Site icon Vistara News

ಆಯ್ಕೆಗೂ ಮುನ್ನವೇ ಫೀಲ್ಡಿಗಿಳಿದ ಜಗ್ಗೇಶ್‌: ಬೆಂಗಳೂರಲ್ಲೆ 50 ಸಾವಿರ ಫೇಕ್‌ ಪೇಜ್‌ ಇವೆಯಂತೆ!

jaggesh on textbook

ಬೆಂಗಳೂರು: ರಾಜ್ಯಸಭೆ ಚುನಾವಣೆ ನಡೆದು ತಮ್ಮ ಆಯ್ಕೆ ಆಗಲು ಇನ್ನೂ ಇಪ್ಪತ್ನಾಲ್ಕು ಗಂಟೆ ಇರುವಂತೆಯೇ ನವರಸನಾಯಕ ಜಗ್ಗೇಶ್‌ ಫುಲ್‌ ಆಕ್ಟಿವ್‌ ಆಗಿಬಿಟ್ಟಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರಣೆಯನ್ನೇ ಮುಂದಿಟ್ಟುಕೊಂಡು ಪ್ರೊ. ಬರಗೂರು ರಾಮಚಂದ್ರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ ಭಾವಿ ರಾಜ್ಯಸಭಾ ಸದಸ್ಯ.

ರಾಜ್ಯಸಭೆಗೆ ಅಚ್ಚರಿ ಎಂಬಂತೆ ಜಗ್ಗೇಶ್‌ ಟಿಕೆಟ್‌ ಗಿಟ್ಟಿಸಿದರು. ಟಿಕೆಟ್‌ ಘೋಷಣೆಯಾಗಿ ಇಷ್ಟು ದಿನವಾಯಿತು, ಇನ್ನೇನು ಶುಕ್ರವಾರ ಅಧಿಕೃತವಾಗಿ ಆಯ್ಕೆಯೂ ಆಗಿಬಿಡುತ್ತಾರೆ. ಆದರೆ ಇಲ್ಲಿವರೆಗೆ ರಾಜ್ಯ ಬಿಜೆಪಿ ನಾಯಕರಿಗೆ, ಜಗ್ಗೇಶ್‌ ಆಯ್ಕೆ ಹಿಂದಿನ ಅಸಲಿ ಸತ್ಯ ತಿಳಿದುಬಂದಿಲ್ಲ. ರಾಜ್ಯ ಘಟಕದಲ್ಲಿ ಕ್ರಿಯಾಶೀಲವಾಗಿರಲಿಲ್ಲ, ಎಲ್ಲರೂ ಪಕ್ಷವನ್ನು ಸಮರ್ಥನೆ ಮಾಡಿಕೊಂಡಿರಲಿಲ್ಲ, ಹೋಗಲಿ ಚುನಾವಣೆ ಕೆಲಸಗಳಲ್ಲೂ ಗುರುತಿಸಿಕೊಂಡದ್ದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ರಾಜ್ಯ ಕೋರ್‌ ಕಮಿಟಿಯಿಂದ ಶಿಫಾರಸಾದ 20 ಜನರ ಪಟ್ಟಿಯಲ್ಲೂ ಇಲ್ಲದ ಜಗ್ಗೇಶ್‌ ಟಿಕೆಟ್‌ ಗಿಟ್ಟಿಸಿದ್ದು, ಜಗ್ಗೇಶ್‌ ಸದಾ ನಂಬುವ ಗುರು ರಾಘವೇಂದ್ರರ ಅಪ್ಪಟ ಪವಾಡ ಎನ್ನುವುದು ಬಿಜೆಪಿ ವಲಯದಲ್ಲಿರುವ ಮಾತು. ಬಹುಶಃ ಈದಕ್ಕೇ ಇರಬೇಕು ನವರಸನಾಯಕ ತಮ್ಮ ರೌದ್ರ ರಸವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರೊ. ಬರಗೂರು ರಾಮಚಂದ್ರಪ್ಪ ವಿರುದ್ಧ ತೋರಿಸಿದ್ದಾರೆ.

ಇದನ್ನೂ ಓದಿ | ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್‌ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್‌

ಬಿಜೆಪಿ ಸರ್ಕಾರ ನೇಮಿಸಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಕುವೆಂಪು ಅವರಿಗೆ ಅವಮಾನ ಮಾಡಿದೆ, ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರ? ಎಂದು ಅನೇಕರು ನನ್ನನ್ನು ಪ್ರಶನಿಸಿದ್ದರು. ಅದಕ್ಕಾಗಿ ಈ ಉತ್ತರ ನೀಡುತ್ತಿದ್ದೇನೆ. ಎಂಟನೇ ತರಗತಿ ಕನ್ನಡ ಪುಸ್ತಕದಲ್ಲಿ, ಯಾವುದೇ ಜಾತಿ, ಪಂಥ ಭೇದ ಭಾವ ಇಲ್ಲದೆ ನಾವೆಲ್ಲರೂ ಒಂದು ತಾಯಿಯ ಮಕ್ಕಳಂತೆ ಬದುಕಬೇಕು ಎಂಬ ʼಭರತಭೂಮಿ ನನ್ನ ತಾಯಿʼ ಪದ್ಯ ಇತ್ತು. ಇದನ್ನು ಬರೆದವರು ರಾಷ್ಟ್ರಕವಿ ಕುವೆಂಪು. ದೇಶಪ್ರೇಮದ ಈ ಕವಿತೆಯನ್ನು ಕಿತ್ತು ಹಾಕಿದ್ದು ಬರಗೂರು ಸಮಿತಿ. ಆದರೆ ಆಪಾದನೆ ನಮ್ಮ ಮೇಲೆ ಬಂದಿದೆ. ಪೋಷಕರೆಲ್ಲರೂ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು. ಅರಿತವರು ಮಾತನಾಡುತ್ತಿಲ್ಲ. ಅರಿಯದೆ ಅರ್ದಮರ್ದ ಬೆಂದ ಮಡಿಕೆಯಂಥವರು ಮಾತನಾಡುತ್ತಿದ್ದಾರೆ ಎಂದು ಜಗ್ಗೇಶ್‌ ಟೀಕಿಸಿದ್ದಾರೆ.

ಅದೇ ರೀತಿ ಎಂಟನೇ ತರಗತಿಯಲ್ಲಿ ಅಜ್ಜಯ್ಯನ ಅಭ್ಯಂಜನ ಎನ್ನುವ ಪಾಠ ಇತ್ತು. ಇದೀ ಕುವೆಣಪು ಅವರು ಬರೆದದ್ದು. ಈ ಪಾಠವನ್ನು ಕಿತ್ತು ಹಾಕಿ ಯು.ಆರ್‌. ಅನಂತಮೂರ್ತಿ ಅವರ ʼಅಮ್ಮʼ ಪಾಠ ಸೇರಿಸಿದ್ದಾರೆ. ಇದಕ್ಕೂ ಮುಖ್ಯವಾಗಿ, ಹಿಂದುಗಳು ಆರ್ಯರು, ದ್ರಾವಿಡನ್ನರು ದಕ್ಷಿಣದವರು ಎಂದು ದೇಶವನ್ನು ಇಬ್ಭಾಗ ಮಾಡುವಂತಹ ಪಾಠವನ್ನು ಸೇರಿಸಿ ವಿಷಬೀಜ ಬಿತ್ತುವಂತಹ ಕಾರ್ಯ ಮಾಡಿದವರು ಬರಗೂರು ರಾಮಚಂದ್ರಪ್ಪ. ನಾನೂ ಒಬ್ಬ ತಂದೆ, ತಾತನಾಗಿ ಹೇಳುತ್ತಿದ್ದೇನೆ. ದೇಶಭಕ್ತಿ ಸೂಚಿಸುವ ಪಾಠಬೇಕೊ ಅಥವಾ ಸಿದ್ದರಾಮಯ್ಯ- ಬರಗೂರು ಮಾಡಿದ ದೇಶ ವಿಭಜನೆಯ ಕಥೆಗಳು ಬೇಕೊ ನಿರ್ಧಾರ ಮಾಡಿ ಎಂದು ಪೋಷಕರಿಗೆ ತಿಳಿಸಿದ್ದಾರೆ.

ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದ ಜಗ್ಗೇಶ್‌, ಈ ದೇಶದಲ್ಲಿ ಸರ್ಕಾರಗಳು ಬಂದಾಗಿನಿಂದ ಮುಸ್ಲಿಮರನ್ನೇ ಶಿಕ್ಷಣ ಸಚಿವರನ್ನಾಗಿಸಲಾಗಿದೆ. ಮೊದಲಿಗೆ ಶಿಕ್ಷಣ ಸಚಿವರಾದವರು ಮೌಲಾನಾ ಅಬುಲ್‌ಕಲಾಂ ಆಜಾದ್‌. ಅವರು ಈ ದೇಶದವರಲ್ಲ. ಅವರು ಔರಂಗಜೇಬನಂಥವರ ಪಾಠವನ್ನೇ ಹೇಳಿದ್ದಾರೆ. ಔರಂಗಜೇಬ ದಾಳಿ ಮಾಡಿದನು, ಅದು ಮಾಡಿದನು, ಇದು ಮಾಡಿದನು ಎನ್ನುವುದನ್ನೇ ನಾವು ಓದಿದ್ದೇವೆ. ಆಚಾರ್ಯತ್ರಯರ ಬಗ್ಗೆ ನಮಗೆ ಈ ಪಠ್ಯದಲ್ಲಿ ಏನೂ ಸಿಗದಂತೆ ಮಾಡಿದ್ದಾರೆ. ಪಾಶ್ಚಿಮಾತ್ಯರು ಬಂದು ಇಲ್ಲಿ ದಾಳಿ ಮಾಡಿದರು ಎನ್ನುವ ಪಾಠಗಳು ನಮಗೆ ಬೇಕಾಗಿಲ್ಲ.

ಇಂತಹ ಢೋಂಗಿತನವನ್ನು ಪೋಷಕರು ಧಿಕ್ಕರಿಸಬೇಕು. ಇಂತಹವರನ್ನು ಸಹಿಸಿಕೊಳ್ಳಬಾರದು. ಅವರವರ ಸರ್ಕಾರ ಇದ್ದಾಗ ಅವರವರ ವಿಚಾರ ಹೇಳಲಾಗುತ್ತದೆ. ಅವರ ಸರ್ಕಾರ ಇದ್ದಾಗ ತಪ್ಪು ವಿಷಯಕ್ಕೆ ಮೊಂಡತನ ಮಾಡುತ್ತಿದ್ದರು. ನಾವು ಸರಿಯಾದ ಮೊಂಡುತನ ಮಾಡಿದ್ದೇವೆ. ನಮ್ಮ ರಾಷ್ಟ್ರದ ಎಲ್ಲ ವಿಚಾರ ಎಲ್ಲ ಮಕ್ಕಳಿಗೆ ತಿಳಿಯಬೇಕು ಎನ್ನುವುದೇ ನಮ್ಮ ಉದ್ದೇಶ.

ಇದೆಲ್ಲವನ್ನೂ ಫೇಕ್‌ ಸಾಮಾಜಿಕ ಜಾಲತಾಣ ಪುಟಗಳ ಮೂಲಕ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿರುವ ಜಗ್ಗೇಶ್‌, ಬೆಂಗಳೂರು ಒಂದರಲ್ಲೆ ಐವತ್ತು ಸಾವಿರ ಫೇಕ್‌ ಪುಟಗಳು ಇವೆ ಎಂದಿದ್ದಾರೆ. ಸಮಾಜದಲ್ಲಿ ಒಡಕು ಉಂಟು ಮಾಡಲು ಇಂಥವರು ಕೆಲಸ ಮಾಡುತ್ತಾರೆ ಎಂದಿರುವ ಭಾವಿ ರಾಜ್ಯಸಭಾ ಸದಸ್ಯ ಜಗ್ಗೇಶ್‌, ಕನ್ನಡ ನೆಲದಲ್ಲಿ ಬೆಳೆದಿದ್ದೇನೆ, ಹೆಮ್ಮೆಯ ಹಿಂದು ಎಂದು ಮಾತು ಮುಗಿಸಿದ್ದಾರೆ.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಜಾಲಾಡಲಿದೆ ಗುಪ್ತಚರ ಇಲಾಖೆ

Exit mobile version