Site icon Vistara News

Amit Shah: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!

Amit Shah visir Chamundi temple

ಮೈಸೂರು/ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದು, ದಕ್ಷಿಣ ರಾಜ್ಯಗಳತ್ತ ಬಿಜೆಪಿ ಹೈಕಮಾಂಡ್ (BJP high command) ದೃಷ್ಟಿ ನೆಟ್ಟಿದೆ. ಅದರಲ್ಲೂ ಬಿಜೆಪಿಯ ಭದ್ರಕೋಟೆ ಕರ್ನಾಟಕದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠ ಮಾಡುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದೆ. ಇದರ ಭಾಗವಾಗಿ ಕೇಂದ್ರ ಗೃಹ ಸಚಿವ, ಬಿಜೆಪಿ ನಂಬರ್‌ 2 ನಾಯಕ, ರಾಜಕೀಯ ಚಾಣಕ್ಯ ಖ್ಯಾತಿಯ ಅಮಿತ್‌ ಶಾ (Amit Shah) ಅವರು ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವ (Suttur Jatra Mahotsava in Mysuru) ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಚಾಮುಂಡೇಶ್ವರಿ ದೇವಿ (Chamundeshwari Devi) ದರ್ಶನ ಪಡೆದ ಅಮಿತ್ ಶಾ, ಅಲ್ಲಿಂದಲೇ ಚುನಾವಣಾ ರಣಕಹಳೆ ಊದಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್‌ ಶಾ ಅವರು ಪಕ್ಷದ ಕೋರ್‌ ಕಮಿಟಿ ಸಭೆಯನ್ನು ಬಿಜೆಪಿ ನಾಯಕರೊಂದಿಗೆ ನಡೆಸಿದ್ದಾರೆ. ಇದಕ್ಕೂ ಮೊದಲು ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದಾದ ಬಳಿಕ ಬಿಜೆಪಿ ಕೋರ್‌ ಕಮಿಟಿಗೆ ಮುಂದಾಗಿದ್ದ ಅಮಿತ್‌ ಶಾ, ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಒನ್‌ ಟು ಒನ್‌ ಮೀಟಿಂಗ್‌ ಮಾಡಿದ್ದಾರೆ. ಬಳಿಕ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

Amit Shah visir Chamundi temple

ಸುತ್ತೂರು ಮಠದ ಮೂಲಕ ಲಿಂಗಾಯತ ಮತದಾರರನ್ನು ಸೆಳೆಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿರುವ ಅಮಿತ್‌ ಶಾ, ತಮ್ಮ ಭಾಷಣದಲ್ಲಿ ಸುತ್ತೂರು ಮಠವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ, ಶ್ರೀಮಠದ ಕೊಡುಗೆಯನ್ನು ಕೊಂಡಾಡಿದ್ದಾರೆ. ಇದರ ಜತೆಗೆ ಬಸವಣ್ಣ ಅವರನ್ನು ಸ್ಮರಿಸುವ ಮೂಲಕ ತಾವು ಸಹ ಬಸವ ತತ್ವದ ಮೇಲೆ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದಾರೆ. ಬಿಜೆಪಿ ಸದಾ ಲಿಂಗಾಯತ ಸಮುದಾಯದ ಜತೆಗೆ ಇರುತ್ತದೆ ಎಂಬ ಸಂದೇಶವನ್ನು ಈ ಸಮಾವೇಶದ ಮೂಲಕ ರವಾನೆ ಮಾಡಿದ್ದಾರೆ. ಹೀಗಾಗಿ ಲಿಂಗಾಯತ ಮತ ಬ್ಯಾಂಕ್‌ ಅನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಶಾ ಪ್ರಯತ್ನ ಮಾಡಿದ್ದಾರೆ.

ವಿಜಯೇಂದ್ರ ಜತೆಗೆ ಏನು ಚರ್ಚೆ?

ಕೋರ್‌ ಕಮಿಟಿ ಸಭೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೈಸೂರಿನಲ್ಲಿನ ರಾಜಕೀಯ ವಾತಾವರಣ, ಪರಿಸ್ಥಿತಿ ಏನಿದೆ? ಯಾರಾದರೂ ವೈಯಕ್ತಿಕವಾಗಿ ಅಥವಾ ಕ್ಷೇತ್ರದಲ್ಲಿ ಹೆಸರನ್ನು ಹಾಳು ಮಾಡಿಕೊಂಡಿದ್ದಾರಾ? ಚುನಾವಣೆಯಲ್ಲಿ ಯಾವುದು ಪ್ಲಸ್‌ ಆಗಲಿದೆ? ಯಾವುದು ಮೈನಸ್‌ ಆಗಲಿದೆ? ಸಮಸ್ಯೆಗಳಿದ್ದಲ್ಲಿ ಈಗಲೇ ತಿಳಿಸಿ. ಈಗಲೇ ಸರಿಪಡಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಜೆಡಿಎಸ್‌ ಜತೆ ಹೊಂದಾಣಿಕೆ ವಿಚಾರ ಎಷ್ಟು ಪಾಸಿಟಿವ್ ಆಗಿದೆ? ಆಂತರಿಕ ಸಂಘರ್ಷ ಇದೆ ಎನ್ನುವ ಮಾಹಿತಿ ಇದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ? ಕೆಲವರನ್ನು ರಾಜ್ಯಸಭೆಯಿಂದ, ಮತ್ತೆ ಕೆಲವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ ಕೇಂದ್ರದ ಹಾಲಿ ಸಚಿವರನ್ನು ನಿಲ್ಲಿಸಿದರೆ ಗೆಲ್ಲುವ ಕ್ಷೇತ್ರಗಳಿವೆಯಾ? ಆ ರೀತಿ ಇದ್ದರೆ ಯಾವ ಕ್ಷೇತ್ರ ಬಿಜೆಪಿಗೆ ಹೆಚ್ಚು ಪಾಸಿಟಿವ್ ಇದೆ? 28 ಕ್ಷೇತ್ರದಲ್ಲಿ ಹಾಲಿ ಗೆಲ್ಲಬಹುದಾದ ಕ್ಷೇತ್ರಗಳೆಷ್ಟು? ಕಾಂಗ್ರೆಸ್ ಕಣಕ್ಕಿಳಿಸುವ ಯಾವ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ? ಅಲ್ಲಿ ಬಿಜೆಪಿ ಗೆಲ್ಲಲು ಯಾವ ರೀತಿಯ ವಾತಾವರಣವನ್ನು ಕಲ್ಪಿಸಬಹುದು? ಅನೇಕ ವಿಚಾರಗಳನ್ನು ವಿಜಯೇಂದ್ರ ಜತೆಯಲ್ಲಿ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version