ಬೆಂಗಳೂರು: ಆಪಲ್ ಫೋನ್‌ಗಳ (Apple Phone) ಉತ್ಪಾದಕ ಸಂಸ್ಥೆ ಬೆಂಗಳೂರಿನಲ್ಲಿ 1 ಲಕ್ಷ ಉದ್ತೋಗ ಸೃಷ್ಟಿಸುವ ಹೂಡಿಕೆ ಮಾಡುವ ಕುರಿತು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಫಾಕ್ಸ್‌ಕಾನ್ ಹೂಡಿಕೆ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಆದರೆ ಈ ಕುರಿತು ಯಾವುದೇ ನಿರ್ದಿಷ್ಟ ಒಪ್ಪಂದ ಆಗಿಲ್ಲ ಎಂದು ಫಾಕ್ಸ್‌ಕಾನ್ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, “ರಾಜ್ಯ ಬಿಜೆಪಿ ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ,ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ”
“ಐಫೋನ್ ತಯಾರಿಸುವ ತೈವಾನ್ ದೇಶದ ಫಾಕ್ಸ್ ಕಾನ್ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯ್ಯಲ್ಲಿ ಸಹಿಪತ್ರಗಳನ್ನಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು.”
ಇದನ್ನೂ ಓದಿ: ಬೆಂಗಳೂರಲ್ಲಿ ಆ್ಯಪಲ್ ಫೋನ್ ಉತ್ಪಾದನಾ ಘಟಕ ಇಲ್ಲ, ಒಪ್ಪಂದ ಮಾಡಿಕೊಂಡಿಲ್ಲ ಎಂದ ಫಾಕ್ಸ್‌ಕಾನ್
“ಆ ಬೆನ್ನಲ್ಲೇ ತೈವಾನ್ʼನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಂಪನಿ, “ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ” ಎಂದು ಸ್ಪಷ್ಟಪಡಿಸಿದೆ. ಹಾಗಾದರೆ, ಶುಕ್ರವಾರ ಮಾನ್ಯ ಬಸವರಾಜ ಬೊಮ್ಮಾಯಿ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ?? ಜನರಿಗೆ ತಿಳಿಸಬೇಕಿದೆ. ಕೋವಿಡ್ ನಂತರದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪನಿ ಕರ್ನಾಟಕದ ಕೈ ಜಾರಿತು. ₹7,614 ಕೋಟಿ ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು”.
“ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಬಿಜೆಪಿ ಸರ್ಕಾರಕ್ಕೆ ಅಧಿಕಾರವೇ ಮುಖ್ಯ. ಉಳಿದಿದ್ದೆಲ್ಲ ಅಮುಖ್ಯ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.