ವಿಧಾನಸಭೆ: ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ (B.S. Yediyurappa) ಅವರು 15ನೇ ವಿಧಾನಸಭೆಯ ಕಡೆಯ ದಿನವೂ ಆದ ಶುಕ್ರವಾರ ತಮ್ಮ ವಿದಾಯದ ಭಾಷಣವನ್ನು ಮಾಡಿದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೆ ಘೊಷಣೆ ಮಾಡಿರುವ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಅನೇಕರನ್ನು ಸ್ಮರಿಸಿದರು,
ಸದನದ ಅತ್ಯಂತ ಹಿರಿಯ ಶಾಸಕರಾದವರು, 8 ಬಾರಿ ಗೆದ್ದು ಸದನದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರು ಬಿ.ಎಸ್. ಯಡಿಯೂರಪ್ಪ ಅವರು ನಮಗೆಲ್ಲ ಮಾರ್ಗದರ್ಶಕರು. ಅವರು ಮಾತನಾಡುತ್ತಾರೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
ನಂತರ ಎದ್ದುನಿಂತ ಯಡಿಯೂರಪ್ಪ, ಮೊದಲಿಗೆ ಕಾಗೇರಿಯವರಿಂದಲೇ ಭಾಷಣ ಆರಂಭಿಸಿದರು. ಕಾಗೇರಿಯವರು ಸದನವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿ ಎಂದರು. ಮಾತಿನ ಕೊನೆಯಲ್ಲೂ, ಸ್ಪೀಕರ್ ಕಾಗೇರಿ ಮತ್ತೊಮ್ಮೆ ಗೆದ್ದು ಬಂದು ಸಚಿವರಾಗಿ ಕೆಲಸ ಮಾಡಬೇಕು ಎಂದು ಆಶಿಸುತ್ತೇನೆ ಎಂದರು.
ಇದನ್ನೂ ಓದಿ: Assembly Session: ಇದು ಕೊನೆಯ ಸದನ; ಯಾರೂ ಮಿಸ್ ಮಾಡದೇ ಬನ್ನಿ: ಶಾಸಕರಿಗೆ ಮನವಿ ಮಾಡಿದ ಸ್ಪೀಕರ್ ಕಾಗೇರಿ
ಈ ಸದನಕ್ಕೆ ಹೆಚ್ಚಿನ ಮಹಿಳೆಯರು ಆಯ್ಕೆ ಆಗಿಬರಬೇಕು. ಇದಕ್ಕೆ ಪುರುಷ ಸದಸ್ಯರು ಅವಕಾಶ ಮಾಡಿಕೊಡಬೇಕು ಎಂದ ಯಡಿಯೂರಪ್ಪ, ರಾಜಕಾರಣಿಗಳಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆದರ್ಶ ಎಂದರು. ನಮಗೆಲ್ಲ ಆದರ್ಶ ಎಚ್.ಡಿ. ದೇವೇಗೌಡರು. ಈ ವಯಸ್ಸಿನಲ್ಲೂ ರಾಷ್ಟ್ರ, ರಾಜ್ಯದ ವಿಚಾರಗಳ ಕುರಿತು ಚಿಂತನೆ ಮಾಡುತ್ತಾರೆ ಎಂದರೆ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದರು.
ಸಿದ್ದರಾಮಯ್ಯನವರು ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ, ಎ.ಟಿ. ರಾಮಸ್ವಾಮಿ ಸಹ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ನೀವೆಲ್ಲರೂ ಆಯ್ಕೆಯಾಗಿ ಬಂದು ಇನ್ನೂ ಹೆಚ್ಚು ಕೆಲಸ ಮಾಡಲು ಆಶಿಸುತ್ತೇನೆ ಎಂದು ಹೇಳಿದರು.