Site icon Vistara News

Basavaraja Bommai : ಸಿದ್ದರಾಮಯ್ಯನವರೇ ಮೊದಲು ಶಾಮನೂರು ಪ್ರಶ್ನೆಗಳಿಗೆ ಉತ್ತರಿಸಿ ಎಂದ ಬೊಮ್ಮಾಯಿ

Siddaramaiah Shamanuru Basavaraja Bommai

ಹುಬ್ಬಳ್ಳಿ: ಲಿಂಗಾಯತ ಅಧಿಕಾರಿಗಳ ಕಡೆಗಣನೆ (Neglecting Lingayat officers) ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಎತ್ತಿರುವಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಉತ್ತರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಶ್ನೆಗಳಿಗೆ ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಾತಿಯ ಕರಿ ನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಆರಂಭದಿಂದಲೂ ಕಾಂಗ್ರೆಸ್‌ ಎಡವಟ್ಟು ಎಂದ ಬೊಮ್ಮಾಯಿ

ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ. ವರ್ಗಾವಣೆ ವಿಷಯದಲ್ಲಿ ಬಹಳಷ್ಟು ಅಸಮಾಧಾನಕ್ಕೆ ಈಡಾಗಿದೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುತ್ತೇವೆ ಅಂತ ಹೇಳಿದ್ದರು. ಆದರೆ ಅದು ಆಗಿಲ್ಲ‌. ಈಗ ಬೇರೆ ಬೇರೆ ರೂಪದಲ್ಲಿ ಹೊರಗೆ ಬರುತ್ತಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರು ಎತ್ತಿರುವಂತಹ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು. ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ
ಜಾತಿಯ ಕರಿ ನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ. ಮುಖ್ಯಮಂತ್ರಿಗಳು ಇದನ್ನು ಎಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತಾರೆ ಅಷ್ಟು ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಸಮಾಜ ಘಾತಕ ಶಕ್ತಿಗಳಿಗೆ ಪ್ರಚೋದನೆ

ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗುವುದಿಲ್ಲ. ಒಂದು ವರ್ಗವನ್ನು ಪೊಲೀಸರು ಮುಟ್ಟಬಾರದು ಅಂತ ಪರೋಕ್ಷವಾಗಿ ಸಂದೇಶ ರವಾನೆಯಾಗುತ್ತದೆ. ಸಮಾಜಘಾತಕ ಶಕ್ತಿಗಳಿಗೆ ಕಾನೂನು, ಪೋಲಿಸ್, ಸರ್ಕಾರದ ಭಯ ಇಲ್ಲ ಎಂದು ಬೊಮ್ಮಾಯಿ ಹೇಳಿದರು.

ʻಕೋಲಾರದಲ್ಲಿ ನಡೆದ ಘಟನೆಯನ್ನು ನೋಡಿದ ಮೇಲಾದರೂ ಶಿವಮೊಗ್ಗದಲ್ಲಿ ಪೂರ್ವ ಬಂದೋಬಸ್ತ್ ಮಾಡಬೇಕಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದೋಬಸ್ತ್ ಯಾಕೆ ಮಾಡಲಿಲ್ಲ? ಸರ್ಕಾರ ಬಂದ ನಂತರ ಸಮಾಜಘಾತಕ ಶಕ್ತಿಗಳಿಗೆ ಪ್ರಚೋದನೆ ಸಿಗುತ್ತಿದೆʼʼ ಎಂದು ಹೇಳಿದರು.

ರೈತರ ಪಾಲಿಗೆ ಈ ಸರ್ಕಾರ ಜೀವಂತವಾಗಿಲ್ಲ

ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಮಾತನಾಡಿದ ಅವರು, ಬರ ಪರಿಹಾರ ನಾವು ಸಮರ್ಥವಾಗಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಬರೀ ಹೇಳಿಕೆಯಲ್ಲಿ ಇವರ ಸರ್ಕಾರ ಆಡಳಿತ ನಡೆಯುತ್ತಿದೆ. ಬರಗಾಲವಾಗಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಬರಗಾಲಕ್ಕೆ ಇದುವರೆಗೂ ನಯಾ ಪೈಸೆ ಬಿಡುಗಡೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅನಗತ್ಯವಾಗಿ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ.‌ ರಾಜ್ಯ ಸರ್ಕಾರದ ಬಳಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು.

ಇದನ್ನೂ ಓದಿ: HD Kumaraswamy : 6ನೇ ಗ್ಯಾರಂಟಿಯಾಗಿ ಮದ್ಯಭಾಗ್ಯ; ಎಚ್.ಡಿ. ಕುಮಾರಸ್ವಾಮಿ ಕಿಡಿ

ಸಿಎಂ-ಡಿಸಿಎಂ ಮಧ್ಯೆ ಮದ್ಯದಂಗಡಿ ಗೊಂದಲ

ʻʻಪಂಚಾಯತಿಗೊಂದು ಮದ್ಯದ ಅಂಗಡಿ ತೆರೆಯುವುದನ್ನು ನಾವು ನಾವು ಮೊದಲೇ ವಿರೋಧ ಮಾಡಿದ್ದೇವೆ, ಜನ ಕೂಡ ವಿರೋಧ ಮಾಡಿದ್ದಾರೆ. ಗೃಹಲಕ್ಷ್ಮಿ ಅಂತ ದುಡ್ಡು ಕೊಟ್ಟು, ಅದರ ಎರಡು ಪಟ್ಟು ಆ ಸಂಸಾರದಿಂದ ಕಿತ್ತುಕೊಳ್ಳುವಂಥ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಅಬಕಾರಿ ನೀತಿಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಹೊಸ ಬಾರ್ ಲೈಸೆನ್ಸ್ ಕೊಡುವುದಿಲ್ಲ ಅಂತ ಹೇಳುತ್ತಾರೆ. ಉಪಮುಖ್ಯಮಂತ್ರಿಗಳು ಆಯಕಟ್ಟಿನ ಜಾಗದಲ್ಲಿ ಬಾರ್ ಮಾಡಬೇಕಾಗುತ್ತದೆ ಅಂತ ಹೇಳುತ್ತಾರೆ. ಇವರ ನಿರ್ಣಯ ಗೊಂದಲದ ಗೂಡಾಗಿದೆ. ಮುಖ್ಯಮಂತ್ರಿಗಳು ಮಾಡುವಂತಹ ಎಲ್ಲ ನಿರ್ಣಯಗಳಿಗೆ ಉಪಮುಖ್ಯಮಂತ್ರಿ ವಿರೋಧ ಮಾಡುತ್ತಿದ್ದಾರೆ. ಈ ಸರ್ಕಾರ ಜನರಿಗಂತೂ ಒಳ್ಳೆಯರು ಮಾಡುವುದಿಲ್ಲʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.

Exit mobile version