ಬೆಂಗಳೂರು: ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ನೀಡಿದ್ದ ಭರವಸೆಯನ್ನು ಬಿಜೆಪಿ ನಾಯಕರು ತಪ್ಪಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ ಸಭಾಪತಿ ಮಾಡದೇ ಮುಂದೂಡುತ್ತಿರುವುದರ ಕುರಿತು ಪಕ್ಷದ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಬಸವರಾಜ ಹೊರಟ್ಟಿ ಅವರು ಐದು ದಶಕಗಳಿಂದಲೂ ವಿಧಾನ ಪರಿಷತ್ ಸದಸ್ಯರು. ಇಷ್ಟು ವರ್ಷ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಹೊರಟ್ಟಿ, ಈ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದರು.
ಪಕ್ಷಕ್ಕೆ ಸೇರ್ಪಡೆ ಆಗುವ ಮುನ್ನ ಗೃಹ ಸಚಿವ ಅಮಿತ್ ಷಾ ಮುಂತಾದವರನ್ನು ಭೇಟಿ ಮಾಡಿದ್ದರು. ಹೊರಟ್ಟಿ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯ ಹೊಂದಿರುವವರು. ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ ಒಂದು ಸ್ಥಾನ ಹೆಚ್ಚಾಗುತ್ತದೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತಷ್ಟು ಶಕ್ತಿ ಹೆಚ್ಚುತ್ತದೆ ಎಂಬ ಲೆಕ್ಕಾಚಾರವಿತ್ತು. ಆದರೆ ಇಷ್ಟು ದಿನವಾದರೂ ಸಭಾಪತಿ ಮಾಡುವ ಕುರಿತು ಪಕ್ಷ ಯಾವುದೇ ನಿರ್ಧಾರ ಮಾಡಿಲ್ಲ.
ಹೊರಟ್ಟಿ ಅವರಿಗೆ ನೀಡಿದ ಮಾತನ್ನು ಬಿಜೆಪಿ ನಾಯಕರು ತಪ್ಪುತ್ತಿದ್ದಾರೆಯೇ ಎಂಬ ಮಾತುಗಳು ಆ ಪಕ್ಷದಲ್ಲಿಯೇ ಕೇಳಿಬರುತ್ತಿವೆ. ಒಮ್ಮೆ ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೇರೆಯವರು ಆಗಮಿಸಲು ಹಿಂಜರಿಯುತ್ತಾರೆ ಎಂಬ ಮಾತುಗಳೂ ಇವೆ.
ಈ ಕುರಿತು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಹೊರಟ್ಟಿ, ಬಿಜೆಪಿಯ ಎಲ್ಲ ನಾಯಕರು ಪಕ್ಷಕ್ಕೆ ಬರುವಂತೆ ಕರೆದರು. ಅಮಿತ್ ಶಾ ಭೇಟಿ ಮಾಡುವ ಮೊದಲೂ ಕೇಳಿದ್ದರು. ಪರಿಷತ್ ಸದಸ್ಯನಾಗಲು ನಾನೇಕೆ ಬಿಜೆಪಿಗೆ ಬರಬೇಕು ಎಂದು ಹೇಳಿದ್ದೆ. ಸಭಾಪತಿ ಮಾಡಿಡಿದರೆ ಬರುತ್ತೇನೆ ಎಂಬ ಮಾತಿನ ಮೇಲೆ ಬಂದೆ. ನಿಮ್ಮನ್ನೇ ಸಭಾಪತಿ ಮಾಡುತ್ತೇವೆ ಬನ್ನಿ ಎಂದು ಕರೆದರು ಎಂದಿದ್ದಾರೆ.
ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿ ನನ್ನ ಹೆಸರು ಅಂತಿಮ ಮಾಡಿದ್ದಾರೆ. ಬಿಜೆಪಿಯವರು ನುಡಿದಂತೆ ನಡೆಯುತ್ತಾರೆ ಎಂದ ಹೊರಟ್ಟಿ, ರಘುನಾಥರಾವ್ ಮಲಕಾಪೂರೆ ಅವರನ್ನು ಮುಂದೆವರಿಸಲು ಕುರುಬ ಸಮುದಾಯದ ಸದಸ್ಯರು ಒತ್ತಾಯ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಗಮನ ಹರಿಸುತ್ತಾರೆ. ಅವರ ಸಮುದಾಯದವರು ಕೇಳುವುದರಲ್ಲಿ ತಪ್ಪಿಲ್ಲ. ನಾನು ಯಾವ ಜಾತಿ ಅಂತ ಹಲವು ವರ್ಷಗಳ ಕಾಲ ಜನರಿಗೆ ಗೊತ್ತೇ ಇರಲಿಲ್ಲ. ನಾನು ಜಾತಿ ರಾಜಕಾರಣ ಮಾಡಿಲ್ಲ. ನಾವು ಮಾತು ಕೊಟ್ಟಿದ್ದೀವಿ, ಅವರನ್ನು ಸಭಾಪತಿ ಮಾಡಬೇಕು ಎಂದು ಯಡಿಯೂರಪ್ಪ ಅವರೂ ಹೇಳಿದ್ದಾರೆ. ಅವನು ಎಲ್ಲಿ ಇದ್ದರೂ ಗೆಲ್ಲುತ್ತಿದ್ದ, ತಡ ಮಾಡಬೇಡಿ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ನೇರವಾಗಿ ಹೇಳಿದ್ದಾರೆ. ಹಾಗಾಗಿ ಕೋರ್ ಕಮಿಟಿ ಸಭೆಯಲ್ಲಿ ಹೆಸರು ಫೈನಲ್ ಆಗಿದೆ. ಕಮಿಟಿ ನಿರ್ಧಾರ ಬದಲಾವಣೆ ಆಗುವುದು ಸಾಧ್ಯವಿಲ್ಲ ಎಂದರು.
ಇಷ್ಟೆಲ್ಲದರ ನಂತರವೂ ಒಂದು ವೇಳೆ ಆಗದಿದ್ದರೂ ನನಗೆ ಬೇಸರವಿಲ್ಲ. ಪಕ್ಷದ ಸಿದ್ದಾಂತದ ಮೇಲೆ ಕೆಲಸ ಮಾಡುತ್ತೇನೆ. ರಾಜಕಾರಣದಲ್ಲಿ ಇವೆಲ್ಲಾ ಸಾಮಾನ್ಯ ಎಂದಿದ್ದಾರೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಬಸವರಾಜ ಹೊರಟ್ಟಿಯವರ ಮುಂದಿನ ನಡೆ?