ವಿಧಾನಸಭೆ: ಮುಂಬರುವ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ, ಸರ್ಕಾರ ರಚನೆಗೆ ತಮ್ಮ ಮೇಲೆ ಅವಲಂಬನೆ ಆಗಬೇಕೆಂದು ಕಾಯುತ್ತಿರುತ್ತಾರೆ ಎಂದು ಜೆಡಿಎಸ್ ಪಕ್ಷವನ್ನು ಟೀಕಿಸಲು, ಅಂಗವಿಕಲ ಮಗುವಿನ ಉದಾಹರಣೆಯನ್ನು ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ್ದಾರೆ. ರಾಜ್ಯಪಾಲರ ಭಾಷಣದ ಕುರಿತು ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಈ ವಿಷಯವನ್ನು ಸಿ.ಟಿ. ರವಿ ಪ್ರಸ್ತಾಪಿಸಿದರು.
ರಾಜ್ಯದಲ್ಲಿ 2018 ರಲ್ಲಿ ಯಾವ ಪಕ್ಷಕ್ಕೂ ಜನಾದೇಶ ಸಿಕ್ಕಿರಲಿಲ್ಲ. ಜೆಡಿಎಸ್ ಎಂದರೆ ಬಿಜೆಪಿಯ ಬಿ ಟೀಮ್ ಅಂತ ಸಿದ್ಧರಾಮಯ್ಯ ಭಾಷಣ ಮಾಡಿದ್ರು. ಆದರೆ ಅವರೊಂದಿಗೆ ಸೇರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಿಂದಲೇ ಸಿದ್ಧರಾಮಯ್ಯ ಸೋತಿದ್ದರು. ಆದರೆ ಅನೈತಿಕ ರೀತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ರಚನೆಯಾಯ್ತು.
ನಂತರ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಬಿಜೆಪಿ ಸರ್ಕಾರ ರಚನೆಯಾಯ್ತು. ಜನರ ಮುಂದೆ ಅಗ್ನಿಪರೀಕ್ಷೆಗೆ ಹೋದಾಗ ಬೆಂಬಲ ಸಿಕ್ತು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಯಾವುದೇ ಸಂದರ್ಭದಲ್ಲೂ ಜನರು ನಮ್ಮ ಮೇಲೆ ಅನುಮಾನ ಪಟ್ಟಿಲ್ಲ. ಚುನಾವಣೆಯಲ್ಲಿ ಸೋತ ಹಲವು ನಿದರ್ಶನಗಳು ರಾಜ್ಯದಲ್ಲಿವೆ. ಬಿಜೆಪಿಯ ಎರಡು ಶಾಸಕರು ಮಾತ್ರ ಇದ್ದರು. ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಉದಾಹರಣೆಯಿದೆ ಎಂದರು.
ಜೆಡಿಎಸ್ ಕುರಿತು ಟೀಕೆ ಆರಂಭಿಸಿದ ರವಿ, ಹಲವು ವರ್ಷ ಕಾದು ದಂಪತಿಗೆ ಅಂಗವಿಕಲ ಮಗು ಹುಟ್ಟಿತು. ಅಂಗವಿಕಲ ಮಗು ಹುಟ್ಟಿದಾಗ ಮಗುವಿನ ಮಾವ ಅದರ ಲಾಭ ಪಡೆದ. ಅಂಗವಿಕಲ ಮಗುವನ್ನು ನೋಡಲು ಟಿಕೆಟ್ ಇಟ್ಟ. ಒಂದು ದಿನ ಮಗು ಸತ್ತಾಗ ಮಾವನಿಗೆ ತುಂಬಾ ಬೇಸರ ಆಯ್ತು. ಮಗು ಇದ್ದರೆ ಟಿಕೆಟ್ ಮೂಲಕ ಹಣ ಸಂಪಾದನೆಯಾಗ್ತಿತ್ತು ಎಂದು ಅವನು ಬೇಸರಗೊಂಡ.
ಕೆಲವರು ಅಂಗವಿಕಲ ಮಗು ಹುಟ್ಟಲಿ ಅಂತ ಕಾಯ್ತಾ ಇರುತ್ತಾರೆ. ರಾಜಕಾರಣ ಬ್ಯುಸಿನೆಸ್ ಅಲ್ಲ. ಅಂಗವಿಕಲ ಮಗು ಹುಟ್ಟಿದರೆ ಕಲೆಕ್ಷನ್ ಎಜೆಂಟ್ ಹುಟ್ಟಿಕೊಳ್ಳುತ್ತಾರೆ. ಕಲೆಕ್ಷನ್ ಗೇಟ್ ಇಟ್ಟುಕೊಳ್ಳುವುದನ್ನು ತಡೆಯಬೇಕಿದೆ. ಅದಕ್ಕಾಗಿ ಒಳ್ಳೆಯ ಮಗು ಹುಟ್ಟುವ ಅಗತ್ಯವಿದೆ. ಯಾರ ಹಂಗೂ ಇಲ್ಲದ ಸರ್ಕಾರ ರಚನೆಯಾಗಬೇಕು ಅನ್ನೋದು ನಮ್ಮ ಆಶಯ ಎಂದರು.
ಸಿ.ಟಿ.ರವಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಂಡೆಪ್ಪ ಕಾಶಂಪೂರ್, ನಾವು ಬಹುಮತಕ್ಕೆ ಬರುತ್ತೇವೆ ಎಂದರು. ಕಾಶಂಪೂರ ಆಕ್ಷೇಪದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.