Site icon Vistara News

BBMP Fire accident: BBMP ಬೆಂಕಿ ಪ್ರಕರಣದಲ್ಲಿ ಬಿಜೆಪಿ ಕೈವಾಡ ನಿರಾಕರಿಸಿದ ಡಿ.ಕೆ.ಶಿ; ಕಾಂಗ್ರೆಸ್‌ ಟ್ವೀಟ್‌ DELETE

Congress tweet delete

ಬೆಂಗಳೂರು: ಬಿಬಿಎಂಪಿಯ ಕ್ವಾಲಿಟಿ ಕಂಟ್ರೋಲ್ ಲ್ಯಾಬ್‌ನಲ್ಲಿ (BBMP Quality Control lab) ನಡೆದ ಅಗ್ನಿ ಅವಘಡಕ್ಕೆ (BBMP Fire accident) ಬಿಜೆಪಿ ಷಡ್ಯಂತ್ರ ಮಾಡಿದೆ, ಅವರ ಹೆಡೆಮುರಿ ಕಟ್ಟುತ್ತೇವೆ ಎಂಬ ಕಾಂಗ್ರೆಸ್‌ ಪಕ್ಷದ ಟ್ವೀಟ್‌ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar objects tweet) ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಸೂಚನೆಯ ಮೇರೆಗೆ ಟ್ವೀಟನ್ನು ಡಿಲಿಟ್‌ (Congress deletes tweet) ಮಾಡಲಾಗಿದೆ.

ಶುಕ್ರವಾರ ಸಂಜೆ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವಿಟರ್‌ನಲ್ಲಿ ಇದು ಬಿಜೆಪಿಯ ಕೃತ್ಯ ಎಂದು ಆರೋಪಿಸಿ ಟ್ವೀಟ್‌ ಮಾಡಲಾಗಿತ್ತು. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಬಿಜೆಪಿ ಮೇಲೆ ಅನುಮಾನ ವ್ಯಕ್ತಪಡಿಸಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಆದರೆ, ಶನಿವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು ಇದು ಒಂದು ತಪ್ಪು ಟ್ವೀಟ್‌, ಹುಡುಗರು ಯಾರೋ ಹಾಕಿದ್ದಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಹಿಂಪಡೆದಿದ್ದೇನೆ ಎಂದು ಹೇಳಿದರು. ಬಳಿಕ ಕಾಂಗ್ರೆಸ್‌ ಖಾತೆಯಿಂದ ಈ ಟ್ವೀಟನ್ನು ಡಿಲೀಡ್‌ ಮಾಡಲಾಯಿತು.

ಬಿಬಿಎಂಪಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ತಾನು ಮಾಡಿದ ಟ್ವೀಟನ್ನು ಡಿಲಿಟ್‌ ಮಾಡಿದೆ.

ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಎರಡೂ ರಾಜಕೀಯ ಪಕ್ಷಗಳು ಕೆಸರೆರಚಾಟಕ್ಕೆ ತೊಡಗಿದವು. ಬೆಂಗಳೂರಿನ ಎಲ್ಲ ಕಾಮಗಾರಿಗಳ ಪರಿಶೀಲನೆ ಮತ್ತು ತನಿಖೆ ನಡೆಸಿದ ಬಳಿಕವಷ್ಟೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಇದೀಗ ಗುಣಮಟ್ಟ ಪರೀಕ್ಷೆ ನಡೆಸುವ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ದಾಖಲೆ ನಾಶದ ಪ್ರಯತ್ನ ಎಂಬ ಅವಸರದ ತೀರ್ಮಾನಕ್ಕೆ ಕಾಂಗ್ರೆಸ್‌ನ ಸೋಷಿಯಲ್‌ ಮೀಡಿಯಾ ಸೆಲ್‌ ಬಂದಿತ್ತು. ಇದಕ್ಕೆ ಪ್ರತಿಯಾಗಿ ಇದು ಕಾಂಗ್ರೆಸ್‌ನದೇ ಕೃತ್ಯ ಎಂದು ಬಿಜೆಪಿ ಕೂಡಾ ಆರೋಪಿಸಿತ್ತು.

ಆದರೆ ನಿಜವೆಂದರೆ, ಈ ಲ್ಯಾಬ್‌ನಲ್ಲಿ ನಾಶವಾಗಬಹುದಾದ ದಾಖಲೆಗಳ್ಯಾವುವೂ ಇರಲಿಲ್ಲ. ಇರುವ ದಾಖಲೆಗಳೆಲ್ಲವೂ ಕಂಪ್ಯೂಟರ್‌ ನೆಟ್ವರ್ಕ್‌ನಲ್ಲಿ ಭದ್ರವಾಗಿದ್ದವು. ಇದೆಲ್ಲವನ್ನೂ ಗಮನಿಸಿದ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ನ ಅಧಿಕೃತ ಟ್ವೀಟನ್ನೇ ಹಿಂದೆ ಪಡೆಯಲು ತೀರ್ಮಾನಿಸಿದರು.

ʻʻಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿರಬಹುದು, ಅದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಅದನ್ನ ವಿತ್ ಡ್ರಾ ಮಾಡಿದ್ದೇನೆ. ಘಟನೆ ಬಗ್ಗೆ ಈಗಾಗಲೇ ತನಿಖೆ ನಡೆಸೋಕೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆ, ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಮೂಲಕವೂ ತನಿಖೆ ಮಾಡಿ ಅಂತ ಹೇಳಿದ್ದೇನೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಕ್ವಾಲಿಟಿ ಕಂಟ್ರೋಲ್‌ ವಿಭಾಗದ ಜಾಗ ಸರಿ ಇಲ್ಲ ಎಂದ ಡಿ.ಕೆ.ಶಿವಕುಮಾರ್‌

ಶುಕ್ರವಾರ ರಾತ್ರಿಯೇ ಬೆಂಕಿ ಬಿದ್ದ ಜಾಗದಲ್ಲಿ ಹೋಗಿ ಪರಿಶೀಲನೆ ನಡೆಸಿದ್ದ ಶಿವಕುಮಾರ್‌ ಅವರು, ʻʻಕ್ವಾಲಿಟಿ ಕಂಟ್ರೋಲ್ ವಿಭಾಗವನ್ನು ಮಾಡಿರುವ ಜಾಗ ಸರಿ ಇಲ್ಲ. ಇಲ್ಲಿ ನಿರ್ಮಿಸಿದ್ದೇ ತಪ್ಪು. ಇದೆಲ್ಲಾ ದೂರದಲ್ಲಿ ಓಪನ್ ಸ್ಪೇಸ್ ನಲ್ಲಿ ಇರಬೇಕಾದದ್ದುʼʼ ಎಂದರು.

ಈ ಹಿಂದೆಯೂ ಫೈಲ್‌ ನಾಪತ್ತೆ, ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ ಎಂದ ಅವರು, ಅಲ್ಲೇ ಪಕ್ಕದಲ್ಲಿ ಕೆಲವು ದಾಖಲೆಗಳು ಇದ್ದವು. ಅದೃಷ್ಟವಶಾತ್ ದಾಖಲೆಗಳಿಗೆ ಏನೂ ಆಗಿಲ್ಲ. ಎಲ್ಲಾ ದಾಖಲೆಗಳಿಗೆ ಬೇರೆ ಏರ್ಪಾಟು ಮಾಡಿದ್ದೇವೆ ಎಂದರು.

ಇದನ್ನೂ ಓದಿ: BBMP Fire Accident : ಬಿಬಿಎಂಪಿ ಅಗ್ನಿ ದುರಂತ ನಿಜಕ್ಕೂ ಸಂಭವಿಸಿದ್ದು ಹೇಗೆ? ಹಾಗಿದ್ರೆ ಪರೀಕ್ಷೆ ನಡೆಸೋದು ತಜ್ಞರಲ್ವ?

ಕೆಣಕಲು ಬರ್ತಾ ಇದ್ದಾರೆ, ಬರ್ಲಿ!

ಆರ್‌. ಆಶೋಕ್‌ ಅವರು ಮಾಡಿರುವ ಕಿಕ್‌ ಬ್ಯಾಕ್‌ ಆರೋಪಗಳಿಗೆ ಉತ್ತರ ನೀಡಿದ ಡಿ.ಕೆ. ಶಿವಕುಮಾರ್‌ ಅವರು, ʻʻಅಶೋಕನ ಕಿಕ್ ಬ್ಯಾಕ್, ಬೇರೆ ಬೇರೆ ಕಿಕ್ ಬ್ಯಾಕ್ ಯಾರ್ಯಾರ್ ಕಿಕ್ ಬ್ಯಾಕು ಅನ್ನೋದು ಟೈಮ್ ಇದೆ. ಎಲ್ಲರೂ ಕೆಣಕೋಕೆ ಬರ್ತಾ ಇದ್ದಾರೆ. ಹಾಗಿದ್ದರೆ ಅವರು ಕಣ್ಣು ಮುಚ್ಚಿಕೊಂಡು ಮೂರು ವರ್ಷ ಸರಕಾರ ನಡೆಸಿದ್ರಾ? ನಮಗೆ ಎಲ್ಲವೂ ಗೊತ್ತಿದೆ, ನಾವ್ಯಾರೂ ಕಣ್ಣು ಮುಚ್ಚಿಕೊಂಡಿರಲಿಲ್ಲ. ನಾನು ಈಗ ಮಾತನಾಡಲ್ಲ ದಾಖಲೆ ಸಹಿತ ಮಾತನಾಡುತ್ತೇನೆʼʼ ಎಂದು ಹೇಳಿದರು.

Exit mobile version