Site icon Vistara News

Amit Shah: ಅಮಿತ್‌ ಶಾ ಉಕ್ಕಿನ ಮನುಷ್ಯ; ಮೋದಿ – ಶಾ ಜೋಡೆತ್ತುಗಳೆಂದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Amith shah visit Suttur Mutt

ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ಜೋಡೆತ್ತುಗಳು. ದೇಶವನ್ನು ಇಬ್ಬರೂ ಸೇರಿ ಸಮೃದ್ಧಿಯಿಂದ ನಡೆಸುತ್ತಿದ್ದಾರೆ. ಒಂದು ಗಾಡಿ ಮುನ್ನಡೆಯೋಕೆ ಜೋಡಿ ಎತ್ತುಗಳು ಹೇಗೆ ಮುಖ್ಯವೋ ಹಾಗೆಯೇ ದೇಶವನ್ನು ಇವರಿಬ್ಬರೂ ಸೇರಿ ಮುನ್ನಡೆಸುತ್ತಿದ್ದಾರೆ ಎಂದು ಸುತ್ತೂರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shivarathri Deshikendra Swamiji) ಹೇಳಿದರು.

ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಉಕ್ಕಿನ ಮನುಷ್ಯರಾಗಿದ್ದರು. ಅದೇ ರೀತಿ ಅಮಿತ್ ಶಾ ಅವರು ಕೂಡಾ. ಅಮಿತ್ ಶಾ ಅವರು ಉಕ್ಕಿನ ವ್ಯಕ್ತಿಯು ಹೌದು, ಚಾಣಕ್ಯರೂ ಹೌದು. ಅಮಿತ್ ಶಾ ಅವರು ವೇದಗಳು, ಉಪನಿಷತ್, ರಾಮಾಯಣ, ಮಹಾಭಾರತ ಎಲ್ಲವನ್ನೂ ಅಧ್ಯಯನ ಮಾಡಿದ್ದಾರೆ. ಮೈಸೂರು ಅರಮನೆಯಲ್ಲಿದ್ದ ಒಬ್ಬ ಗುರುಗಳು ಕೇಶವ ಪಂಡಿತ್ ಗುಜರಾತ್‌ಗೆ ಹೋಗಿದ್ದರು. ಅವರಿಂದ ಅಮಿತ್ ಶಾ ಅವರಿಗೆ ಶಿಕ್ಷಣ ಸಿಕ್ಕಿದೆ. ಇದರಿಂದ ಅಮಿತ್ ಶಾ ಅವರು ಇಷ್ಟೊಂದು ಜ್ಞಾನವಂತರಾಗಿದ್ದಾರೆ ಎಂದು ಹೇಳಿದರು.

ಜನ ಸಂತೋಷದಿಂದ ಇಲ್ಲಿ ಭಾಗವಹಿಸುತ್ತಾರೆ

ಆದಿ ಜಗದ್ಗುರು ಶಿವರಾತ್ರೀಶ್ವರ ಜಾತ್ರಾ ಮಹೋತ್ಸವವು ಕಳೆದ 6 ದಿನಗಳಿಂದ ನಡೆಯುತ್ತಿದೆ. ಜಾತ್ರಾ ಮಹೋತ್ಸವ ಸಂಪನ್ನವಾಗಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಭಾಗಿಯಾಗಿದ್ದಾರೆ. ಸುತ್ತೂರು ಜಾತ್ರೆ ಎಂದರೆ ಇದು ನಮ್ಮ ಜಾತ್ರೆ ಅಂತ ಜನ ಬರುತ್ತಾರೆ. ತವರು ಮನೆಗೆ ಹೋದರೆ ಹೇಗೆ ಸಂತೋಷವಾಗುತ್ತೋ ಹಾಗೆ ಜನ ಸಂತೋಷದಿಂದ ಇಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದೆ. ನಮ್ಮ‌ ಗ್ರಾಮೀಣ ಜನರಲ್ಲಿ ಧೈರ್ಯ, ವಿಶ್ವಾಸವನ್ನು ಮೂಡಿಸುವ ಎಲ್ಲ ಕೆಲಸಗಳು ನಡೆದಿವೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: Amit Shah: ಮೋದಿಯಿಂದ ಆಯುರ್ವೇದ, ಸಂಸ್ಕೃತಿ ಪುನರ್ ಸ್ಥಾಪನೆ: ಅಮಿತ್ ಶಾ

ಶಿವಶಂಕರಪ್ಪನವರಿಂದ ಅತಿಥಿ ಗೃಹ

ಇಲ್ಲಿಗೆ ಬರುವ ಯಾತ್ರಾರ್ಥಿಗಳು ಬರುವುದನ್ನು ನೋಡಿ ಶಾಮನೂರು ಶಿವಶಂಕರಪ್ಪನವರು ಸುಮಾರು 700 ಜನ ತಂಗುವ ಒಂದು ಅತಿಥಿ ಗೃಹ ನಿರ್ಮಿಸಿಕೊಟ್ಟಿದ್ದಾರೆ. ಅದು ಅಮಿತ್ ಶಾ ಅವರಿಂದಲೇ ಲೋಕಾರ್ಪಣೆ ಆಗಬೇಕು ಎಂದು ದೈವೇಚ್ಛೆ ಇತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ. ಅಮಿತ್ ಶಾ ಈ ಕಾರ್ಯಕ್ರಮಕ್ಕೆ ಬಂದಿರುವುದು ಸಂತೋಷವಾಗಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಲಕ್ಷಾಂತರ ಜನರಿಗೆ ಬೆಳಕಾಗಿರುವ ಸುತ್ತೂರು ಮಠ: ಅಮಿತ್‌ ಶಾ

ಸುತ್ತೂರು ಮಠ ಅನ್ನ, ಅಕ್ಷರ ದಾಸೋಹ ನೀಡುತ್ತಿದೆ. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಅವರಿಂದ ಈಗಿನ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರವರೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ಜನರಿಗೆ ಬೆಳಕು ನೀಡಿದ್ದಾರೆ. ಇದಕ್ಕಾಗಿ ಪೀಠಾಧ್ಯಕ್ಷರಿಗೆ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ. ನಾನು ನಿನ್ನೆ ಸುತ್ತೂರಿಗೆ ಬರಬೇಕಿತ್ತು. ಇಂದು ಅಹಮದಾಬಾದ್‌ಗೆ ಹೋಗಬೇಕಿತ್ತು. ಆದರೆ, ಅಲ್ಲಿನ ಕಾರ್ಯಕ್ರಮವನ್ನು ರದ್ದು ಮಾಡಿದೆ. ಯಾಕೆ ಅಹಮದಾಬಾದ್‌ಗೆ ಹೋಗುತ್ತಿಲ್ಲ ಎಂದು ಪತ್ರಕರ್ತರು ಕೇಳಿದರು. ನಾನು ಬಿಲ್ಡಿಂಗ್ ಉದ್ಘಾಟಿಸಲು ಹೋಗುತ್ತಿಲ್ಲ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಅಂತ ಹೇಳಿದೆ ಎಂದು ಅಮಿತ್‌ ಶಾ ತಿಳಿಸಿದರು.

ಈ ಸುತ್ತೂರು ಜಾತ್ರೆಯಲ್ಲಿ ಕೊಂಡೋತ್ಸವ, ತೆಪ್ಪೋತ್ಸವ, ರಥೋತ್ಸವ, ಕುಸ್ತಿ, ಸಾಮೂಹಿಕ ವಿವಾಹ ಹೀಗೆ ಎಲ್ಲವೂ ನಡೆಯುತ್ತಿದೆ. ಈ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಕೆ ಆಗುತ್ತಿದೆ. ಶ್ರೀ ಮಠದಲ್ಲಿ 20 ಸಾವಿರ ಶಿಕ್ಷಕರು, ಒಂದು ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿಶೇಷ ಚೇತನರಿಗಾಗಿ ಪಾಲಿಟೆಕ್ನಿಕ್ ಕಾಲೇಜನ್ನೂ ನಡೆಸುತ್ತಿದ್ದಾರೆ ಎಂದು ಅಮಿತ್‌ ಶಾ ಶ್ಲಾಘನೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸಾಂಸ್ಕೃತಿಕ ಪುನರ್ ಪ್ರತಿಷ್ಠಾಪನೆಯಾಗಿದೆ. ದೇಶಾದ್ಯಂತ ನಮ್ಮ ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ, ಉಜ್ಜಯಿನಿ
ಬದ್ರಿನಾಥ್ ಕಾರಿಡಾರ್ ಅಭಿವೃದ್ಧಿ ಆಗಿವೆ. ದೇಶದ ಆಯುರ್ವೇದ, ಯೋಗ, ಭಾಷೆ, ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ. ಸುತ್ತೂರು ಮಠವೂ ಅಯೋಧ್ಯೆಯಲ್ಲಿ ಅತಿಥಿ ಗೃಹವನ್ನು ನಿರ್ಮಿಸುತ್ತಿದೆ. ಸುತ್ತೂರು ಮಠದ ಕೊಡುಗೆಯನ್ನು ಸ್ಮರಿಸಿ ನನ್ನ ಮಾತು ಮುಗಿಸುತ್ತೇನೆ ಎಂದು ಅಮಿತ್‌ ಶಾ ಹೇಳಿದರು.

ಅಥಿತಿ ಗೃಹದ ಉದ್ಘಾಟನೆ

ಸುತ್ತೂರು ವೇದಿಕೆಯಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅಥಿತಿ ಗೃಹದ ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸಿದರು. ಈ ವೇಳೆ ಅಯೋಧ್ಯೆ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ (Arun Yogiraj) ಅವರಿಗೆ ಶ್ರೀ ಶಿವರಾತ್ರಿ ಶಿವಯೋಗಿಗಳ ಮೂರ್ತಿ ಉಡುಗೆ ನೀಡುವ ಮೂಲಕ ಅಮಿತ್‌ ಶಾ ಅವರು ಸನ್ಮಾನಿಸಿದರು.

ಅಮಿತ್ ಶಾ ಹಣೆಯಲ್ಲಿ ವಿಭೂತಿ

ಇದಕ್ಕೂ ಮೊದಲು ಗದ್ದುಗೆ ಪೂಜೆ ನೆರವೇರಿಸಿದ ಅಮಿತ್‌ ಶಾ ಅವರು ವಿಭೂತಿ ಧಾರಣೆ ಮಾಡಿಕೊಂಡಿದ್ದರು. ಇದು ಎಲ್ಲರನ್ನೂ ಗಮನ ಸೆಳೆಯಿತು. ಅಮಿತ್ ಶಾ ಅವರಿಗೆ ಈ ವೇಳೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು. ಶ್ರೀಗಂಧದಲ್ಲಿ ನಿರ್ಮಿಸಿದ ಚಾಮುಂಡೇಶ್ವರಿ ವಿಗ್ರಹ ಹಾಗೂ ಅಮಿತ್ ಶಾ ಭಾವಚಿತ್ರವನ್ನು ನೀಡಲಾಯಿತು.

ಸುತ್ತೂರು ಮಠವು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ

ಬಳಿಕ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಅಮಿತ್‌ ಶಾ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸುತ್ತೂರು ಶಿವಯೋಗಿಗಳ ತಪೋ ಭೂಮಿ ಇದಾಗಿದೆ. ಇಂತಹ ಭೂಮಿಯ ಜಾತ್ರೆಯಲ್ಲಿ ಅಮಿತ್ ಶಾ ಅವರು ಭಾಗಿಯಾಗಿರುವುದು ಸಂತಸ ತಂದಿದೆ. ಸುತ್ತೂರು ಶ್ರೀಗಳು ಮಠ, ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ರಾಜ್ಯದಲ್ಲಿ ಸಾಧನೆ ಮಾಡಿದ್ದಾರೆ. ಕರ್ನಾಟಕವು ಮಠ ಮಾನ್ಯಗಳ ಸಂಸ್ಕೃತಿ ಇರುವ ನಾಡು ಇದಾಗಿದೆ. ಸುತ್ತೂರು ಮಠವು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸುತ್ತೂರು ಮಠದ ಬಗ್ಗೆ ಭಕ್ತಿ ಇದೆ. ಈಗ ಅಮಿತ್ ಶಾ ಅವರು ಮಠದ ಸದ್ಭಕ್ತರಾಗಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ‌ಬಾರಿ ಸಿಎಂ ಆಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ ಅವರ ಮಾರ್ಗದರ್ಶನದಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಮಿತ್ ಶಾ ಅವರ ಸಲಹೆಯಿಂದ ಹಲವು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಕಾಶ್ಮೀರದಲ್ಲಿ 370 ಅನ್ನು ಕಿತ್ತೆಸೆಯಲು ಅಮಿತ್ ಶಾ ಅವರ ಶ್ರಮ ಅಪಾರ. ಈಗ ಕಾಶ್ಮೀರ ಶಾಂತವಾಗಿದೆ. ಅಮಿತ್ ಶಾ ಬಂದಿರೋದು ರಾಜಕೀಯ ಹಾಗೂ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ಹಣೆಯಲ್ಲಿ ವಿಭೂತಿ; ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅಥಿತಿ ಗೃಹ ಉದ್ಘಾಟನೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.


Exit mobile version