Site icon Vistara News

Assembly Session: ಚುಪ್‌ ಚುಪ್‌ ಕೇ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌!

assembly session zameer ahmed khan takes oath privately

#image_title

ಬೆಂಗಳೂರು: ಸಚಿವರಾಗಿ ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಇದೀಗ ಗೌಪ್ಯವಾಗಿ ಶಾಸಕರ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.

ಮೇ 20ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರತಿಜ್ಞಾ ವಿಧಿ ಹಾಗೂ ಗೌಪ್ಯತಾ ಪ್ರಮಾಣವಚನವನ್ನು ಸ್ವೀಕರಿಸುವ ಕಾರ್ಯಕ್ರಮವಿತ್ತು. ಸಿಎಂ, ಡಿಸಿಎಂ ಹಾಗೂ ಇತರೆ ಏಳು ಸಚಿವರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಜಮೀರ್‌ ಅಹ್ಮದ್‌ ಮಾತ್ರ ಇಂಗ್ಲಿಷ್‌ನಲ್ಲಿ ಸ್ವೀಕರಿಸಿದ್ದರು.

ಇದರ ಕುರಿತು ಕನ್ನಡ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ 18 ವರ್ಷದ ಹಿಂದೆ ಮೊದಲ ಬಾರಿಗೆ ಶಾಸಕರಾದಾಗಲೂ ಜಮೀರ್‌ ಅಹ್ಮದ್‌ ಅವರು ಹೀಗೆಯೇ ಇಂಗ್ಲಿಷ್‌ನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದರು. ಅಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಧಾನಸಭೆಯಲ್ಲಿ ಘೋಷಣೆ ಕೂಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಜಮೀರ್‌ ಕ್ಷಮೆ ಕೋರಿದ್ದರು. ಆಗ ಅವರು ಜೆಡಿಎಸ್‌ ಪಕ್ಷದಲ್ಲಿದ್ದರು.

ಇದೀಗ ಕಾಂಗ್ರೆಸ್‌ ಪಕ್ಷದಲ್ಲಿರುವ ಜಮೀರ್‌ ಅಹ್ಮದ್‌ ಖಾನ್‌ ಅವರು ಮತ್ತೆ ಇಂಗ್ಲಿಷ್‌ನಲ್ಲೆ ಪ್ರಮಾಣವಚನ ಸ್ವೀಕರಿಸಿದ್ದಾರೆ. 18 ವರ್ಷವಾದರೂ ಕನ್ನಡ ಕಲಿತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಿಸಲಾಗುತ್ತಿದೆ.

ಶಾಸಕರಾಗಿ ಪ್ರತಿಜ್ಞೆ ಸ್ವೀಕರಿಸಲು ಇದೀಗ ಮೂರು ದಿನಗಳ ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿದೆ. ಆದರೆ ಹಂಗಾಮಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಜ್ಞೆ ಸ್ವೀಕರಿಸಲು ಜಮೀರ್‌ ಅಹ್ಮದ್‌ ಸೋಮವಾರ ಗೈರಾಗಿದ್ದರು. ಆದರೆ ಮದ್ಯಾಹ್ನದ ವೇಳೆಗೆ ನೇರವಾಗಿ ಹಂಗಾಮಿ ಸಾಭಾಧ್ಯಕ್ಷರಾದ ಆರ್.‌ ವಿ. ದೇಶಪಾಂಡೆ ಅವರ ಕಚೇರಿಗೇ ತೆರಳಿ ಒಬ್ಬರೇ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಎಲ್ಲರ ಎದುರು ಮತ್ತೆ ಇಂಗ್ಲಿಷ್‌ನಲ್ಲೆ ಪ್ರಮಾಣವಚನ ಸ್ವೀಕರಿಸಿದರೆ ಮತ್ತೆ ವಿರೋಧ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಗುಪ್ತವಾಗಿ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Zameer Ahmed Khan: ಜಮೀರ್‌ ಇಂಗ್ಲಿಷ್‌ ಪ್ರಮಾಣ; ಕನ್ನಡ ಕಲಿಯದ ಬಗ್ಗೆ ಮುಂದುವರಿದ ಕನ್ನಡಿಗರ ಆಕ್ರೋಶ

Exit mobile version