Site icon Vistara News

Amit Shah: ಕೋರ್‌ ಕಮಿಟಿ ಸಭೆಗೂ ಮುನ್ನ ಅಮಿತ್‌ ಶಾ – ವಿಜಯೇಂದ್ರ ಗೌಪ್ಯ ಮಾತುಕತೆ!

Amit Shah and Vijayendra hold secret talks ahead of core committee meeting

ಮೈಸೂರು/ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Assembly Elections 2023) ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ, ಬಿಜೆಪಿಯ ನಂಬರ್‌ 2 ನಾಯಕ ಅಮಿತ್‌ ಶಾ (Amit Shah) ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರು ಶನಿವಾರ ರಾತ್ರಿ ಮೈಸೂರಿಗೆ ಬಂದಿಳಿದಿದ್ದು, ಭಾನುವಾರ ಬೆಳಗ್ಗೆ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ (Suttur Jatre) ಭಾಗಿಯಾಗಿದ್ದರು. ಈಗ ಲೋಕಸಭಾ ಚುನಾವಣೆಯ (Parliament Election 2024) ತಂತ್ರಗಾರಿಕೆಗೆ ಸಂಬಂಧ ಮಹತ್ವದ ಸಭೆಯನ್ನು ನಡೆಸಲು ಮುಂದಾಗಿದ್ದಾರೆ. ಸಭೆಗಿಂತ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಅಮಿತ್ ಶಾ ಒನ್ ಟು ಒನ್ ಸಭೆ ನಡೆಸಿದ್ದಾರೆ. ಕೋರ್ ಕಮಿಟಿ ಸಭೆಗೂ ಮೊದಲು ವಿಜಯೇಂದ್ರ ಜತೆ ಚರ್ಚೆ ನಡೆಸಿರುವುದು ತೀವ್ರ ಕುತೂಹಲವನ್ನು ಹುಟ್ಟಿಸಿದೆ.

ಅಮಿತ್‌ ಶಾ ಅವರು ಬಿ.ವೈ. ವಿಜಯೇಂದ್ರ ಜತೆ ಚರ್ಚೆ ನಡೆಸುತ್ತಿದ್ದು, ರಾಜ್ಯದ ಪ್ರಸ್ತುತ ವಾತಾವರಣದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್‌ ಸಿಂಹ ಅಭ್ಯರ್ಥಿಯಾಗಿ ಮುಂದುವರಿಸಬಹುದೇ? ಮೈಸೂರಿನಲ್ಲಿನ ರಾಜಕೀಯ ವಾತಾವರಣ, ಪರಿಸ್ಥಿತಿ ಏನಿದೆ? ಯಾರಾದರೂ ವೈಯಕ್ತಿಕವಾಗಿ ಅಥವಾ ಕ್ಷೇತ್ರದಲ್ಲಿ ಹೆಸರನ್ನು ಹಾಳು ಮಾಡಿಕೊಂಡಿದ್ದಾರಾ? ಚುನಾವಣೆಯಲ್ಲಿ ಯಾವುದು ಪ್ಲಸ್‌ ಆಗಲಿದೆ? ಯಾವುದು ಮೈನಸ್‌ ಆಗಲಿದೆ? ಸಮಸ್ಯೆಗಳಿದ್ದಲ್ಲಿ ಈಗಲೇ ತಿಳಿಸಿ. ಈಗಲೇ ಸರಿಪಡಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಜೆಡಿಎಸ್‌ ಜತೆ ಹೊಂದಾಣಿಕೆ ವಿಚಾರ ಎಷ್ಟು ಪಾಸಿಟಿವ್ ಆಗಿದೆ? ಆಂತರಿಕ ಸಂಘರ್ಷ ಇದೆ ಎನ್ನುವ ಮಾಹಿತಿ ಇದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ? ಕೆಲವರನ್ನು ರಾಜ್ಯಸಭೆಯಿಂದ, ಮತ್ತೆ ಕೆಲವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ ಕೇಂದ್ರದ ಹಾಲಿ ಸಚಿವರನ್ನು ನಿಲ್ಲಿಸಿದರೆ ಗೆಲ್ಲುವ ಕ್ಷೇತ್ರಗಳಿವೆಯಾ? ಆ ರೀತಿ ಇದ್ದರೆ ಯಾವ ಕ್ಷೇತ್ರ ಬಿಜೆಪಿಗೆ ಹೆಚ್ಚು ಪಾಸಿಟಿವ್ ಇದೆ? 28 ಕ್ಷೇತ್ರದಲ್ಲಿ ಹಾಲಿ ಗೆಲ್ಲಬಹುದಾದ ಕ್ಷೇತ್ರಗಳೆಷ್ಟು? ಕಾಂಗ್ರೆಸ್ ಕಣಕ್ಕಿಳಿಸುವ ಯಾವ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ? ಅಲ್ಲಿ ಬಿಜೆಪಿ ಗೆಲ್ಲಲು ಯಾವ ರೀತಿಯ ವಾತಾವರಣವನ್ನು ಕಲ್ಪಿಸಬಹುದು? ಅನೇಕ ವಿಚಾರಗಳನ್ನು ವಿಜಯೇಂದ್ರ ಜತೆಯಲ್ಲಿ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Amit Shah: ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿರುವ ಅಮಿತ್ ಶಾ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಉಳಿದ ನಾಯಕರ ಜತೆಯೂ ಒನ್‌ ಟು ಒನ್‌ ಚರ್ಚೆ?

ಬಳಿಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಆರ್‌ಎಸ್‌ಎಸ್ ಮುಖಂಡ ರಾಜೇಶ್, ಮಾಜಿ ಸಚಿವ ಸಿ.ಟಿ.ರವಿ ಅವರೊಂದಿಗೆ ಸಹ ಏಕಾಂಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ತಲಾ ಐದು ನಿಮಿಷ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ಎಂದು ಹೇಳಿದ್ದ ಬಿ.ವೈ. ವಿಜಯೇಂದ್ರ

ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ನಾಲ್ಕು ಲೋಕಸಭಾ ಕ್ಷೇತ್ರದಿಂದ ಕಾರ್ಯ ತಂತ್ರ ಹೇಗಿರಬೇಕು? ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಇರುವ ಕಾರಣ ಒಟ್ಟಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಇಲ್ಲಿ ಚರ್ಚೆ ನಡೆಸಲಾಗುವುದು. ಸಿಎಂ ತವರೂರಿಂದ ಈ ಬಾರಿ ಚುನಾವಣಾ ಕಾರ್ಯತಂತ್ರ ಆರಂಭವಾಗಿದ್ದು ವಿಶೇಷ ಅಲ್ಲ. ಚಾಮರಾಜನಗರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕು. ಮಂಡ್ಯದಲ್ಲಿ ಬದಲಾದ ರಾಜಕೀಯ ಸ್ಥಿತಿಯಲ್ಲಿ ಜೆಡಿಎಸ್ ಆ ಸ್ಥಾನ ಕೇಳುತ್ತಿದೆ ಅಂತ ಟಿವಿಯಲ್ಲಿ ನೋಡಿದ್ದೇವೆ. ಆದರೆ, ನಮ್ಮಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ಇವತ್ತು ಆ ಬಗ್ಗೆ ಚರ್ಚೆ ಆದರೂ ಆಗಬಹುದು ಎಂದು ಹೇಳಿದ್ದರು.

Exit mobile version