ಬಳ್ಳಾರಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸಂಘಟನಾತ್ಮಕವಾಗಿ ಬೆವರು ಸುರಿಸುತ್ತ, ನಡೆಯಲಾಗದಿದ್ದರೂ ಕಷ್ಟ ಪಟ್ಟು ನಡೆಯುತ್ತಿರುವವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಆದರೆ ಯಾತ್ರೆ 1,000 ಕಿಲೋಮೀಟರ್ ಸಾಗಿದ ಸಂದರ್ಭದಲ್ಲಿ ಶನಿವಾರ ಬಳ್ಳಾರಿಯಲ್ಲಿ ನಡೆದ ರ‍್ಯಾಲಿಯಲ್ಲಿ ಫುಲ್ ಮೈಲೇಜ್ ಪಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.
ಭಾರತ್ ಜೋಡೋ ಯಾತ್ರೆಯ ಸಲುವಾಗಿ ಡಿ.ಕೆ. ಶಿವಕುಮಾರ್, ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿದ್ದಾರೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಯಾತ್ರೆಯ ಕುರಿತು ತಿಳಿ ಹೇಳುತ್ತಿದ್ದಾರೆ.
ಇದಕ್ಕಾಗಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿ ಎಲ್ಲ ಘಟಕಗಳನ್ನೂ ಸಂಘಟಿಸಿ ಎಲ್ಲರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ. ಕರ್ನಾಟಕಕ್ಕೆ ರ‍್ಯಾಲಿ ಪ್ರವೇಶ ಮಾಡುವುದಕ್ಕೂ ಮುನ್ನವೇ ಕೇರಳಕ್ಕೂ ತೆರಳಿ ಭಾಗವಹಿಸಿ ಬಂದಿದ್ದವರು ಡಿ.ಕೆ. ಶಿವಕುಮಾರ್.
ಇಡೀ ಯಾತ್ರೆಯಲ್ಲಿ ಅಲ್ಲಲ್ಲಿ ಕಾರ್ನರ್ ಮೀಟಿಂಗ್, ಸಂವಾದ ನಡೆಸಲಾಗಿದೆಯಾದರೂ ಬೃಹತ್ ರ‍್ಯಾಲಿ ಎಂದು ಆಯೋಜನೆ ಮಾಡಿದ್ದು ಬಳ್ಳಾರಿ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿಯೇ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಡಿ.ಕೆ. ಶಿವಕುಮಾರ್, ಯಾರ‍್ಯಾರು ಎಂಎಲ್‌ಎ ಆಗಬೇಕು ಎಂದುಕೊಂಡಿದ್ದೀರೊ, ಬಳ್ಳಾರಿಯ ರಸ್ತೆಗಳಲ್ಲಿ ನನ್ನ ಫೋಟೊ, ರಾಹುಲ್ ಗಾಂಧಿಯವರ ಫೋಟೊ, ಸಿದ್ದರಾಮಯ್ಯ ಫೋಟೊ ಹಾಕುವುದು ಬೇಡ. ನಮ್ಮನ್ನು ಜನ ನೋಡಿದ್ದಾರೆ. ಇಡೀ ರಸ್ತೆಯಲ್ಲಿ ನಿಮ್ಮ ಫೋಟೊ ಹಾಕಿಕೊಂಡು ನಿಮ್ಮ ಶಕ್ತಿ ಪ್ರದರ್ಶನ ಮಾಡಿ. ನೀವು ಕೆಲಸ ಮಾಡಿದ್ದೀರಿ ಎಂದು ನಿಮ್ಮನ್ನು ಜನರು ಗುರುತಿಸಲಿ ಎಂದಿದ್ದರು. ಆದರೆ ಅಕ್ಟೋಬರ್ 15ರ ಬಳ್ಳಾರಿ ರ‍್ಯಾಲಿಯಲ್ಲಿ ಆಗಿದ್ದೇ ಬೇರೆ.
ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ
ಕಾರ್ಯಕ್ರಮದಲ್ಲಿ ಇತರೆ ನಾಯಕರು ಮಾತನಾಡಿದ ನಂತರ ಮೊದಲಿಗೆ ಡಿ.ಕೆ. ಶಿವಕುಮಾರ್ ಮಾತನಾಡಲು ಆಗಮಿಸಿದರು. ಶಿವಕುಮಾರ್ ಹೆಸರನ್ನು ರಣದೀಪ್‌ಸಿಂಗ್ ಸುರ್ಜೆವಾಲ ಕರೆಯುತ್ತಿದ್ದಂತೆಯೇ ಸಂತಸಗೊಂಡ ರಾಹುಲ್ ಗಾಂಧಿ, ಬೆನ್ನು ತಟ್ಟಿ ಶುಭ ಹಾರೈಸಿ ಕಳಿಸಿದರು.
ಮಾತು ಆರಂಭಕ್ಕೂ ಮುನ್ನ ʼಜೋಡೋ ಜೋಡೋ…ʼ ಎಂದು ಶಿವಕುಮಾರ್ ಘೋಷಣೆ ಹಾಕಿದರು. ಕೆಲವರನ್ನು ಬಿಟ್ಟರೆ ಹೆಚ್ಚಿನ ಪ್ರತಿಕ್ರಿಯೆ ಬರಲಿಲ್ಲ. ನಾವು ಕೂಗುವ ಘೋಷಣೆಯ ಶಬ್ದ, ಈ ರ‍್ಯಾಲಿ ಅಂತಿಮವಾಗಿ ಹೋಗಿ ಮುಟ್ಟುವ ಕಾಶ್ಮೀರದವರೆಗೆ ಕೇಳಬೇಕು ಎಂದು ಮತ್ತೆ ಘೋಷಣೆ ಹಾಕಿಸಿದರು. ಆಗಲೂ ಹೇಳಿಕೊಳ್ಳುವಂತಹ ಹೆಚ್ಚಳ ಆಗಲಿಲ್ಲ.
ಶಿವಕುಮಾರ್ ನಂತರದಲ್ಲಿ ಮಾತನಾಡಲು ಆಗಮಿಸುವಂತೆ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲಾಯಿತು. ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆಯೇ ಶಿಳ್ಳೆ, ಚಪ್ಪಾಳೆ, ಘೋಷಣೆಗಳು ಮುಗಿಲುಮುಟ್ಟಿದವು. ಕೂಲಿಂಗ್ ಗ್ಲಾಸ್ ಧರಿಸಿ ಸ್ಟೈಲಿಷ್ ಆಗಿಯೇ ಮೈಕ್ ಬಳಿ ಆಗಮಿಸಿದ ಸಿದ್ದರಾಮಯ್ಯ ಕೈ ಬೀಸಿ, ಸುಮ್ಮನಿರುವಂತೆ ಹೇಳಿದರು. ಆದರೆ ಮತ್ತಷ್ಟು ಶಬ್ದ ಏರಿಕೆ ಆಯಿತೇ ಹೊರತು ಕಡಿಮೆಯಾಗಲಿಲ್ಲ.
ವೇದಿಕೆಯ ಮೇಲಿದ್ದ ನಾಯಕರ ಕಡೆ ತಿರುಗಿದ ಸಿದ್ದರಾಮಯ್ಯ, ಏನಿದು ಇವರೆಲ್ಲ ಹೀಗೆ ಮಾಡ್ತಾರೆ ನೋಡಿ ಎನ್ನುವಂತೆ ನಗುಮೊಗದಿಂದ ಕೈತೋರಿದರು. ಆದರೆ, “ನೋಡಿ ನನ್ನ ಫ್ಯಾನ್ ಫಾಲೋಯಿಂಗ್ ಹೇಗಿದೆ” ಎಂದು ಹೈಕಮಾಂಡ್‌ಗೆ ಸೂಚಿಸಿದಂತಿತ್ತು ಅವರ ಹಾವಭಾವ. ಕೆಲಕಾಲ ಹೀಗೆಯೇ ನಡೆದು ಕೊನೆಗೆ ತಣ್ಣಗಾಯಿತು. ಇಷ್ಟೇ ಅಬ್ಬರದಿಂದ ಸಿದ್ದರಾಮಯ್ಯ ಭಾಷಣವನ್ನೂ ಮಾಡಿ ಮುಗಿಸಿದರು.
ಸಿದ್ದರಾಮಯ್ಯ ಮಾತನಾಡುವುದನ್ನು ರಾಹುಲ್ ಗಾಂಧಿ ಸಹ ತದೇಕಚಿತ್ತದಿಂದ ಆಲಿಸಿದರು. ಏನು ಹೇಳುತ್ತಿದ್ದಾರೆ ಎನ್ನುವುದನ್ನು ಶಿವಕುಮಾರ್ ಅವರಿಂದ ಕೇಳಿ ತಿಳಿದುಕೊಂಡರು. ಭಾಷಣ ಮುಗಿಸಿ ಬಂದ ಸಿದ್ದರಾಮಯ್ಯ ಅವರ ಕೈಕುಲುಕಿ ಶುಭಾಶಯ ಕೋರಿದರು.
ಸಿದ್ದರಾಮಯ್ಯ ನಂತರ ಆಗಮಿಸಿದ ರಾಹುಲ್ ಗಾಂಧಿ ಅವರ ಭಾಷಣಕ್ಕೂ ಹೆಚ್ಚಿನ ಸ್ಪಂದನೆ ಇರಲಿಲ್ಲ. ರಾಹುಲ್ ಗಾಂಧಿಯವರು ಭಾಷಣ ಪ್ರಾಂಭಿಸುವಾಗ ಸಿದ್ದರಾಮಯ್ಯ ಹೆಸರನ್ನು ಹೇಳುತ್ತಿದ್ದಂತೆಯೇ ಮತ್ತೆ ಘೋಷಣೆಗಳು ಕೇಳಿಬಂದವು.
ಸಂಘಟನೆಯನ್ನೇ ಪ್ರಮುಖವಾಗಿಸಿ ಯಾತ್ರೆ ನಡೆಸಬೇಕೆಂದು ಶಿವಕುಮಾರ್ ಪ್ರಯತ್ನ ನಡೆಸಿದ್ದಾರೆ. ಆದರೆ ಜಾತಿ, ಸಮುದಾಯ ಸೇರಿ ಅನೇಕ ಕಾರಣಗಳಿಂದಾಗಿ ಮಾಸ್ ಬೇಸ್ ಹೊಂದಿರುವ ಸಿದ್ದರಾಮಯ್ಯ ಇಡೀ ಸಮಾರಂಭವನ್ನು ಸಲೀಸಾಗಿ ತಮ್ಮದಾಗಿಸಿಕೊಂಡರು. ಭಾಷಣಕ್ಕೆ ತೆರಳುವ ಮುನ್ನ ರಾಹುಲ್ ಗಾಂಧಿಯವರು ಬೆನ್ನು ತಟ್ಟಿದ್ದೇ ಶಿವಕುಮಾರ್ ಅವರಿಗೆ ಉಳಿದಿತ್ತು.
ಇದನ್ನೂ ಓದಿ | ನನಗೆ, ಸಿದ್ದರಾಮಯ್ಯಗೆ ಜಯಕಾರ ಬೇಡ; ದೇಶಕ್ಕೆ ಜೈ ಎನ್ನಿ: ಭಾರತ್ ಜೋಡೊ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ