ್ಕ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ- ಅಡ್ಡಮತದಾನ ಮಾಡಿದರು. ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಪರ ಮತದಾನ ಮಾಡಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಜಯಗಳಿಸಲು ಕಾರಣರಾದರು.
ಎಂಟು ಜನರಲ್ಲಿ ಗೋಪಾಲಯ್ಯ ತಮ್ಮ ತಪ್ಪಿನ ಅರಿವಾಗಿ ಮತ್ತೆ ಕುಮಾರಸ್ವಾಮಿ ಬಳಿಗೆ ಬಂದರು. ತಮ್ಮ ತಪ್ಪನ್ನು ಕ್ಷಮಿಸಿ, ಪಕ್ಷದಲ್ಲೇ ಇರುವೆ ಎಂಬ ಗೋಪಾಲಯ್ಯ ಮಾತನ್ನು ಮನ್ನಿಸಿದ ಎಚ್.ಡಿ. ದೇವೇಗೌಡರೂ ಗೋಪಾಲಯ್ಯ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಉಳಿದ ಏಳು ಜನರ ವಿರುದ್ಧ ಸ್ಪೀಕರ್‌ಗೆ ದೂರು, ನಂತರ ವರ್ಷಗಳವರೆಗೆ ಸ್ಪೀಕರ್ ಕಚೇರಿಯಲ್ಲೇ ಕೊಳೆಯುತ್ತಿತ್ತು ದೂರು. ತಮ್ಮ ಅಭ್ಯರ್ಥಿ ಜಯಗಳಿಸಲು ಸಹಕರಿಸಿದ ಶಾಸಕರ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್ ಅವರನ್ನು ತಡೆಯಿತು. ನ್ಯಾಯಾಲಯದ ಸೂಚನೆಗಳೆಲ್ಲ ಬಂದರೂ ಶಾಸಕರಿಗೆ ಒಂದಷ್ಟು ಕಿರಿಕಿರಿ ಆಗಿದ್ದು ಬಿಟ್ಟರೆ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ.
ಈ ಬಾರಿಯೂ ರಾಜ್ಯಸಭೆ ಚುನಾವಣೆ ನಡೆಯುತ್ತಿದೆ. ಈಗಲೂ ಜೆಡಿಎಸ್ ಶಾಸಕರೇ ಅಡ್ಡಮತದಾನ ಮಾಡುವ ಮೂಲಕ ಜೆಡಿಎಸ್ ಕೋಟೆಯನ್ನು ಒಡೆಯಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ನೇರವಾಗಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದು ಮನವಿ ಮಾಡುತ್ತಾರೆ. ಕುಮಾರಸ್ವಾಮಿಯವರು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಈಗಾಗಲೆ ಕೋಲಾರ ಶಾಸಕ ಶ್ರೀನಿವಾಸಗೌಡ ಅಡ್ಡಮತದಾನ ಮಾಡಿದ್ದಾರೆ. ಅವರು ಅಡ್ಡಮತದಾನ ಮಾಡುವುದು ಖಚಿತ ಎಂದು ಸ್ವತಃ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ತಿಳಿಸಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನವಿದೆ, ಆದರೂ ಜೆಡಿಎಸ್‌ಗೇ ಮತ ನೀಡಿದ್ದೇನೆ ಎಂದಿದ್ದಾರಾದರೂ ಫಲಿತಾಂಶದ ನಂತರವೇ ವಿಚಾರ ತಿಳಿಯಲಿದೆ.
ಕಳೆದ ಬಾರಿ ಅಡ್ಡಮತದಾನ ಮಾಡಿ ದೂರು ಸಲ್ಲಿಕೆಯಾಗಿದ್ದ ಏಳು ಶಾಸಕರೆಲ್ಲರೂ ಈಗ ಕಾಂಗ್ರೆಸ್‌ನಲ್ಲೇ ಇದ್ದಾರೆ. ಅಂದರೆ ಈ ಬಾರಿ ಯಾರ‍್ಯಾರು ಅಡ್ಡಮತದಾನ ಮಾಡುತ್ತಾರೊ ಅವರು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಜತೆಗೆ ಇರುತ್ತಾರೆ ಎನ್ನುವುದರ ಮುನ್ಸೂಚನೆ ನೀಡುತ್ತದೆ. ಶುಕ್ರವಾರ ಸಂಜೆಯೊಳಗೆ ಯಾರ‍್ಯಾರು ಯಾವ ಪಕ್ಷದಲ್ಲಿ ಭವಿಷ್ಯ ಕಂಡುಕೊಳ್ಳುತ್ತಾರೆ ಎನ್ನುವುದನ್ನು ತೋರಿಸಿಕೊಡುತ್ತದೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!