ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ, ರಾಜಕೀಯ ಚಾಣಕ್ಯ ಅಮಿತ್ ಶಾ (Amit Shah) ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರು ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೂ ಭಾಗಿಯಾಗಬೇಕಿತ್ತು. ಆದರೆ, ಅವರು ಅನಾರೋಗ್ಯದ ಸಂಬಂಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಗೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿಗೆ ಬಂದಿದ್ದಾರೆ. ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಸ್ವಾಗತ. ಇಂದಿನ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭಾಗಿಯಾಗಲು ಆಗುತ್ತಿಲ್ಲ. ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ, ರೆಸ್ಟ್‌ನಲ್ಲಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈ ವಿಚಾರವನ್ನು ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ನಾಳೆ ಅಧಿವೇಶನದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ಮಂಡ್ಯ ಸ್ಪರ್ಧೆ ವಿಚಾರವನ್ನು ನಿರಾಕರಿಸಿದ ನಿಖಿಲ್ ಕುಮಾರಸ್ವಾಮಿ, ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿ ಅಲ್ಲ. ನಾನು ಇದನ್ನು ಹಿಂದೆಯೂ ಹೇಳಿದ್ದೆ. ನಾನು ಯೂಟರ್ನ್ ಹೊಡೆಯುವ ಗಿರಾಕಿ ಅಲ್ಲ. ಈಗ ನಾನು ಮಂಡ್ಯ ಆಕಾಂಕ್ಷಿ ಅಲ್ಲ. 2019 ರಲ್ಲಿ ಅಭ್ಯರ್ಥಿ ಆಗಿದ್ದೆ, ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಸಹಜವಾಗಿ ಮಂಡ್ಯ ಮುಖಂಡರ ಒತ್ತಾಯ ಇದೆ ಎಂದು ತಿಳಿಸಿದರು.
ನೀವು ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಅಂತ ಮಂಡ್ಯ ಮುಖಂಡರು, ಕಾರ್ಯಕರ್ತರು ಕರೆದರು. ಈ ಒತ್ತಡದ ಕಾರಣವಾಗಿ ನಾನು ಮಂಡ್ಯ ಭಾಗದಲ್ಲಿ ಓಡಾಡಿದ್ದೆ. ಮೈತ್ರಿಯನ್ನು ಬಲ ಪಡಿಸಬೇಕು, ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ತೆರಿಗೆ ಹಂಚಿಕೆ ತಾರತಮ್ಯ, ಉತ್ತರ ಕೊಡಿ ಅಮಿತ್ ಶಾ ಎಂಬ ಕಾಂಗ್ರೆಸ್ ಒತ್ತಾಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ಹಣಕಾಸು ಆಯೋಗಗಳು ಸ್ವಾಯತ್ತ ಸಂಸ್ಥೆಗಳು, ಹಿಂದುಳಿದ ರಾಜ್ಯಗಳಿಗೆ ತೆರಿಗೆ, ಅನುದಾನ ಹಂಚಿಕೆ ಬಗ್ಗೆ ಹಣಕಾಸು ಆಯೋಗದ ಶಿಫಾರಸು ಅನ್ವಯ ಕೇಂದ್ರ ತೀರ್ಮಾನ ಕೈಗೊಳ್ಳುತ್ತದೆ. ಆದರೆ, ಇದನ್ನೇ ರಾಜಕೀಯವಾಗಿ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಈಗ ಬಹಳ ಪ್ರಜ್ಞಾವಂತರು, ಬುದ್ಧಿವಂತರಾಗಿದ್ದಾರೆ. ಜನ ದಡ್ಡರೇನಲ್ಲ. ಈ ವಿಚಾರ ಜನರ ಗಮನದಲ್ಲಿದೆ. ಜನರ ಗಮನದಲ್ಲಿಲ್ಲದಾಗ ನಾಯಕರು ಮಾತಾಡಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Amit Shah: ಅಮಿತ್ ಶಾ ಜತೆ ಇಂದು 4 ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆ: ಬಿ.ವೈ. ವಿಜಯೇಂದ್ರ
ಗೊಂದಲಗಳಿಗೆ ಮುಖಂಡರಿಂದ ಶೀಘ್ರ ತೆರೆ
ಮಂಡ್ಯ, ಹಾಸನದಲ್ಲಿ ಜೆಡಿಎಸ್‌ಗೆ ಮಾಜಿ ಶಾಕ ಪ್ರೀತಂಗೌಡ ವಿರೋಧ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ಕೇಂದ್ರದ ನಾಯಕರು, ನಮ್ಮ ಪಕ್ಷದ ವರಿಷ್ಠರು ಅತಿ ಶೀಘ್ರದಲ್ಲೇ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆಯುತ್ತಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಪ್ರೀತಂ ಗೌಡರ ಹೇಳಿಕೆಗೆ ಸಂತೋಷ ಎಂದು ಹೇಳಿದರು. ಮಂಡ್ಯ ಕ್ಷೇತ್ರದಲ್ಲಿ ತಾವು ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಷ್ ಒತ್ತಾಯ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್, ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರಿಸುತ್ತದೆ.