ಬೆಂಗಳೂರು: ಗುತ್ತಿಗೆದಾರರಿಗಷ್ಟೆ ಸೀಮಿತವಾಗಿದ್ದ ಪರ್ಸೆಂಟೇಜ್ ಭ್ರಷ್ಟಾಚಾರದ ವಿಚಾರ ಇದೀಗ ಧಾರ್ಮಿಕ ಕ್ಷೇತ್ರಕ್ಕೂ ಕಾಲಿಟ್ಟಿದೆ. ಮಠಗಳಿಗೆ ಸರ್ಕಾರ ನಿಗದಿ ಮಾಡಿರುವ ಅನುದಾನವನ್ನು ಪಡೆಯಲು ಅಧಿಕಾರಿಗಳಿಗೆ 30% ಲಂಚ ನೀಡಬೇಕು ಎಂಬ ದಿಂಗಾಲೇಶ್ವರ ಸ್ವಾಮೀಜಿಯವರ ಹೇಳಿಕೆ ರಾಜ್ಯದಲ್ಲಿ ಮತ್ತೊಂದು ಹಂತದ ರಾಜಕೀಯ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಬಾಗಲಕೋಟೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಐದು ದಿನಗಳ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಈ ಮಾತನ್ನು ಹೇಳಿದ್ದರು.
ಮಠಗಳಿಗೆ ಸರ್ಕಾರ ನೀಡುವ ಅನುದಾನ ಪೆಡೆಯಬೇಕೆಂದರೆ 30% ಕಮಿಷನ್ ನೀಡಬೇಕಿದೆ. ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ. ಇಷ್ಟು ಹಣ ನೀಡದಿದ್ದರೆ ಹಣ ಬಿಡುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳು ನೇರವಾಗಿ ಹೇಳುತ್ತಾರೆ. ರಾಜ್ಯದಲ್ಲಿ ಬುದ್ಧಿಗೇಡಿ ಸರ್ಕಾರವಿದೆ” ಎಂದು ಸ್ವಾಮೀಜಿ ಹೇಳಿದ್ದರು.
ಈಗಾಗಲೆ ರಾಜ್ಯ ಸರ್ಕಾರ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತದೆ ಎಂಬ ಆರೋಪವಿದೆ. ಈ ನಡುವೆಯೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ, ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆಯನ್ನೂ ನೀಡಿದ್ದಾರೆ. ಈ ನಡುವೆ ಸ್ವಾಮೀಜಿಯವರ ಮಾತು ರಾಜ್ಯಾದ್ಯಂತ ರಾಜಕೀಯ ಹೇಳಿಕೆಗಳಿಗೆ ಕಾರಣವಾಗಿದೆ. ಈ ಕುರಿತು ಗದಗದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಾಚಿವ ಎಚ್.ಕೆ. ಪಾಟೀಲ, ಮಠಗಳಿಗೆ ನೀಡಿರುವ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಸರ್ಕಾರದಲ್ಲಿದ್ದರೆ ಇವರನ್ನು ದೇವರೇ ಕಾಪಾಡಬೇಕು. ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ಹಿಂದೆ ವಿಧಾನ ಪರಿಷತ್, ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಇಂತಹ ಮನೋಭಾವ ವ್ಯಕ್ತಪಡಿಸಿದ್ದರು. ನಂತರ ಗುತ್ತಿಗೆದಾರರು ಲಂಚ ಆರೋಪ ಮಾಡಿ ಬಿಜೆಪಿ ವರಿಷ್ಠರಾ ಪ್ರಧಾನಿ ನರೇಂದ್ರ ಮೋದಿ( Narendra Modi), ಜೆ.ಪಿ. ನಡ್ಡಾ (J.P. Nadda) ಅವರಿಗೆ ಪತ್ರ ಬರೆದರು. ಇದೀಗ ಸ್ವಾಮೀಜಿಯವರೇ ಬಹಿರಂಗವಾಗಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಈ ಭ್ರಷ್ಟಾಚಾರ ಸ್ವತಃ ಬಿಜೆಪಿ ಕಾರ್ಯಕರ್ತನನ್ನೇ ಬಲಿ ಪಡೆದಿದೆ. ಇದರ ಬಗ್ಗೆ ಇನ್ನೂ ಏನಾದರೂ ಹೇಳಲು ಉಳಿದಿದೆಯೇ ಎಂದು ವ್ಯಂಗ್ಯ ಮಾಡಿದರು.
ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಠಗಳಿಗೆ ಅನುದಾನ ಬಿಡುಗಡೆ ಮಾಡಿದ್ರೆ ಶೇ 30 ರಷ್ಟು ಕಮಿಷನ್ ಕೊಡಬೇಕು ಎಂದು ಈಗಾಗಲೇ ಗದುಗಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಸ್ವತಃ ಸ್ವಾಮೀಜಿಯವರೇ ಈ ಮಾತನ್ನು ಹೇಳಿದ್ದಾರೆ ಎಂದರೆ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ.
ಮಠಗಳ ಅನುದಾನಕ್ಕೆ ಲಂಚ ನೀಡಬೇಕು ಎನ್ನುವ ಕುರಿತು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ತಿಳಿಸಿದ್ದರು. ಇದೇ ವೇಳೆ ಮದ್ಯಾಹ್ನ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ. ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ. ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ. ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30% ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು. 10% ಡಿಸ್ಕೌಂಟ್ ಯಾಕೆ? ಅದನ್ನೂ ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ಬಿಜೆಪಿಯವರದ್ದು ಯಾವ ರೀತಿಯ ಧರ್ಮ ರಕ್ಷಣೆ? ಎಂದಿದ್ದಾರೆ.
ಹೆಚ್ಚಿನ ಓದಿಗಾಗಿ | ಸಂತೋಷ್ ಆತ್ಮಹತ್ಯೆ: ಎಲೆಕ್ಷನ್ ವರ್ಷದಲ್ಲಿ BJPಗೆ ಟೆನ್ಷನ್, “ಕೈ”ಗೆ ಅಸ್ತ್ರ
ಉತ್ತರ ಕರ್ನಾಟಕಕ್ಕೆ ಬರೋದು ಕಡ್ಡಿ ಮಾತ್ರ !
ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಒಂದು ಪ್ರಸಂಗವನ್ನು ಉದಾಹರಿಸಿದರು. ಒಂದು ಕಾರ್ಕ್ರಮದಲ್ಲಿ ಭಾಷಣ ಮಾಡುತ್ತಿದ್ದವನಿಗೆ ಬಹಳ ಬಾಯಾರಿಕೆ ಆಯಿತು. ಯಾರಾದರೂ ಸ್ವಲ್ಪ ನೀರು ಕೊಡಿ ಎಂದು ಆತ ಕೇಳಿದ. ಆದರೆ ಯಾರೂ ನೀರು ತಂದು ಕೊಡಲಿಲ್ಲ. ಅಲ್ಲೆಲ್ಲೊ ದೋರದಲ್ಲಿ ಐಸ್‌ಕ್ಯಾಂಡಿ ಮಾರುತ್ತಿದ್ದ ವ್ಯಾಪಾರಿ ಒಂದು ಐಸ್‌ಕ್ಯಾಂಡಿಯನ್ನು ಒಬ್ಬನ ಬಳಿ ಕೊಟ್ಟು ಕಳಿಸಿದ. ಆತ ಇನ್ನೊಬ್ಬನಿಗೆ ಕೊಟ್ಟ. ಹಾಗೆಯೇ ಅನೇಕ ಜನರ ಕೈ ಬದಲಾವಣೆಯಾಗಿ ವೇದಿಕೆಯಲ್ಲಿದ್ದ ಭಾಷಣಕಾರನಿಗೆ ಬರುವ ವೇಳೆಗೆ ಐಸ್‌ಕ್ಯಾಂಡಿ ಖಾಲಿಯಾಗಿ ಕೇವಲ ಕಡ್ಡಿ ಉಳಿದಿತ್ತು. ಯಾಕಪ್ಪ ನೀರು ಕೇಳಿದರೆ ಬರೀ ಕಡ್ಡಿ ಕೊಟ್ಟಿದ್ದೀಯ ಎಂದು ಆ ವ್ಯಾಪಾರಿಯನ್ನು ಕೇಳಿದ. ನಾನು ಐಸ್‌ಕ್ಯಾಂಡಿ ಕೊಟ್ಟು ಕಳಿಸಿದ್ದೆ, ಆದರೆ ಇಲ್ಲಿದ್ದವರೆಲ್ಲ ಸ್ವಲ್ಪ ಸ್ವಲ್ಪ ಹಂಚಿಕೊಂಡು ಕೊಟ್ಟಿದ್ದರಿಂದ ನಿಮಗೆ ಕಡ್ಡಿ ಮಾತ್ರ ಸಿಕ್ಕಿದೆ ಎಂದ. ಹೀಗೆಯೇ ನವದೆಹಲಿ, ಬೆಂಗಳೂರಿನಿಂದ ಐಸ್‌ಕ್ಯಾಂಡಿ ಬಿಡುಗಡೆ ಆದರೆ ಅದು ಉತ್ತರ ಕರ್ನಾಟಕಕ್ಕೆ ಬರುವ ವೇಳೆಗೆ ಕಡ್ಡಿ ಮಾತ್ರ ಉಳಿದಿರುತ್ತದೆ” ಎಂದು ಹೇಳಿದರು.