ಬೆಂಗಳೂರು: ಸಚಿವರೊಬ್ಬರ ಕುಟುಂಬದ ಸದಸ್ಯರ‍್ಯಾರೊ ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ ಎಂದು ತಿಳಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಐಟಿಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ನಮ್ಮದೇನು ಡಿಕೆ ಶಿವಕುಮಾರ ಕುಟುಂಬ ಕೆಟ್ಟೋಯ್ತ? ಎಂದಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯೆ ನೀಡಿದರು.
ಪತ್ರಿಕೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ, ಶಿವಕುಮಾರ್ ಬಂಡವಾಳವನ್ನು ಬಿಚ್ಚೋದಕ್ಕೆ ಶುರು ಮಾಡುತ್ತೇನೆ. ಇವರು ಎಲ್ಲೆಲ್ಲಿ, ಹೇಗೆ ಮುಂದೆ ಬಂದರು ಎನ್ನುವುದನ್ನು ಮುಂದಿಡುತ್ತೇನೆ. ಒಬ್ಬ ಭ್ರಷ್ಟಾಚಾರಿ ವ್ಯಕ್ತಿ ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡುತ್ತಿದ್ದಾರೆ. ನಾವು ಯಾರಿಗೂ ಸಹಾಯ ಮಾಡಿ ಎಂದು ಹೇಳಿಲ್ಲ. ಈ ಆರೋಪ ಮಾಡುತ್ತಿರುವವರು ಯಾವ ವಿಚಾರವನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಅಣ್ಣ ಇರಬಹುದು, ತಮ್ಮ ಇರಬಹುದು, ಸಂಬಂಧಿಕ ಇರಬಹುದು ಎಂದು ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ. ಯಾರೊ ಒಬ್ಬ ವ್ಯಕ್ತಿ ಉತ್ತಮವಾಗಿದ್ದಾನೆ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಭ್ರಷ್ಟಾಚಾರಿಗಳನ್ನು ಚುಚ್ಚುತ್ತಿದೆ. ಇಂತಹ ಕೀಳು ಮಟ್ಟದ ಹೇಳಿಕೆಯನ್ನು ನೀಡಲು ಹೇಗೆ ಮನಸ್ಸು ಬರುತ್ತದೆ? ಯಾವ ದುರುದ್ದೇಶದಿಂದ ಹೇಳಿಕೆ ಕೊಟ್ಟಿದ್ದಾರೆ ಎಂದು ಗೊತ್ತಿಲ್ಲ. ಅಶ್ವತ್ಥನಾರಾಯಣ ಮುಖ್ಯಮಂತ್ರಿ ಆಗುತ್ತಿದ್ದಾರೆ ಎಂದು ಯಾರಾದರೂ ಶಿವಕುಮಾರ್ ಅವರಿಗೆ ಕರೆ ಮಾಡಿದ್ದರೆ, ಅಂತಹ ವ್ಯಕ್ತಿ ಈ ರೀತಿ ಮಾತನಾಡಬಾರದು ಎಂದು ಅವರೇ ಹೇಳಬೇಕು. ನಾನು ಸಿಎಂ ಆದರೆ ಹೇಗೆ ಎಂಬ ಭಯ ಅವರಿಗೆ ಇರಬೇಕು, ಈ ಭಯ ಇರಲಿ, ಒಳ್ಳೆಯದು.
ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು. ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ.
ಇದನ್ನೂ ಓದಿ | PSI Scam | ಹೋರಾಟ ಮಾಡೋಣ ಬನ್ನಿ ಎಂದವನೇ A1; ಇಪ್ಪತ್ತೆರಡು ಅಭ್ಯರ್ಥಿಗಳ ವಿರುದ್ಧ FIR
‘ಸತೀಶ್ ಅವರು ನನ್ನ ಅಣ್ಣ ಎನ್ನುವುದು ನಿಜ. ಆದರೆ, ಈ ದರ್ಶನ್ ಗೌಡ ಯಾರೆನ್ನುವುದೂ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಯೂ ಇಲ್ಲ. ನನ್ನ ಸಾಧನೆಗಳನ್ನು ಸಹಿಸಿಕೊಳ್ಳಲು ವಿರೋಧಿಗಳಿಗೆ ಆಗುತ್ತಿಲ್ಲ. ಹೀಗಾಗಿ ಮಸಿ ಮೆತ್ತುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದರು.
ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕೆಂದು ಹೇಳುವವನು ನಾನು. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಕೂಡ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಈಗಾಗಲೇ ವಿಚಾರಣೆ ಆರಂಭವಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಮಾಧ್ಯಮಗಳು ಇದರತ್ತ ಗಮನ ಹರಿಸಬೇಕು.
ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು ಈಗ ಮಾಡುತ್ತಿರುವ ಆರೋಪವನ್ನು ಒಪ್ಪುವುದಾದರೆ, ತಮ್ಮ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರರನ್ನೇ ಕಡುಭ್ರಷ್ಟ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದ ಉಗ್ರಪ್ಪನವರ ಹೇಳಿಕೆಯನ್ನೂ ಸತ್ಯ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಅವರು ಹಲವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಕಟ್ಟಕತೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವುಗಳನ್ನು ಆಳವಾಗಿ ಪರಿಶೀಲಿಸಿದರೆ, ಇವೆಲ್ಲ ಎಲ್ಲಿ ಸೃಷ್ಟಿಯಾಗುತ್ತಿದೆ ಎನ್ನುವುದೆಲ್ಲ ಗೊತ್ತಾಗುತ್ತದೆ. ಕುಟುಂಬದವರ ಹೆಸರನ್ನು ತೇಲಿಬಿಟ್ಟು ಈಗ ಹೀನ ರಾಜಕೀಯ ಮಾಡಲಾಗುತ್ತಿದೆ. ಎಂತಹ ಸ್ಥಿತಿಯಲ್ಲೂ ನಾವು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಪದ್ಧತಿ ನಮಗೆ ಗೊತ್ತಿಲ್ಲ. ನಾವು ಜನಸೇವೆ ಮಾಡಲೆಂದು ಬಂದು ಈ ಕ್ಷೇತ್ರಕ್ಕೆ ಬಂದಿರುವವರು.
ವಿರೋಧಿಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಸಾಕ್ಷ್ಯಾಧಾರಗಳ ಸಮೇತ ಸಾಬೀತು ಪಡಿಸಬೇಕು. ಇಲ್ಲದೆ ಹೋದರೆ ನಾನು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಂತೂ ನಿಶ್ಚಿತ. ನಮ್ಮ ಕುಟುಂಬದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕುಟುಂಬದ ಹಸ್ತಕ್ಷೇಪ ಮಾಡಲು ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ? ನಮ್ಮ ಕುಟುಂಬದಲ್ಲಿ ಇಂತಹ ಪದ್ಧತಿ, ಅಧಿಕಾರದಲ್ಲಿ ಹಸ್ತಕ್ಷೇಪದಂತಹ ವಿಚಾರಗಳೇ ಇಲ್ಲ ಎಂದರು. ಆದರೆ ಕೆಲವರು ರಾಜಕೀಯಕ್ಕೆ ಬಂದು ಮನುಷ್ಯತ್ವದ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪಗಳನ್ನು ಮಾಡುವ ಇವರಿಗೆ ನಾಚಿಕೆ ಅನ್ನೋದೇ ಇಲ್ಲವಾ? ಎಂದು ಲೇವಡಿ ಮಾಡಿದರು.
ಇದನ್ನೂ ಓದಿ | PSI Scam | 18 ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿವ್ಯಾ ಹಾಗರಗಿ ಅರೆಸ್ಟ್: ಒಟ್ಟು 18 ಆರೋಪಿಗಳ ಬಂಧನ