Site icon Vistara News

Amit Shah : ಮೈಸೂರಿನಲ್ಲಿ ಅಮಿತ್‌ ಶಾ; ಸುತ್ತೂರು ಜಾತ್ರೆ, ರಾಜಕೀಯ ಯಾತ್ರೆ; ಏನೇನು ನಡೆಯುತ್ತೆ?

Amit shah suttur visit

ಬೆಂಗಳೂರು/ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ (Assembly Elections 2024) ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ, ಬಿಜೆಪಿಯ ನಂಬರ್‌ 2 ನಾಯಕ ಅಮಿತ್‌ ಶಾ (Amit Shah) ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಜಾತ್ರೆಯಲ್ಲಿ (Suttur Jatre) ಭಾಗವಹಿಸುವುದಕ್ಕಾಗಿ ಅವರು ಆಗಮಿಸುತ್ತಿರುವುದು ನಿಜವಾದರೂ ಲೋಕಸಭಾ ಚುನಾವಣೆಯ (Parliament Election 2024) ತಂತ್ರಗಾರಿಕೆ ನಿಟ್ಟಿನಲ್ಲೂ ಇದೊಂದು ಪ್ರಮುಖ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

‌ಅಮಿತ್‌ ಶಾ ಅವರು ಶನಿವಾರ ರಾತ್ರಿ 10.50ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಫೆ 11ರಂದು ಅಮಿತ್‌ ಶಾ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 11ರಂದು ಬೆಳಗ್ಗೆ 11 ಗಂಟೆಗೆ ಅಮಿತ್ ಶಾ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ‌ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ

ದರ್ಶನದ ಬಳಿಕ 11.45ಕ್ಕೆ ಹೆಲಿಕಾಪ್ಟರ್​ನಲ್ಲಿ ಸುತ್ತೂರು ಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜತೆಗೆ ಕಾಂಗ್ರೆಸ್ ಮುಖಂಡ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ನಿರ್ಮಿಸಿರುವ ಅತಿಥಿ ಗೃಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಸುತ್ತೂರು ಮಠದಲ್ಲಿ ಊಟ ಮುಗಿಸಿಕೊಂಡು ಮಧ್ಯಾಹ್ನ 2.30ಕ್ಕೆ ರಾಡಿಸನ್ ಬ್ಲೂ ಹೋಟೆಲ್‌ಗೆ ತೆರಳುತ್ತಾರೆ.

ಇದನ್ನೂ ಓದಿ: Amit Shah: ಇನ್ನು ಮುಂದೆ ಭಾರತ-ಮ್ಯಾನ್ಮಾರ್​ ಮಧ್ಯೆ ಮುಕ್ತ ಸಂಚಾರ ಅಸಾಧ್ಯ; ಅಮಿತ್‌ ಶಾ ಹೇಳಿದ್ದೇನು?

ಬಿಜೆಪಿ ನಾಯಕರ ಜತೆ ಸಭೆ ಸಾಧ್ಯತೆ

ಸುತ್ತೂರು ಜಾತ್ರಾ ಮಹೋತ್ಸವದ ನೆಪದಲ್ಲಿ ಮೈಸೂರಿಗೆ ಬರಲಿರುವ ಅವರು ಚುನಾವಣೆಗೆ ರಣತಂತ್ರ ಹೆಣೆಯುವ ಕಾರ್ಯಕ್ರಮವೂ ಇದೆ ಎನ್ನಲಾಗಿದೆ. ಹೋಟೆಲ್‌ನಲ್ಲಿ ಅವರು ಬಿಜೆಪಿ ನಾಯಕರ ಜತೆ ಸಭೆ ನಡೆಸಲಿದ್ದಾರೆ.

ಮೈಸೂರಿನಲ್ಲಿ ಬಿಗಿ ಭದ್ರತೆ, ಚಾಮುಂಡಿ ಬೆಟ್ಟದಲ್ಲಿ ನಿರ್ಬಂಧ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿ ಸಾರ್ವಜನಿಕರಿಗೆ ಕೆಲವು ಗಂಟೆಗಳವರೆಗೆ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 10 ರಿಂದ 11.30 ರ ತನಕ ಸಾರ್ವಜನಿಕರಿಗೆ ಬೆಟ್ಟಕ್ಕೆ ತೆರಳಲು ನಿರ್ಬಂಧವಿರುತ್ತದೆ. ಈ ಸಮಯ ಹೊರತು ಪಡಿಸಿದ ಬಳಿಕ ಎಂದಿನಂತೆ ಭಕ್ತರು ಬೆಟ್ಟಕ್ಕೆ ತೆರಳಬಹುದಾಗಿದೆ.ರಕ್ಷಣೆಯ ಸಲುವಾಗಿ ಪೊಲೀಸರು ಕೈಗೊಂಡಿರುವ ಭದ್ರತಾ ದೃಷ್ಠಿಯಿಂದ ಸಾರ್ವಜನಿಕರು ಭಾನುವಾರ ಬೆಳಗ್ಗೆ 11.30 ರ ನಂತರ ದೇವಿ ದರ್ಶನಕ್ಕೆ ಬೆಟ್ಟಕ್ಕೆ ತೆರಳುವುದು ಸೂಕ್ತವಾಗಿದೆ. ಕಮಿಷನರ್ ರಮೇಶ್ ಬಾನೋತ್ ಹೇಳಿದ್ದಾರೆ.

Exit mobile version