Site icon Vistara News

ಸಂತೋಷ್‌ ಆತ್ಮಹತ್ಯೆ: ಎಲೆಕ್ಷನ್‌ ವರ್ಷದಲ್ಲಿ BJPಗೆ ಟೆನ್ಷನ್‌, “ಕೈ”ಗೆ ಅಸ್ತ್ರ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ 150+ ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಬಿಜೆಪಿ (BJP) ಅಭಿಯಾನ ಆರಂಭಿಸುವ ಹೊಸ್ತಿಲಲ್ಲಿ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ( Santosh Suicide) ಪ್ರಕರಣ ಎದುರಾಗಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನೇಕ ರ‍್ಯಾಲಿಗಳಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ಸರ್ಕಾರವನ್ನು ಸೀಧಾರುಪಯ್ಯ ಸರ್ಕಾರ ಎಂದಿದ್ದ ಪ್ರಧಾನಿ, ಇಲ್ಲಿ ಎಲ್ಲ ಯೋಜನೆಗಳಿಗೂ 10% ಕಮಿಷನ್‌ ಲಂಚ ನಡೆಯುತ್ತಿದೆ ಎಂದು ಹೇಳಿದ್ದರು. ಇದು ಚುನಾವಣೆಯಲ್ಲಿ ಭಾರೀ ಸದ್ದು ಮಾಡಿತ್ತು.

ಆದರೆ ಇತ್ತೀಚೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯುವ ಗುತ್ತಿಗೆದಾರರರ ಸಂಘ ಮಾಡಿದ ಸುದ್ದಿಗೋಷ್ಠಿಯಿಂದ ಬಿಜೆಪಿಗೆ ಮುಖಭಂಗ ಆಗಿತ್ತು. ಈ ಸರ್ಕಾರದಲ್ಲಿ ಎಲ್ಲ ಕಾಮಗಾರಿಗಳಿಗೂ 40% ಕಮಿಷನ್‌ ಪಡೆಯಲಾಗುತ್ತಿದೆ. ಇಷ್ಟು ಲಂಚ ನೀಡಿ ತಾವು ಕಾಮಗಾರಿ ಮಾಡುವುದು ಹೇಗೆ, ಜೀವನ ನಡೆಸುವುದು ಹೇಗೆ ಎಂದು ಅಲವೊತ್ತುಕೊಂಡಿದ್ದರು.

ಕಾಂಗ್ರೆಸ್‌ ಅವಧಿಯಲ್ಲಿ 10% ಲಂಚಕ್ಕೇ ಅಬ್ಬರಿಸಿದ್ದ ಬಿಜೆಪಿ ಇದೀಗ 40% ಲಂಚ ಪಡೆಯುತ್ತಿದೆ ಎಂದು ಪ್ರತಿಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್‌ ಹರಿಹಾಯ್ದಿತ್ತು. ಈ ನಡುವೆ ರಾಜ್ಯದಲ್ಲಿ ಹಿಜಾಬ್‌, ಹಲಾಲ್‌ ಮುಂತಾದ ವಿಚಾರಗಳು ಪ್ರಸ್ತಾಪವಾಗಿ ಲಂಚ ವಿಚಾರ ಹಿನ್ನೆಲೆಗೆ ಸರಿದಿತ್ತು. ಇದೀಗ ನಳಿನ್‌ ಕುಮಾರ್‌ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಇದೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಬೇಕಿದೆ.

ಮತ್ತೆ ಭುಗಿಲೆದ್ದ 40% ಲಂಚ

ಇನ್ನೇನು ಹಲಾಲ್‌, ಹಿಜಾಬ್‌ ವಿಚಾರದಿಂದ ಅಭಿವೃದ್ಧಿಯತ್ತ ಹೊರಳಬೇಕು ಎನ್ನುವಷ್ಟರಲ್ಲಿ ಕಳೆದ 15 ದಿನದ ಹಿಂದೆ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಸುದ್ದಿಗೋಷ್ಠಿ ಮಾಡಿದ್ದರು. ಈಶ್ವರಪ್ಪ ಸಚಿವರಾಗಿರುವ ಗ್ರಾಮೋಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯ ಗ್ರಾಮದಲ್ಲಿ ಸುಮಾರು ₹4 ಕೋಟಿ ಮೊತ್ತದ ಕಾಮಗಾರಿ ನಡೆಸಿದ್ದೇನೆ. ಆದರೆ ಈವರೆಗೆ ಹಣ ಪಾವತಿ ಆಗಿಲ್ಲ. ಈಶ್ವರಪ್ಪ ಅವರು 40% ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಂತೋಷ್‌ ಆರೋಪಿಸಿದ್ದರು.

ಹಿಂದೂ ವಾಹಿನಿ ನ್ಯಾಷನಲ್‌ ಎಂಬ ಸಂಘಟನೆಯ ಕಾರ್ಯದರ್ಶಿ ಎಂದೂ ಹೇಳಿಕೊಂಡಿದ್ದ ಸಂತೋಷ್‌, ಇದೇ ದೂರನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೂ ಕಳಿಸಿದ್ದರು. ಅದಾಗಲೇ 40% ಲಂಚದ ಆರೋಪ ಹೊತ್ತಿದ್ದ ಸರ್ಕಾರಕ್ಕೆ ಇದು ಮತ್ತಷ್ಟು ಮುಜುಗರಕ್ಕೆ ಕಾರಣವಾಗಿತ್ತು.

ಇಷ್ಟೆಲ್ಲ ಆರೋಪ ಮಾಡಿದ ಸಂತೋಷ್‌ ಇದೀಗ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಬರೆದಿದ್ದಾರೆ ಎನ್ನಲಾದ ಆತ್ಮಹತ್ಯಾ ಪತ್ರದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೆಸರನ್ನು ನೇರವಾಗಿ ನಮೂದಿಸಲಾಗಿದೆ. ಇದೇ ಪತ್ರದ ಆಧಾರದಲ್ಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ.

ಹೆಚ್ಚಿನ ಓದಿಗಾಗಿ: ಸಂತೋಷ್‌ ಅತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ A1: ಉಡುಪಿ ಠಾಣೆಯಲ್ಲಿ FIR
ಗಣಪತಿ ಆತ್ಮಹತ್ಯೆ ಪರಕರಣ ನೆನಪು

2016ರಲ್ಲಿ ಡಿವೈಎಸ್‌ಪಿ ಎಂ.ಕೆ. ಗಣಪತಿ (DYSP Ganapathi) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್‌ನ ರೂಂ ನಂಬರ್‌315ರಲ್ಲಿ ಜುಲೈ 7ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸ್ಥಳೀಯ ಸುದ್ದಿವಾಹಿನಿ ಕಚೇರಿಗೆ ತೆರಳಿದ್ದರು. ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ ಹಾಗೂ ಎ.ಎಂ. ಪ್ರಸಾದ್‌ ಅವರುಗಳು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮುದ್ರಣ ಮಾಡಿಸಿದ್ದರು.

ಪ್ರತಿಪಕ್ಷ ಬಿಜೆಪಿ ಕೈಗೆ ಸಿಕ್ಕ ಈ ಪ್ರಬಲ ಅಸ್ತ್ರದಿಂದ ಹೊರಬರಲು ಆಡಳಿತಾರೂಢ ಕಾಂಗ್ರೆಸ್‌ ಹೆಣಗಾಡಿತು. ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಡ ಹೇರಿದರೂ, ರಾಜೀನಾಮೆ ನೀಡುವುದಿಲ್ಲ ಎಂದು ಅನೇಕ ದಿನ ಹೇಳಲಾಯಿತು. ಕೊನೆಗೆ, ಚನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲಾಯಿತು.

ಇದೀಗ ಚುನಾವಣೆ ಹೊಸ್ತಿಲಲ್ಲಿರುವಂತೆ ಈಶ್ವರಪ್ಪ ವಿರುದ್ಧ ಆರೋಪಿಸಿ ಗುತ್ತಿಗೆದಾರ ಆರೋಪ ಮಾಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜೀನಾಮೆ ಪಡೆದರೂ ಪ್ರತಿಪಕ್ಷ ಈ ವಿಚಾರವನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತದೆ. ಈಗಾಗಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆಗಳನ್ನು ನಡೆಸುತ್ತಿದೆ. ರಾಜೀನಾಮೆ ಪಡೆಯದಿದ್ದರೆ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರವಿದೆ. ಈಗಾಗಲೆ ಬಿಜೆಪಿ ವರಿಷ್ಠರು ಈ ಕುರಿತು ಆಲೋಚನೆ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

Exit mobile version