ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಕುರಿತು ಚಿತ್ರನಟ ಹುಚ್ಚ ವೆಂಕಟ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಭಾನುವಾರ ಸಂಜೆ 6.28ಕ್ಕೆ ಹಾಗೂ ಸೋಮವಾರ ಬೆಳಗ್ಗೆ 8.48ಕ್ಕೆ ಇನ್ನೊಂದು ಇಮೇಲ್ ಮಾಡಲಾಗಿತ್ತು.
ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಫೋಟವಾಗುವಂತೆ ಬಾಂಬ್ ಇಡಲಾಗಿದೆ. ಈ ಬಾಂಬ್ ಪ್ರಭಾವ ಸುತ್ತಲಿನ 200 ಮೀಟರ್ನಷ್ಟಿರುತ್ತದೆ ಎಂದು ಕೊನೆಗೆ ಬಾಂಬ್ ಟೆರರಿಸ್ಟ್ ಎಂದು ತಿಳಿಸಲಾಗಿತ್ತು. ಎರಡೂ ಇಮೇಲ್ಗಳನ್ನು Huchaswamyvenkat96@gmail.com ಇಮೇಲ್ ವಿಳಾಸದಿಂದ ಮಾಡಲಾಗಿತ್ತು.
ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ
ಈ ಕುರಿತು ಹುಚ್ಚ ವೆಂಕಟ್ ವಿಡಿಯೋವೊಂದರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರಿಗಾಗಿ ಈ ಮೆಸೇಜ್. ನನ್ನ ಹೆಸರನ್ನು ಯಾವುದೇ ಕಾರಣಕ್ಕೆ ಯಾರೋ ದುರುಪಯೋಗಪಡಿಸಿಕೊಳ್ಳಬಾರದು. ನನ್ನ ಹೆಸರಿನಲ್ಲಿ ಇಮೇಲ್ ಕಳಿಸಬಾರದು. ಬಾಯ್ ಫ್ರಮ್ ಫೈಟಿಂಗ್ & ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್. ಇದನ್ನು, ನನ್ನ ಹೆಸರನ್ನು ಯಾರು ಮಿಸ್ಯೂಸ್ ಮಾಡ್ತಾರೊ ಅವರಿಗೆ ಹೇಳುತ್ತಿದ್ದೇನೆ’ ಎಂದಿದ್ದಾರೆ.
ಪೋಷಕರಿಗೆ ಕರೆ
ಶಾಲೆಗೆ ಬಾಂಬ್ ಬೆದರಿಕೆ ಬಂದ ಕೂಡಲೆ ಮಕ್ಕಳನ್ನು ಮತ್ತೊಂದು ಬ್ಲಾಕ್ಗೆ ಸ್ಥಳಾಂತರ ಮಾಡಲಾಯಿತು. ಅನೇಕ ಪೋಷಕರು ಶಾಲೆಯ ಬಳಿ ಆಗಮಿಸಲು ಮುಂದಾದರು. ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಪುತ್ರಿ ಗೇಟ್ ಬಳಿಯಲ್ಲಿ ನಿಂತು, ಮಕ್ಕಳೆಲ್ಲರೂ ಸುರಕ್ಷಿತರಾಗಿದ್ದಾರೆ, ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ಅನೇಕ ಪೋಷಕರಿಗೆ ಕರೆ ಮಾಡಿ ಸಮಾಧಾನ ಹೇಳಿದರು.
ಭದ್ರತೆ ಲೋಪವಿಲ್ಲ ಎಂದ ಶಿವಕುಮಾರ್
ಬಾಂಬ್ ಬೆದರಿಕೆ ಕುರಿತು ಇಮೇಲ್ ಬಂದಿರುವುದನ್ನು ಖಚಿತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಮೇಲ್ ನೋಡಿದ ತಕ್ಷಣ ಪ್ರಾಂಶುಪಾಲರು ನಮಗೆ ತಿಳಿಸಿದ್ದಾರೆ. ಕೂಡಲೆ ಪೊಲೀಸ್ ಆಯುಕ್ತರ ಜತೆ ಮಾತನಾಡಿದೆವು, ಈಗಾಗಲೆ ಬಹುತೇಕ ತಪಾಸಣೆ ಮುಕ್ತಾಯವಾಗಿದೆ. ಶಾಲೆಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯಿದೆ, ಯಾರೂ ಭಯಪಡುವ ಅಗತ್ಯವಿಲ್ಲ. ಭಾನುವಾರ ಬೇರೆ ಪರೀಕ್ಷೆಯೊಂದು ಶಾಲೆಯಲ್ಲಿ ನಡೆದಿತ್ತು, ಹೀಗಾಗಿ ಹೊರಗಿನವರು ಆಗಮಿಸಿದ್ದರು. ಸಮಸ್ಯೆ ಆಗುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | ಹುಚ್ಚ ವೆಂಕಟ್ ಹೆಸರಿನಲ್ಲಿ ಶಾಲೆಗೆ ಬಾಂಬ್ ಬೆದರಿಕೆ: ಎರಡು ಇಮೇಲ್ ಮಾಡಿರುವ ದುಷ್ಕರ್ಮಿಗಳು