ಮಂಡ್ಯ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಭಾರಿ ಸಿದ್ಧತೆಯಲ್ಲಿ ತೊಡಗಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ. ಇದೇ ವೇಳೆ ಪ್ರತಿ ಜಿಲ್ಲೆಯಲ್ಲಿಯೂ ಪಕ್ಷ ಬಲವರ್ಧನೆಗೆ ಮುಂದಾಗಲಾಗಿದೆ. ಅಲ್ಲದೆ, ಈಗ ಬಿಜೆಪಿ ಜತೆ ಜೆಡಿಎಸ್ ಮೈತ್ರಿ (BJP JDS Alliance) ಮಾಡಿಕೊಂಡಿರುವುದರಿಂದ ಮತ್ತಷ್ಟು ಹುರುಪಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಈಗ ಮೈತ್ರಿ ಸೀಟು ಹಂಚಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಇದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವೂ (Mandya Lok Sabha constituency) ಒಂದಾಗಿದೆ. ಇಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ, ಹಾಲಿ ಸಂಸದರಾಗಿ ಸುಮಲತಾ ಅಂಬರೀಷ್ (Sumalatha Ambareesh) ಇದ್ದಾರೆ. ಅವರು ಈ ಬಾರಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಅಲ್ಲದೆ, ಜೆಡಿಎಸ್ ಸಹ ಬೇಡಿಕೆ ಇಟ್ಟಿದೆ. ಈ ನಡುವೆ ಬಿಜೆಪಿಯಿಂದಲೂ ಮೂವರು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಕುತೂಹಲವನ್ನು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕರಾದ ಪ್ರೀತಂ ಗೌಡ (Preetham Gowda), ಇನ್ನೂ ಕ್ಷೇತ್ರ ಹಂಚಿಕೆಯಾಗಿಲ್ಲ. ಯಾರಿಗೆ ಟಿಕೆಟ್ ಅಂತ ನಿರ್ಧಾರವೂ ಆಗಿಲ್ಲ ಎಂದು ಹೇಳಿದ್ದಾರೆ.
ಪಾಂಡವಪುರದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಭಾನುವಾರ ನಡೆಸಲಾಗಿದೆ. ಮಾಜಿ ಶಾಸಕರಾದ ಪ್ರೀತಂ ಗೌಡ, ರಾಮದಾಸ್, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ಸ್ಥಳೀಯ ನಾಯಕ ಸಿದ್ದರಾಮಯ್ಯ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ಲೋಕಸಭೆಯಲ್ಲಿ ಪಕ್ಷದ ಕಾರ್ಯಚಟುವಟಿಕೆ ಹೇಗಿರಬೇಕು? ಒಂದು ವೇಳೆ ಬಿಜೆಪಿಗೆ ಟಿಕೆಟ್ ಸಿಕ್ಕರೆ ಯಾರಿಗೆ ಟಿಕೆಟ್ ನೀಡಬೇಕು? ಯಾರು ಯಾರು ಆಕಾಂಕ್ಷಿಗಳಿದ್ದಾರೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಸಂಕಲ್ಪವಾಗಿದೆ. ಜಾತ್ಯತೀತ ಜನತಾದಳಕ್ಕೆ ಸಹ ಮೋದಿ ಪ್ರಧಾನಿಯಾಗಬೇಕು ಎಂಬ ಬುದ್ಧಿ ಬಂದಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಕೆಲವೇ ವರ್ಷಗಳ ಹಿಂದೆ ದೇಶದಲ್ಲಿ ಕುಟುಂಬ ರಾಜಕಾರಣ ಇತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ಕುಟುಂಬದವರು ಆಳುತ್ತಿದ್ದರು. ಈ ಕ್ಷಣದವರೆಗೂ ಕ್ಷೇತ್ರಗಳ ಹಂಚಿಕೆಯಾಗಿಲ್ಲ. ಜೆಡಿಎಸ್ ಈಗ ಎನ್‌ಡಿಎಗೆ ಬೆಂಬಲ ಕೊಟ್ಟಿದೆ. ಹಾಗಾಗಿ ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಕುರಿತು ಹಂಚಿಕೆಯಾಗಿಲ್ಲ. ಇಂಥವರಿಗೆ ಎಂದು ನಿಗದಿಯಾಗಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯಾದರೂ ಆಗಬಹುದು. ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಹಾಗೊಂದು ವೇಳೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಂದರ್ಭ ಬಂದರೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಅವರ ಬಳಿಯೇ ಕೇಳಿ ನಿರ್ಧಾರ ಮಾಡಲಾಗುವುದು. ಈಗ ಹೊಂದಾಣಿಕೆಯಾಗಿ ಬಿಟ್ಟಿದೆ. ಹೀಗಾಗಿ ನಾವು ಏನು ಮಾಡೋದು ಎಂಬ ಬಗ್ಗೆ ಕಾರ್ಯಕರ್ತರು ಚಿಂತೆಗೊಳಗಾಗಬಾರದು ಎಂದು ಪ್ರೀತಂ ಗೌಡ ಕಿವಿ ಮಾತು ಹೇಳಿದ್ದಾರೆ.
ಜೆಡಿಎಸ್ ಎನ್‌ಡಿಎಗೆ ಬೆಂಬಲ ಕೊಟ್ಟಿದೆ. ಆದರೆ, ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಸೀಟು ಇನ್ನೂ ಹಂಚಿಕೆಯಾಗಿಲ್ಲ. ಮೈತ್ರಿಯ ಮೂಲ ಉದ್ದೇಶವೇ ಗೆಲುವು. ಹಾಗಾಗಿಯೇ ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸುಮಲತಾ ಅಂಬರೀಷ್ ಅವರು ಎನ್‌ಡಿಎ ಅನ್ನು ಬೆಂಬಲಿಸಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೆ, ಮಾಜಿ ಸಚಿವ ನಾರಾಯಣಗೌಡ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸರ್ವೆ ಮಾಡಿ ಜನರ ಅಭಿಪ್ರಾಯದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರೀತಂ ಗೌಡ ಹೇಳಿದರು.
ವೈಯಕ್ತಿಕವಾಗಿ ನನಗೆ ಲೋಕಸಭಾ ಚುನಾವಣೆಗೆ ಹೋಗಲು ಇಷ್ಟವಿಲ್ಲ. ನಮ್ಮ ಉದ್ದೇಶವಿರುವುದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು. ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಪ್ರೀತಂ ಗೌಡ ಹೇಳಿದರು.
ಮಂಡ್ಯದ ಕೆರಗೋಡು ಹನುಮಧ್ವಜ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬರುತ್ತಿದ್ದಂತೆ ನಿರ್ಗಮಿಸಿದ್ದು ಏಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರೀತಂ ಗೌಡ, ನಾನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಹಾಗಾಗಿ ಪಾದಯಾತ್ರೆಯಿಂದ ವೇದಿಕೆವರೆಗೆ ಬಂದೆ. ಯಾರೋ ಒಬ್ಬರು ಬಂದರು ಅಂತ ನಾನು ಅಲ್ಲಿಂದ ಹೋದೆ ಅನ್ನೋದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: Chelavara Falls: ಚೇಲವಾರ ಫಾಲ್ಸ್‌ನಲ್ಲಿ ಮುಳುಗಿ ಕೇರಳ ಯುವಕ ಸಾವು
ಮಂಡ್ಯದಲ್ಲೇ ಸ್ಪರ್ಧೆ ಮಾಡೋದಾಗಿ ಹೇಳಿರುವ ಸುಮಲತಾ: ನಾರಾಯಣ ಗೌಡ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡ, ಸುಮಲತಾ ಅಂಬರೀಷ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಲೋಕಸಭಾ ಚುನಾವಣೆ ಸಂಬಂಧ ಅಭ್ಯರ್ಥಿಯಾಗುವ ವಿಚಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದೆವು. ಅವರು ನಾನು ಮಂಡ್ಯದಲ್ಲೇ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಇನ್ನು ಜೆಡಿಎಸ್‌ನವರು ಮಂಡ್ಯ ಕ್ಷೇತ್ರವನ್ನು ಕೇಳುತ್ತಿದ್ದಾರೆ. ಅವರು ಮಂಡ್ಯವನ್ನು ನಮಗೆ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ಒಂದು ವೇಳೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಾದರೆ ನಾವು ಹೈಕಮಾಂಡ್ ಜತೆಗೆ ಮಾತನಾಡುತ್ತೇವೆ ಎಂದು ಹೇಳಿದರು.