ರಮೇಶ ದೊಡ್ಡಪುರ, ಬೆಂಗಳೂರು
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ನಾಲ್ಕು ಜನರನ್ನು ಆಯ್ಕೆ ಮಾಡಲಾಗಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಬಿ.ಎಸ್. ಯಡಿಯೂರಪ್ಪ ಉತ್ತರಾಧಿಕಾರಿಯಾಗಬೇಕು ಎನ್ನಲು ಹೊರಟ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎರಡನೇ ಬಾರಿ ನಿರಾಸೆಯ ರುಚಿಯನ್ನು ಬಿಜೆಪಿ ವರಿಷ್ಠರು ತೋರಿಸಿದ್ದಾರೆ.
ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕೊಪ್ಪಳದ ಹೇಮಲತಾ ನಾಯಕ್, ಮಾಜಿ ಸಚಿವ ಲಕ್ಷ್ಮಣ ಸವದಿ ಹಾಗೂ ಎಸ್. ಕೇಶವ ಪ್ರಸಾದ್ ಅವರನ್ನು ಆಯ್ಕೆ ಮಾಡಿ ಬಿಜೆಪಿ ಘೋಷಿಸಿದೆ. ಇನ್ನೇನು ವಿಧಾನಸಭೆ ಚುನಾವಣೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇರುವಂತೆ ವಿಧಾನ ಪರಿಷತ್ಗೆ ಪುತ್ರ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ, ಕೂಡಲೆ ಸಚಿವರನ್ನಾಗಿಸುವ ಮಾಜಿ ಸಿಎಂ ಯಡಿಯೂರಪ್ಪ ಅವರ ಅಚ್ಚರಿಯ ಕಾರ್ಯತಂತ್ರಕ್ಕೆ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡುವ ಮುನ್ಸೂಚನೆ ನೀಡಿದೆ.
2018ರ ಚುನಾವಣೆ ವೇಳೆಯೂ ನಿರಾಸೆ
2018ರ ವಿಧಾನಸಭೆ ಚುನಾವಣೆಗೂ ಮುನ್ನ ವಿಜಯೇಂದ್ರ ಯಾವುದೇ ಸಂಘಟನಾತ್ಮಕ ಹೊಣೆ ಹೊತ್ತಿರಲಿಲ್ಲ. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ತಾವು ಪ್ರತಿನಿಧಿಸುತ್ತಿದ್ದ ವರುಣಾ ಕ್ಷೇತ್ರವನ್ನು ಪುತ್ರ ಡಾ. ಯತೀಂದ್ರ ಅವರಿಗೆ ಬಿಟ್ಟುಕೊಟ್ಟರು. ಹಳೆ ಮೈಸೂರಿನಲ್ಲಿ ಬಿಜೆಪಿ ಬಲವಾಗಿಲ್ಲ, ಅಲ್ಲಿ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸಿದರೆ ಒಳ್ಳೆಯದು ಎಂದು ಯಡಿಯೂರಪ್ಪ ಯೋಚಿಸಿದರು. ಚುನಾವಣೆ ಟಿಕೆಟ್ ಘೋಷಣೆ ಆಗುವುದಕ್ಕೂ ಮುನ್ನವೇ ವಿಜಯೇಂದ್ರ ಕಣಕ್ಕಿಳಿದು ವರುಣಾದಲ್ಲಿ ಹವಾ ಸೃಷ್ಟಿಸಿದರು. ಇಲ್ಲಿ ವಿಜಯೇಂದ್ರ ಗೆದ್ದರೆ ತಮ್ಮ ಉತ್ತರಾಧಿಕಾರಿಯಾಗಲು ದಾರಿ ಸುಗಮ ಎಂಬ ಲೆಕ್ಕಾಚಾರವನ್ನೂ ಬಿಎಸ್ವೈ ಹೊಂದಿದ್ದರು.
ಆದರೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಂತೆ ಬಿಜೆಪಿ ವರಿಷ್ಠರು ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದರು. ಸ್ವತಃ ಯಡಿಯೂರಪ್ಪ ಅವರೇ ವರುಣಾಕ್ಕೆ ತೆರಳಿ ಬಹಿರಂಗವಾಗಿ ಈ ವಿಚಾರವನ್ನು ಘೋಷಣೆ ಮಾಡುವಂತೆ ಮಾಡಲಾಯಿತು. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ 113ಕ್ಕಿಂತ ಕೇವಲ ಒಂಭತ್ತು ಸ್ಥಾನ ಕಡಿಮೆ ಪಡೆಯಿತು. ಇದು ಸರ್ಕಾರ ರಚನೆಯಲ್ಲಿ ಸಾಕಷ್ಟು ತೊಡಕು ಉಂಟುಮಾಡಿತು. ಈ ಸಮಯದಲ್ಲಿ ಯಡಿಯೂರಪ್ಪ ಬಿಜೆಪಿ ವರಿಷ್ಠರನ್ನು ದೂಷಿಸಿದ್ದರು. ವಿಜಯೇಂದ್ರಗೆ ವರುಣಾದಲ್ಲಿ ಟಿಕೆಟ್ ನೀಡಿದ್ದರೆ ಕನಿಷ್ಠ 8-10 ಸೀಟುಗಳು ಹಳೆ ಮೈಸೂರಿನಲ್ಲಿ ಬರುತ್ತಿದ್ದವು. ಇವರುಗಳೇ ಎಲ್ಲವನ್ನೂ ಹಾಳು ಮಾಡಿದರು ಎಂದು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | ರಾಜ್ಯದಲ್ಲಿ ಯಾವುದೇ ಚುನಾವಣೆ ಎದುರಿಸಲು ಬಿಜೆಪಿ ಸಂಪೂರ್ಣ ಸಿದ್ಧ: ನಳಿನ್ ಕುಮಾರ್ ಕಟೀಲ್
ಈಗ ಎರಡನೇ ಬಾರಿ ತಪ್ಪಿದ ಲೆಕ್ಕಾಚಾರ
ಇದೀಗ ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ ಆಗಿದ್ದಾರೆ. ಅಧಿಕಾರದ ನಡುವೆಯೇ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದೆ. ಆದರೆ ಜನತಾ ಪರಿವಾರದಿಂದ ಬಂದಿರುವ ಬೊಮ್ಮಾಯಿ, ಯಾವ ಕೋನದಿಂದಲೂ ಲಿಂಗಾಯತ ನಾಯರು ಎಂದು ಕಾಣುತ್ತಲೇ ಇಲ್ಲ. ವೀರಶೈವ ಲಿಂಗಾಯತ ಸಮುದಾಯ ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ಬಿಟ್ಟು ಬೇರೊಬ್ಬರನ್ನು ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಚುನಾವಣೆಯಲ್ಲಿ ಈ ವಿಚಾರರವೇ ಮುಳುವಾಗಬಹುದು ಎಂದು, ವಿಜಯೇಂದ್ರಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಯ ಒಂದು ಗುಂಪಿನ ವಾದವಾಗಿತ್ತು.
ಯಡಿಯೂರಪ್ಪ ನಂತರದಲ್ಲಿ ಸಮುದಾಯದ ನಾಯಕತ್ವವನ್ನು ವಿಜಯೇಂದ್ರಗೆ ಕೊಟ್ಟರೆ ಚುನಾವಣೆಯಲ್ಲಿ ಲಾಭವಾಗುತ್ತದೆ. ಚುನಾವಣೆಗೂ ಮುನ್ನವೇ ಅವರನ್ನು ಸಚಿವರನ್ನಾಗಿ ಮಾಡಿದರೆ ಸಮುದಾಯಕ್ಕೆ ಒಂದು ಸಂದೇಶ ನೀಡಿದಂತಾಗುತ್ತದೆ. ಅದಕ್ಕೂ ಮುನ್ನ ವಿಧಾನ ಪರಿಷತ್ಗೆ ಆಯ್ಕೆ ಮಾಡಬೇಕು ಎಂದು ಯಡಿಯೂರಪ್ಪ ಮನಸ್ಸು ಮಾಡಿದ್ದರು. ಹದಿನೈದು ದಿನದ ಹಿಂದೆ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಇಂಥದ್ದೊಂದು ಸರ್ಜಿಕಲ್ ಸ್ಟ್ರೈಕ್ ಬಾಂಬ್ ಅನ್ನು ಯಡಿಯೂರಪ್ಪ ಹಾಕಿದರು.
ವರಿಷ್ಠರಿಗೇ ಟಾಸ್ಕ್ ಕೊಡುವುದರಲ್ಲಿ ಯಡಿಯೂರಪ್ಪ ನಿಸ್ಸೀಮರು. ತಮ್ಮ ನಿರ್ಧಾರವನ್ನು ಅಚ್ಚರಿಯೆಂಬಂತೆ ಪ್ರಕಟಿಸಿ, ಅದಕ್ಕೆ ತಕ್ಕಂತೆ ವರಿಷ್ಠರು, ಸಂಘಟನೆಯೇ ದಾರಿಗೆ ಬರುವಂತೆ ಅನೇಕ ಬಾರಿ ಮಾಡಿದ್ದಾರೆ. ಬಹಳಷ್ಟು ಸಂದರ್ಭದಲ್ಲಿ ಇದು ಪಕ್ಷಕ್ಕೆ ಲಾಭವನ್ನೇ ತಂದಿದೆ. ಆದರೆ ಕೆಲವೊಮ್ಮೆ ಸಂಘಟನೆಯಲ್ಲಿ ಭಿನ್ನಮತಕ್ಕೂ ಕಾರಣವಾಗಿದೆ. ಈಗಲೂ ಅಂತಹದ್ದೇ ಟಾಸ್ಕ್ ನೀಡಲು ಯಡಿಯೂರಪ್ಪ ಮುಂದಾಗಿದ್ದರು.
ಈ ಬಾರಿ ವಿಧಾನ ಪರಿಷತ್ಗೆ ವಿಜಯೇಂದ್ರ ಹೆಸರು ಎಲ್ಲಿಯೂ ಚಾಲ್ತಿಯಲ್ಲಿರಲಿಲ್ಲ. ಕೋರ್ ಕಮಿಟಿಯಲ್ಲಿ ಯಡಿಯೂರಪ್ಪ ಈ ಹೆಸರು ಹೇಳುತ್ತಿದ್ದಂತೆಯೇ ಎಲ್ಲರೂ ಒಮ್ಮೆ ಶಾಕ್ ಆಗಿದ್ದರು. ಆದರೆ ಎದುರು ಮಾತಾಡುವ ಪ್ರಮೇಯ ಇರಲಿಲ್ಲ. ಅಂತಿಮವಾಗಿ, ರಾಜ್ಯದಿಂದ ಶಿಫಾರಸು ಮಾಡುವ ಪಟ್ಟಿಯಲ್ಲಿ ವಿಜಯೇಂದ್ರ ಹೆಸರನ್ನೂ ಸೇರಿಸಿ ಕಳಿಸಲಾಯಿತು. ದೆಹಲಿ ವಲಯದಲ್ಲಿ ಅದೇಕೊ ವಿಜಯೇಂದ್ರ ಹೆಸರು ಅಂತಿಮಗೊಳ್ಳುವ ಮುನ್ಸೂಚನೆ ಕಾಣುತ್ತಿರಲಿಲ್ಲ.
ಇದೇ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಶನಿವಾರವಷ್ಟೆ ತರಾತುರಿಯಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದರು. ಭೇಟಿಯಾಗುವುದಾಗಿ ಅಮಿತ್ ಷಾ ಸಮಯ ನೀಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಭೇಟಿ ಮಾಡಲಾಗದೆ ಕೇವಲ ದೂರವಾಣಿಯಲ್ಲಿ ಮಾತುಕತೆ ನಡೆಸಿ ಬೊಮ್ಮಾಯಿ ಹಿಂದಿರುಗಿದ್ದರು. ಅಲ್ಲಿಗೆ, ವಿಜಯೇಂದ್ರ ಅವರ ಹೆಸರನ್ನು ಅಂತಿಮಗೊಳಿಸಲು ಸಿಎಂ ಪ್ರಯತ್ನವೂ ವಿಫಲವಾಗಿತ್ತು. ಒಟ್ಟಿನಲ್ಲಿ ಎರಡನೇ ಬಾರಿಗೆ ವಿಜಯೇಂದ್ರ ಜನಪ್ರತಿನಿಧಿಯಾಗುವ ಅವಕಾಶ ಕೈತಪ್ಪಿದಂತಾಗಿದೆ.
ಸಂತೋಷ್ ಕೈ ಮೇಲು
2018ರ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಿನ್ನಮತದ್ದೇ ಕಾರುಬಾರು. ಆಗಲೂ ಅನೇಕ ಬಾರಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಯಡಿಯೂರಪ್ಪ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಇದೀಗ ಟಿಕೆಟ್ ಘೋಷಣೆ ಆಗಿರುವ ನಾಲ್ವರ ಪೈಪಿ ಮೂವರು ಸಂತೋಷ್ ಪರ ಎಂದು ಹೇಳಲಾಗುತ್ತಿದೆ. ಕೇಶವ ಪ್ರಸಾದ್ ಅವರು ಬಹಿರಂಗವಾಗಿಯೇ ಸಂತೋಷ್ ಜತೆ ಗುರುತಿಸಿಕೊಂಡವರು. ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಕಳೆದ ಬಾರಿ ಸೋತರೂ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ರೂಪಿಸಲು ಮುಂದಾಗಿದ್ದವರು ಸಂತೋಷ್. ಹೇಮಲತಾ ಅವರು ಸಂಸದ ಕರಡಿ ಸಂಗಣ್ಣ ಅವರ ಅನುಯಾಯಿ. ಸಂಗಣ್ಣ ಹಾಗೂ ಸಂರೋಷ್ ಇತ್ತೀಚಿನ ವರ್ಷಗಳಲ್ಲಿ ಆತ್ಮೀಯರು. ಛಲವಾದಿ ನಾರಾಯಣಸ್ವಾಮಿ ಪ್ರಾರಂಭದಲ್ಲಿ ಯಡಿಯೂರಪ್ಪ ಪರ ಇದ್ದರಾದರೂ ಈಗ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡವರು. ನಳಿನ್ ಕುಮಾರ್ ಕಟೀಲ್ ಜತೆಗೂ ಉತ್ತಮ ಬಾಂಧವ್ಯ ಹೊಂದಿರುವವರು. ಒಟ್ಟಿನಲ್ಲಿ ನಾಲ್ಕರಲ್ಲಿ ಕನಿಷ್ಠ ಮೂವರು ಸಂತೋಷ್ ಅವರ ಆಯ್ಕೆ ಎಂದು ಸ್ಪಷ್ಟ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಈಗ 2023ರಕ್ಕೂ ಮುನ್ನ ಅಂತಹದ್ದೇ ಹಗ್ಗಜಗ್ಗಾಟಕ್ಕೆ ಈ ಘಟನೆ ನಾಂದಿ ಹಾಡುವುದೇ ಕಾದುನೋಡಬೇಕಿದೆ.
ಇನ್ನೂ ಇದೆ ಅವಕಾಶ
ಈಗ ವಿಜಯೇಂದ್ರಗೆ ಟಿಕೆಟ್ ತಪ್ಪಿದಾಕ್ಷಣ ಎಲ್ಲವೂ ಮುಕ್ತಾಯವಾಗಿಲ್ಲ. ವಿಧಾನ ಪರಿಷತ್ ಸದಸ್ಯರಾಗದೆಯೂ ಸಚಿವರಾಗಬಹುದು. ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆಯೇ ವಿಜಯೇಂದ್ರ ಸಚಿವರಾದರೆ, ಮುಂದಿನ ಆರು ತಿಂಗಳಲ್ಲಿ ವಿಧಾನ ಸಭೆ ಅಥವಾ ಪರಿಷತ್ಗೆ ಆಯ್ಕೆ ಆಗಬೇಕಾಗುತ್ತದೆ. ಆದರೆ ಇನ್ನು ಮೂರ್ನಾಲ್ಕು ತಿಂಗಳು ಕಳೆದ ನಂತರ ಸಚಿವರನ್ನಾಗಿಸಿದರೆ ಚುನಾವಣೆಗೆ ಆರು ತಿಂಗಳು ಮಾತ್ರ ಉಳಿದಿರುತ್ತದೆ. ಆಗ ಎಂಎಲ್ಎ ಅಥವಾ ಎಂಎಲ್ಸಿ ಆಗದೆಯೂ ವಿಜಯೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಬಹುದು.
ವಿಜಯೇಂದ್ರ ಕುರಿತು ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಗೆ ವಿಶೇಷ ಪ್ರೀತಿ ಇದೆ. ಏಪ್ರಿಲ್ ಒಂದರಂದು ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರಸ್ವಾಮೀಜಿಯವರ ಜಯಂತಿ ಸಂದರ್ಭದಲ್ಲಿ ವಿಜಯೇಂದ್ರ ಕುರಿತು ಅಮಿತ್ ಷಾ ಆಡಿತ ಮಾತುಗಳೇ ಇದಕ್ಕೆ ಸಾಕ್ಷಿ. ಈ ಹಿಂದೆಯೂ ಅನೇಕ ಬಾರಿ ವಿಜಯೇಂದ್ರ ನೇರವಾಗಿ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಉದಾಹರಣೆ ಇದೆ. ಚುನಾವಣೆ ಹತ್ತಿರವಾದಂತೆ ಬಿಜೆಪಿಯಲ್ಲಿ ಅಚ್ಚರಿಯ ಘಟನೆಗಳು ನಡೆಯುವ ಎಲ್ಲ ಲಕ್ಷಣಗಳೂ ಇವೆ.
ಇದನ್ನೂ ಓದಿ | ತುಮಕೂರು ಕಾರ್ಯಕ್ರಮದಿಂದ ಬಿಜೆಪಿ ನಿರೀಕ್ಷಿಸಿರುವ 7 ಲಾಭಗಳು