Site icon Vistara News

Assembly Session: ನಾಳೆಯಿಂದ ಮಳೆಗಾಲದ ಅಧಿವೇಶನ: ಹೇಗಿದೆ ಸರ್ಕಾರ, ಪ್ರತಿಪಕ್ಷಗಳ ತಯಾರಿ?

Assembly Session

Assembly Session

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪ (Assembly Session) ಸೋಮವಾರ (ಜುಲೈ 15) ಆರಂಭವಾಗಲಿದ್ದು, ಒಂಬತ್ತು ದಿನ ನಡೆಯಲಿದೆ. ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸರ್ಕಾರದ ವಿರುದ್ಧ ಮುಗಿ ಬೀಳಲಿದೆ.

ಹಗರಣಗಳೇ ಪ್ರಮುಖ ಅಸ್ತ್ರ

ರಾಜ್ಯದಲ್ಲಿ ಸದ್ಯ ಸದ್ದು ಮಾಡುತ್ತಿರುವ ವಿವಿಧ ಹಗರಣಗಳನ್ನು ಮುಂದಿಟ್ಟು ಬಿಜೆಪಿ, ಜೆಡಿಎಸ್‌ ಸರ್ಕಾರಕ್ಕೆ ಮುಜುಗರ ತರಲಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಹೊರ ಬಂದಿದೆ. ಈ ಬಾರಿಯ ಸರ್ಕಾರದ ಮೊದಲ ಬಹು ಕೋಟಿ ರೂ. ಹಗರಣ ಇದಾಗಿದ್ದು, ಈಗಾಗಲೇ ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ ಬಂಧಿಸಿದೆ. ಜತೆಗೆ ಇನ್ನೂ ಹಲವರ ಬಂಧನವಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಿಗಮದ ಅಧ್ಯಕ್ಷ, ಶಾಸಕ ಬಸವನಗೌಡ ದದ್ದಲ್‌ ರಾಜೀನಾಮೆ ನೀಡದಿರುವ ಬಗ್ಗೆಯೂ ಧ್ವನಿ ಎತ್ತುವ ಸಾಧ್ಯತೆ ಇದೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿ ಬಂದಿದೆ. ಸ್ವತಃ ಸಿಎಂ ಕುಟುಂಬದ ವಿರುದ್ಧ ನಿಯಮ ಬಾಹಿರವಾಗಿ 14 ಬದಲಿ ನಿವೇಶನ ಪಡೆದಿರುವ ಆರೋಪವಿದೆ. ಮಾತ್ರವಲ್ಲ ಇತರ ರಾಜಕಾರಣಿಗಳ ವಿರುದ್ಧವೂ ಅಕ್ರಮ ಸೈಟ್ ಪಡೆದಿರುವ ಆರೋಪ ಜೋರಾಗಿದೆ. ಇದು ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ರಾಜ್ಯದಲ್ಲಿ ವಿವಾದ ಎಬ್ಬಿಸಿದ ಇನ್ನೊಂದು ವಿಚಾರ ಎಂದರೆ ಸರ್ಕಾರದ ಗ್ಯಾರಂಟಿಗೆ ದಲಿತರ ಹಣ ಬಳಕೆ ಮಾಡಿಕೊಂಡಿರುವುದು. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗೆ ಬಳಸಿರುವ ಆರೋಪವಿದೆ. ಶಕ್ತಿ ಯೋಜನೆಗೆ ಮೊದಲು 11 ಸಾವಿರ ಕೋಟಿ ರೂ. ದುರ್ಬಳಕೆ ಮಾಡಲಾಗಿದೆ. ಎರಡನೇ ಬಾರಿ ಶಕ್ತಿ ಯೋಜನೆಗೆ 14 ಸಾವಿರ ಕೋಟಿ ರೂ. ಹಣ ಬಳಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ವಿಚಾರವನ್ನೂ ಪ್ರತಿಪಕ್ಷಗಳು ಪ್ರಸ್ತಾವಿಸಲು ಸಿದ್ಧತೆ ಮಾಡಿಕೊಂಡಿವೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಹಾಲಿ ಸಚಿವ ರಾಜಣ್ಣ ಎರಡು ಸಾವಿರ ಕೋಟಿ‌ ರೂ. ಹಗರಣ ಮಾಡಿದ್ದಾರೆ. ನಿಯಮಬಾಹಿರವಾಗಿ ಸಾಲ ನೀಡಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಅವರು ಬ್ಯಾಂಕ್‌ನ ಠೇವಣಿದಾರರಲ್ಲದ ಸಕ್ಕರೆ ಕಾರ್ಖಾನೆ, ಇತರ ಸಂಸ್ಥೆಗಳಿಗೆ ಸಾಲ ನೀಡಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದೆ.

ಸರ್ಕಾರದಲ್ಲಿ ನಿರಂತರ ವರ್ಗಾವಣೆ ಮಾಡಿರುವ ಆರೋಪವೂ ಕೇಳಿ ಬಂದಿದೆ. ನಿರ್ಧಿಷ್ಟ ಸಮಯವಲ್ಲದೆ ಇತರ ಸಮಯದಲ್ಲೂ ಪದೇ ಪದೆ ವರ್ಗಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ವಪಕ್ಷೀಯರೇ ಧ್ವನಿ ಎತ್ತಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ. ಈ ವಿಚಾರದಲ್ಲಿಯೂ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ.

ಸಿಗದ ಪ್ರೋತ್ಸಾಹ ಧನ

ಹೈನುಗಾರರಿಗೆ ಕಳೆದ ವರ್ಷದಿಂದ ಬೆಂಬಲ ಬೆಲೆ ತಲುಪದಿರುವುದು ಕೂಡ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಲಿದೆ. ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಂದ ಹಣ ಪಡೆಯುತ್ತಿರುವ ಸರ್ಕಾರ ಕಳೆದ ವರ್ಷದಿಂದ ಒಂದು ಸಾವಿರ ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ ಇದನ್ನೂ ಪ್ರತಿಪಕ್ಷಗಳು ಪ್ರಸ್ತಾವಿಸಲಿದೆ.

ಬೆಲೆ ಏರಿಕೆ

ಗ್ಯಾರಂಟಿ ಯೋಜನೆ ಸರಿದೂಗಿಸಲು ಹಲವು ರೀತಿಯಲ್ಲಿ ದರ ಏರಿಕೆ ಮಾಡಿರುವುದು ಕೂಡ ಗದ್ದಲಕ್ಕೆ ಕಾರಣವಾಗಲಿದೆ. ಸರ್ಕಾರ ಪೆಟ್ರೋಲ್, ಡೀಸೆಲ್ ಸೆಸ್ ದರ, ಪ್ರಾಪರ್ಟಿ, ಗೈಡ್ ಲೈನ್ಸ್ ವ್ಯಾಲ್ಯು, ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಇದರಿಂದ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದನ್ನು ಪ್ರತಿಪಕ್ಷ ಪ್ರಸ್ತಾವಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ.

ಸರ್ಕಾರದ ಸಿದ್ಧತೆ ಹೇಗಿದೆ?

ಮುಡಾ ಕೇಸ್‌ಗೆ ಪ್ರತಿಯಾಗಿ ಸೂಡಾ ಅಕ್ರಮವನ್ನು ಪ್ರಸ್ತಾವಿಸಲು ಇತ್ತ ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗ ಪ್ರಾಧಿಕಾರದಲ್ಲೂ ಸೈಟ್ ಹಂಚಿಕೆ ಗೋಲ್‌ಮಾಲ್ ನಡೆದಿದ್ದು, ಬಿಜೆಪಿ ನಾಯಕರು ಹಾಗೂ ಅವರ ಕುಟುಂಬಸ್ಥರು ಶಾಮೀಲಾಗಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಬಿಜೆಪಿ ನಾಯಕರ ಶಾಮೀಲು ಆಗಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಿದೆ. ಈ‌ ಕುರಿತು ಸದನದಲ್ಲಿ ದಾಖಲೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಾಲದಲ್ಲಿ ಮುಡಾ ಸೈಟ್ ಹಂಚಿಕೆ ಅಕ್ರಮ ಆಗಿದೆ. 48 ನಿವೇಶನ ಹಂಚಿಕೆಯ ವೇಳೆಯಲ್ಲಿ ಮಾಜಿ ಸಿಎಂ ಎಚ್‌ಡಿಕೆಗೂ 60 ಸಾವಿರ ಅಡಿ ನಿವೇಶನ ನೀಡಲಾಗಿದೆ‌. ಈ ಪ್ರಕರಣವನ್ನ ಸ್ವತಃ ಯಡಿಯೂರಪ್ಪ ಅವರೇ ಪರಿಷತ್ ನಲ್ಲಿ ಪ್ರಸ್ತಾಪ ಮಾಡಿದ್ದರು. ಜತೆಗೆ ಅಂದಿನ ಸಭಾಪತಿಗೆ ದಾಖಲೆ ಸಹ ನೀಡಿದ್ದರು ಎಂಬ ವಿಚಾರ ಪ್ರಸ್ತಾವ ಮಾಡಲು ಕಾಂಗ್ರೆಸ್‌ ತಯಾರಿ ನಡೆಸಿದೆ.

ಇದನ್ನೂ ಓದಿ: D. S. Veeraiah: ಅರಸು ಟರ್ಮಿನಲ್ ಹಗರಣದಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್. ವೀರಯ್ಯ ಬಂಧನ

ವಾಲ್ಮೀಕಿ ‌ನಿಗಮದ ಅಕ್ರಮದ ಪ್ರತಿಯಾಗಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಸ್ತಾವಕ್ಕೂ ಕೈ ಪಡೆಯಿಂದ ಸಿದ್ಧತೆ ನಡೆಸಲಾಗಿದೆ. ಬಿಜೆಪಿ ಆಡಳಿತದ ಕಾಲದಲ್ಲಿ ಟ್ರಕ್ ಟರ್ಮಿನಲ್ ‌ನಿಗಮದಲ್ಲಿ‌ 200 ಕೋಟಿ ರೂ.ಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಮಾಜಿ ಎಂಎಲ್‌ಸಿ ಡಿ.ಎಸ್.ವೀರಯ್ಯ ಬಂಧನವಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ತಿರುಗೇಟು ಕೊಡುವ ಲೆಕ್ಕಾಚಾರ ಆರಂಭವಾಗಿದೆ. ಜತೆಗೆ ಈ ಹಗರಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರು ಉಲ್ಲೇಖ ಮಾಡುವ ಸಾಧ್ಯತೆಯಿದೆ. ಆ ಮೂಲಕ ಜೆಡಿಎಸ್, ಬಿಜೆಪಿ ಅಸ್ತ್ರಗಳಿಗೆ ಕಾಂಗ್ರೆಸ್‌ ಪ್ರತ್ಯಸ್ತ್ರಗಳನ್ನು ಸಿದ್ಧ ಮಾಡಿಕೊಂಡಿದೆ.

Exit mobile version