ಮಂಡ್ಯ: ಇಲ್ಲಿವರೆಗೆ ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದು ಸಾಕು, ಇನ್ನು ಮುಂದೆ ಬಿಜೆಪಿಗೆ ಅವಕಾಶ ನೀಡಿ ಎಂದು ತಿಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸಿ.ಟಿ. ರವಿ, ಈ ಬಾರಿ ನಡೆಯುವುದು ಮೂಡಲಬಾಗಿಲು ಆಂಜನೇಯ ಹಾಗೂ ಮುಲ್ಲಾಸಾಬಿ ನಡುವಿನ ಚುನಾವಣೆ ಎಂದಿದ್ದಾರೆ.
ಮಂಡ್ಯದಲ್ಲಿನ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಿದ್ದ ಜನಸಂಕಲ್ಪ ಸಮಾವೇಶದಲ್ಲಿ ಸಿ.ಟಿ. ರವಿ ಮಾತನಾಡಿದರು.
ನೀವು ಈ ಹಿಂದೆ ಅನೇಕರ ಬೆನ್ನಿಗೆ ನಿಂತಿದ್ದೀರಿ. ಅನೇಕರಿಗೆ ರಾಜಕೀಯ ಮರುಹುಟ್ಟು ನೀಡಿದ್ದೀರಿ. ಎಲ್ಲ ಅಧಿಕಾರ ಸಿಗುವಂತೆ ನೋಡಿಕೊಂಡಿರಿ. ಮಂಡ್ಯ ಯಾರ ಜಹಗೀರು ಅಲ್ಲ. ಮಂಡ್ಯದ ಜನ ಸ್ವಾಭಿಮಾನಿ ಜನ ಎಂಬ ಸಂದೇಶ ಕೊಡಬೇಕಿದೆ. ಸ್ವಾಭಿಮಾನ ಬಿಟ್ಟು ಮಂಡ್ಯದ ಜನ ರಾಜಕಾರಣ ಮಾಡುವುದಿಲ್ಲ.
ಅನೇಕ ಕಾರಣಕ್ಕೆ ಚುನಾವಣೆ ನಡೆಯುತ್ತದೆ. ಭಾವನೆ ಕಾರಣಕ್ಕೆ, ಅಭಿವೃದ್ಧಿ ಕಾರಣಕ್ಕೆ, ಸ್ವಾಭಿಮಾನದ ಕಾರಣಕ್ಕೆ ನಡೆಯುತ್ತದೆ. ಬಿಜೆಪಿ ಸರ್ಕಾರ ಏನು ಕಡಿಮೆ ಮಾಡಿದೆ ಎಂದು ಕೇಳುತ್ತಿದ್ದೇನೆ. ಹಾಲಿಗೆ ಸಬ್ಸಿಡಿ ಕೊಟ್ಟಿದ್ದು ಕಾಂಗ್ರೆಸ್ ಅಲ್ಲ, ಜನತಾದಳ ಅಲ್ಲ. ಕಿಸಾನ್ ಸಮ್ಮಾನ್ ಯೋಜನೆ ತಂದಿದ್ದು ಬಿಜೆಪಿ ಸರ್ಕಾರ.
ಈ ಬಾರಿಯ ಚುನಾವಣೆ ಮೂಡಲಬಾಗಿಲು ಹನುಮಪ್ಪನಿಗೂ ಮುಲ್ಲಾ ಸಾಬಿಗೂ ನಡುವಿನ ಚುನಾವಣೆ ಇದು. ದತ್ತಪೀಠಕ್ಕೆ ನ್ಯಾಯ ಕೊಟ್ಟಿದ್ದು ಬಿಜೆಪಿ ಸರ್ಕಾರ. ಮೂಡಲ ಬಾಗಿಲ ಆಂಜನೇಯನಿಗೂ ನ್ಯಾಯ ಕೊಡುತ್ತದೆ. ನೀವು ಹಾಕುವ ಓಟು, ಹನುಮಪ್ಪನಿಗೆ ನ್ಯಾಯ ಕೊಡುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಮುಂದಿನ ಜನ್ಮದಲ್ಲಿ ಅದೇನೊ ಆಗುತ್ತೇನೆ ಎಂದಿದ್ದರಲ್ಲ, ಅವರಿಗಲ್ಲ ಎಂದು ದೇವೇಗೌಡರನ್ನು ಟೀಕಿಸಿದರು. ಈ ಚುನಾವಣೆ, ಟಿಪ್ಪು ವರ್ಸಸ್ ಒಡೆಯರ್ ನಡುವಿನ ಚುನಾವಣೆ. ಈ ರಾಜ್ಯಕ್ಕೆ, ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು, ಅವನಪ್ಪ ಅಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರು. ಮೈಸೂರು ಅಭಿವೃದ್ಧಿ ಮಾಡಿದ್ದೂ ಇವರೆ.
ತಮ್ಮ ಅಪ್ಪನಿಗಿಂತ ಹೆಚ್ಚುವಂತೆ ಮಾತನಾಡುವವರಿಗೆ ನೀವು ಇದನ್ನೆಲ್ಲ ಕೇಳಬೇಕು. ಮೈಸೂರು ಬ್ಯಾಂಕ್, ಸಿಲ್ಕ್ ಸೇರಿ ಎಲ್ಲದನ್ನೂ ಯಾರ‍್ಯಾರು ಮಾಡಿದ್ದು ಎಂದು ಕೇಳಬೇಕು. ಉರಿಗೌಡ, ದೊಡ್ಡನಂಜೇಗೌಡನ ರಕ್ತ ನಮ್ಮಲ್ಲಿ ಹರಿಯುತ್ತಿದೆ. ಇವರು ನಿಜವಾದ ಹುಲಿಗಳು. ಇಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡರ ಪ್ರತಿಮೆ ನಿರ್ಮಾಣ ಆಗಬೇಕು. ಈ ರಾಜ್ಯದ ಜನರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನನ್ನು ನೆನಪಿಸಿಕೊಳ್ಳುವಂತೆ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಕುರಿತು ಹೇಳಿದರು. ಮಂಡ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಇದನ್ನು ಚುನಾವಣೆಯಲ್ಲಿಯೂ ತೋರಿಸಬೇಕು ಎಂದರು.
ಇದನ್ನೂ ಓದಿ | Amit Shah | ಸಂಸದೆ ಸುಮಲತಾರನ್ನೂ BJP ಲೆಕ್ಕಕ್ಕೆ ಸೇರಿಸಿಕೊಂಡ ಅಮಿತ್ ಶಾ!: JDS-Congress ವಿರುದ್ಧ ವಾಗ್ದಾಳಿ