ನವದೆಹಲಿ: ಹಲವಾರು ಮಂದಿಯ ಇನ್ ಸ್ಟಾಗ್ರಾಮ್ (Instagram) ಖಾತೆಗಳಲ್ಲಿ ಮಂಗಳವಾರ ‘ಆಲ್ ಐಸ್ ಆನ್ ರಫಾ’ (All Eyes on Rafah) ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಕಾಣಿಸಿಕೊಂಡಿದೆ. ಸೋಶಿಯಲ್ ಮೀಡಿಯಾ (social media) ಬಳಕೆದಾರರು ಎಐ (artificial intelligence) ರಚಿತವಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ಹಲವಾರು ಟೆಂಟ್ ಮನೆಗಳನ್ನು (tent house) ಚಿತ್ರದಲ್ಲಿ ಕಾಣಬಹುದಾಗಿದೆ.
ಆಲ್ ಐಸ್ ಆನ್ ರಫಾ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿರುವ ಡೇರೆಗಳನ್ನು ತೋರಿಸಿದೆ. ಅಲ್ಲಿ ಇಸ್ರೇಲ್ ನಿಂದ ನಡೆಸಿದ ದಾಳಿಯ ಅನಂತರ ಅನೇಕ ಪ್ಯಾಲೇಸ್ಟಿನಿಯರು ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ಯಾಲೆಸ್ಟೈನ್ ಗೆ ಬೆಂಬಲ ಸೂಚಿಸಿ ಅನೇಕರು ಇನ್ ಸ್ಟಾ ಗ್ರಾಮ್ ನಲ್ಲಿ ‘ಆಲ್ ಐಸ್ ಆನ್ ರಫಾ’ ಘೋಷಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವವರ ಸಂಖ್ಯೆ 30 ಮಿಲಿಯನ್ ದಾಟಿದೆ.
ಪ್ಯಾಲೇಸ್ಟಿನಿಯನ್ನರ ವಿರುದ್ಧದ ದಾಳಿಯನ್ನು ಖಂಡಿಸಿ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಲು ಇದು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಒಗ್ಗೂಡಿಸುತ್ತಿದೆ. ವರದಿಗಳ ಪ್ರಕಾರ ಡಬ್ಲ್ಯೂ ಹೆಚ್ ಒ ಪ್ರತಿನಿಧಿ ರಿಚರ್ಡ್ ಪೀಪರ್‌ಕಾರ್ನ್ ಅವರು ಫೆಬ್ರವರಿಯಲ್ಲಿ ಮೊದಲು ಈ ಘೋಷಣೆಯನ್ನು ಮಾಡಿದರು. ಡೇರೆ ಶಿಬಿರಗಳಿಂದ ತುಂಬಿದ ಪ್ರದೇಶವನ್ನು ಚಿತ್ರದಲ್ಲಿ ಕಾಣಬಹುದು. ಇದು ಇತ್ತೀಚಿನದು. ಎಲ್ಲರ ಗಮನ ಸೆಳೆಯಲು ಇದು ಅವರ ಪ್ರಯತ್ನ. ಇಸ್ರೇಲ್ ದಾಳಿಯಿಂದ ರಫಾದಲ್ಲಿ ಕನಿಷ್ಠ 45 ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವರು ನೆಟ್ಟಿಗರು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಪೋಸ್ಟ್ ಶೇರ್ ಮಾಡಿದ ಸೆಲೆಬ್ರಿಟಿಗಳು
ಭಾರತೀಯ ನಟರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಕರೀನಾ ಕಪೂರ್ ಖಾನ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರ್ರಾ ಅವರು “‘ಆಲ್ ಐಸ್ ಆನ್ ರಾಫಾ’ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಗುತ್ತದೆ ಎಂದು ನಾವು ಆರಂಭದಲ್ಲಿ ಭಾವಿಸಿರಲಿಲ್ಲ. ಸಾಕಷ್ಟು ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಇದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶದ ಭಾವನೆ ಅಥವಾ ಉದ್ದೇಶ ಒಂದೇ. ಅನೇಕರನ್ನು ತಲುಪುವುದು ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಎಲ್ಲರ ಗಮನ ಸೆಳೆಯುವುದು.
ಇದನ್ನೂ ಓದಿ: Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!
ರಫಾ ನಿರ್ಮೂಲನೆ ಮಾಡುವ ಗುರಿ
ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೇಶದಲ್ಲಿ ಈ ಸಾವುನೋವುಗಳು ‘ದುರಂತ’ ಎಂದು ಹೇಳಿದ್ದಾರೆ. ರಫಾವನ್ನು ಹಮಾಸ್ ಉಗ್ರರ ಕಟ್ಟ ಕಡೆಯ ಭದ್ರಕೋಟೆ ಎಂದಿರುವ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೇಸ್ಟಿನಿಯರು ಆಶ್ರಯ ಪಡೆದಿದ್ದಾರೆ. ಪ್ಯಾಲೇಸ್ಟಿನ್ ಮೇಲಿನ ಇಸ್ರೇಲ್ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.