ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ವಿವಾದ ಇನ್ನೇನು ಮುಕ್ತಾಯವಾಯಿತು ಎನ್ನುವಷ್ಟರಲ್ಲೆ ಮತ್ತೊಂದು ಸುತ್ತಿನ ಪಠ್ಯ ವಿವಾದ ಆರಂಭವಾಗುವ ಮುನ್ಸೂಚನೆ ಲಭಿಸಿದೆ. ಇನ್ನು ಮುಂದೆ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯ ಆರಂಭವಾಗಲಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡಿತ್ತು. ಈ ಪರಿಷ್ಕರಣೆಯಲ್ಲಿ ಟಿಪ್ಪು ಸುಲ್ತಾನನನ್ನು ವೈಭವೀಕರಿಸಲಾಗಿದೆ, ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರ್‌ಎಸ್‌ಎಸ್ ವಲಯ ಹಾಗೂ ಬಿಜೆಪಿಯಿಂದ ವಿರೋಧ ಕೇಳಿಬಂದಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಲೇಖಕ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಈ ವಿವಾದ ತಾರಕಕ್ಕೇರಿ ಎರಡು ದಿನದ ಹಿಂದಷ್ಟೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜನೆ ಮಾಡಿದ್ದರು. ಆದರೆ ಈ ಸಮಿತಿ ವಿಸರ್ಜನೆಗೂ ಮುನ್ನವೇ ಪಿಯು ಪಠ್ಯ ಪರಿಷ್ಕರಣೆಗೂ ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ.
ಇದನ್ನೂ ಓದಿ | ಬ್ರಾಹ್ಮಣರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಕಾಂಗ್ರೆಸ್ ವಿರುದ್ಧ ರೋಹಿತ್ ಚಕ್ರತೀರ್ಥ ಆರೋಪ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದೆಯೇ ವಿನಃ ಪಿಯು ಪಠ್ಯ ಪರಿಷ್ಕರಣೆ ಸಮಿತಿಯನ್ನಲ್ಲ. ಈ ಆದೇಶ ಇನ್ನೂ ಜೀವಂತವಾಗಿದೆ. ಈ ಕುರಿತು ಸ್ವತಃ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.
ವಿಸರ್ಜನೆ ಆಗಿರುವುದು ಹೈಸ್ಕೂಲ್ ಮತ್ತು ಪ್ರೈಮರಿ ಪಠ್ಯಪರಿಷ್ಕರಣೆ ಸಮಿತಿ ಮಾತ್ರ. ಪಿಯು ಪಠ್ಯಪರಿಷ್ಕರಣೆ ಸಮಿತಿಗೂ ಈ ಆದೇಶಕ್ಕೂ ಸಂಬಂಧ ಇಲ್ಲ. ಸರ್ಕಾರ ನಮಗೆ ನೀಡಿರುವ ಕೆಲಸ ಮಾಡಿ ಮುಗಿಸುತ್ತೇವೆ ಎಂದಿದ್ದಾರೆ.
ಈಗಾಗಲೆ ಪ್ರಾಥಮಿಕ ಪಠ್ಯದ ವಿಚಾರದಲ್ಲಿ ವಿವಾದ ಆಗಿರುವುದರಿಂದ ಪಿಯು ಪಠ್ಯ ಪರಿಷ್ಕರಣೆ ಕಾರ್ಯದಿಂದ ಹಿಂದೆ ಸರಿಯುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಚಕ್ರತೀರ್ಥ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರ ನಮಗೆ ಒಂದು ಕೆಲಸ ಕೊಟ್ಟಿದೆ. ಅದನ್ನು ಪೂರೈಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಸಮಿತಿ ಮೇಲಿನ ಆರೋಪಕ್ಕೆ ಸಚಿವ ನಾಗೇಶ್‌ರವರ ಸಂಪೂರ್ಣ ವರದಿ ಇಲ್ಲಿದೆ