ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಲು ನಾಮಪತ್ರ ಸಲ್ಲಿಸಿರುವ ಎಲ್ಲ ಏಳು ಅಭ್ಯರ್ಥಿಗಳ ನಾಮಪತ್ರಗಳು ಸೂಕ್ತವಾಗಿವೆ. ಇಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಿದ ವಿಧಾನ ಪರಿಷತ್ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ವಿಶಾಲಾಕ್ಷಿ ಈ ಕುರಿತು ಘೋಷಣೆ ಮಾಡಿದ್ದಾರೆ.
ವಿಧಾನ ಸಭೆಯಿಂದ ಏಳು ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ ಎರಡು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿದೆ.
ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್ ಸ್ಟ್ರೈಕ್ ಫೇಲ್: ಬಿಜೆಪಿಯಲ್ಲಿ ಸಂತೋಷ್ ಮೇಲುಗೈ
ನಾಮಪತ್ರ ಸಲ್ಲಿಸಲು ಮಂಗಳವಾರ ಅಂತಿಮ ದಿನವಾಗಿತ್ತು. ಕಾಂಗ್ರೆಸ್ ಸೋಮವಾರವೇ ಅಭ್ಯರ್ಥಿಗಳನ್ನು ಘೊಷಣೆ ಮಾಡಿತ್ತು. ಬಿಎಂಟಿಸಿ ಅಧ್ಯಕ್ಷರಾಗಿದ್ದ ನಾಗರಾಜು ಯಾದವ್, ಮಾಜಿ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರನ್ನು ಆಯ್ಕೆ ಮಾಡಿತ್ತು. ಬಿಜೆಪಿ ಕೊನೆ ಕ್ಷಣದವರೆಗೂ ಆಯ್ಕೆ ಘೋಷಣೆ ಮಾಡಿರಲಿಲ್ಲ. ನಾಮಪತ್ರ ಸಲ್ಲಿಸುವ ದಿನವೇ ಎಸ್. ಕೇಶವ ಪ್ರಸಾದ್, ಮಾಜಿ ಸಚಿವ ಲಕ್ಷ್ಮಣ ಸವದಿ, ಕೊಪ್ಪಳದ ಹೇಮಲತಾ ನಾಯಕ್ ಹಾಗೂ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಿತ್ತು. ಜೆಡಿಎಸ್‌ನಿಂದಲೂ ಮಾಜಿ ಎಂಎಲ್‌ಸಿ ಟಿ.ಎ. ಶರವಣ ಅವರಿಗೆ ದೇವೇಗೌಡರು ಮತ್ತೊಂದು ಅವಕಾಶ ಕಲ್ಪಿಸಿದ್ದರು.
ಎಲ್ಲ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಬುಭವಾರ ನಡೆಯಿತು. ಎಲ್ಲರೂ ಕನಿಷ್ಠ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಇವುಗಳಲ್ಲಿ ಕನಿಷ್ಠ ಒಂದು ನಾಮಪತ್ರ ಸೂಕ್ತವಾಗಿದೆ ಎಂದು ತಿಳಿದರೂ ಚುನಾವಣೆಗೆ ಅರ್ಹರಾಗುತ್ತಾರೆ. ಬುಧವಾರ ನಾಮಪತ್ರ ಪರಿಶೀಲನೆ ನಡೆಸಿದ ವಿಶಾಲಾಕ್ಷಿ ಅವರು, ಎಲ್ಲವನ್ನೂ ಉರ್ಜಿತ ಎಂದು ಘೋಷಣೆ ಮಾಡಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ಎರಡು ದಿನಗಳ ಅವಕಾಶವಿದೆ. ಶುಕ್ರವಾರ ಸಂಜೆಯವರೆಗೆ ನಾಮಪತ್ರ ಹಿಂಪಡೆಯಬಹುದು. ಈ ವೇಳೆ ಯಾರೂ ಕಣದಿಂದ ಹಿಂದೆ ಸರಿಯದೇ ಇದ್ದಲ್ಲಿ ಎಲ್ಲ ಏಳು ಜನರೂ ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಲಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಯಾರೂ ನಾಮಪತ್ರ ಹಿಂಪಡೆಯಬೇಕಾದ ಸನ್ನಿವೇಶ ಇಲ್ಲ. ಹಾಗಾಗಿ ಈ ಘೋಷಣೆ ಔಪಚಾರಿಕವಾಗಿಯಷ್ಟೆ ಉಳಿಯಲಿದೆ.
ಜೂನ್ 14ಕ್ಕೆ ಅವಧಿ ಮುಕ್ತಾಯ
ಸದ್ಯ ವಿಧಾನಸಭೆಯಿಂದ ಆಯ್ಕೆಯಾಗಿರುವ ಏಳು ಜನರ ಅವಧಿ ಜೂನ್ 14ಕ್ಕೆ ಮುಕ್ತಾಯಗೊಳ್ಳಲಿದೆ. ಇವರಲ್ಲಿ ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್. ವೀಣಾ ಅಚ್ಚಯ್ಯ, ಕೆ.ವಿ. ನಾರಾಯಣಸ್ವಾಮಿ, ಬಿಜೆಪಿಯ ಲಹರ್‌ಸಿಂಗ್ ಸಿರೋಯಾ, ಲಕ್ಷ್ಮಣ ಸವದಿ ಹಾಗೂ ಜೆಡಿಎಸ್‌ನ ರಮೇಶ್ ಗೌಡ ಇದ್ದಾರೆ.
ಈ ಪೈಕಿ ಲಕ್ಷ್ಮಣ ಸವದಿ ಮಾತ್ರ ಬಿಜೆಪಿಯಿಂದ ಮರು ಆಯ್ಕೆಗೊಳ್ಳುತ್ತಿದ್ದಾರೆ. ಔಪಚಾರಿಕ ಘೊಷಣೆ ನಂತರ ಎಲ್ಲರೂ ಜೂನ್ 14ಕ್ಕೂ ಮುನ್ನ ಪ್ರಮಾಣ ವಚನ ಸ್ವೀಕರಸಿವುದರ ಮೂಲಕ ಸದಸ್ಯರಾಗಲಿದ್ದಾರೆ. ವಿಧಾನ ಪರಿಷತ್ ನಿರಂತರ ಮನೆಯಾಗಿದ್ದು, ಸದಸ್ಯರ ರಾಜೀನಾಮೆ, ಮೃತ್ಯುವಿನಂತಹ ಸಂದರ್ಭಗಳನ್ನು ಹೊರತುಪಡಿಸಿ ಖಾಲಿ ಉಳಿಯುವಂತಿಲ್ಲ. ಒಬ್ಬ ಸದಸ್ಯರ ಅವಧಿ ಮುಗಿಯುವ ಮುನ್ನವೇ ಆ ಸ್ಥಾನಕ್ಕೆ ಚುನಾವಣೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ | ಲಕ್ಷ್ಮಣ ಸವದಿಗೆ ಮತ್ತೆ ಅದೃಷ್ಟ: ವಿಧಾನ ಪರಿಷತ್ ಬಿಜೆಪಿ ಪಟ್ಟಿ ಘೋಷಣೆ