Site icon Vistara News

CM Siddaramaiah: ಬಿಜೆಪಿ ಬೊಗಳೆ ಜನತಾ ಪಾರ್ಟಿ; ಸಿ.ಟಿ. ರವಿ, ಅಶ್ವತ್ಥ್‌ರನ್ನು ಆಚೆಗಟ್ಟಿ ಎಂದ ಸಿದ್ದರಾಮಯ್ಯ

CM Siddaramaiah in Belagavi Session

ಬೆಂಗಳೂರು: ತಾವು ಸದನದಲ್ಲಿ ಆಡಿದ ಮಾತುಗಳನ್ನು ಬಿಜೆಪಿಯವರು ತಿರುಚಿದ್ದಾರೆ. ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಮುಖ್ಯಮಂತ್ರಿಯಾಗಿದ್ದಾಗ ಏನು ಹೇಳಿದ್ದರು ಎನ್ನುವುದನ್ನು‌ ಸದನದಲ್ಲಿ ವಿವರಿಸಿದ್ದೆ. ಆದರೆ, ಈ ವಿಡಿಯೊವನ್ನು ಕತ್ತರಿಸಿ-ತಿರುಚಿ ನನ್ನ ಮಾತು ಎಂಬಂತೆ ಬಿಜೆಪಿ-ಜೆಡಿಎಸ್‌ನವರು ಪ್ರಚಾರ ಮಾಡುತ್ತಿದ್ದಾರೆ. ಉರಿಗೌಡ-ನಂಜೇಗೌಡ (Urigowda and Nanjegowda) ಸಂಸ್ಕಾರದ ಸುಳ್ಳುಕೋರರ ಕೃತ್ಯ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಿಡಿಕಾರಿದ್ದಾರೆ. ಅಲ್ಲದೆ, ಬಿಜೆಪಿಯನ್ನು ಬೊಗಳೆ ಜನತಾ ಪಾರ್ಟಿ ಎಂದು ಕರೆದಿದ್ದು, ಮಾಜಿ ಸಚಿವರಾದ ಸಿ.ಟಿ. ರವಿ (CT Ravi), ಅಶ್ವತ್ಥನಾರಾಯಣ (Ashwath narayan) ಅವರನ್ನು ಆಚೆಗಟ್ಟಲು ಸಲಹೆ ನೀಡಿದ್ದಾರೆ.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಿಎಂ ಸಿದ್ದರಾಮಯ್ಯ ಅವರು, ಸದನದಲ್ಲಿ ಮಾತನಾಡಿದ ನೈಜ ವಿಡಿಯೊವನ್ನು ಅಪ್ಲೋಡ್‌ ಮಾಡಿದ್ದಾರೆ. ಆ ಮೂಲಕ ಬಿಜೆಪಿಗೆ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪೋಸ್ಟ್‌ನಲ್ಲೇನಿದೆ?

“ಗೌರವಾನ್ವಿತ ಮಾಜಿ ಶಾಸಕರಾದ ಸಿಟಿ ರವಿ ಅವರೇ, ನೀವು ಮತ್ತು ನಿಮ್ಮ ಪಕ್ಷ ಇಂಥ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ನಿಮ್ಮನ್ನು ಮನೆಯಲ್ಲಿ‌ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪರದಾಡಬೇಕಾದ ದುಸ್ಥಿತಿಯಲ್ಲಿ ನಿಮ್ಮ ಪಕ್ಷ ಇದೆ. ಆದರೂ ನಿಮಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ನಿಮ್ಮ ಗಮನಕ್ಕಾಗಿ ಈ ಪೂರ್ತಿ ವಿಡಿಯೊ.

ನಾವು ನುಡಿದಂತೆ ನಡೆಯುವವರು, ಹಿಂದೆ 2013 -18ರ ಐದು ವರ್ಷಗಳ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಇದರ ಜತೆಗೆ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಸೇರಿದಂತೆ 30ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಭರವಸೆ ನೀಡದ ಹೊರತಾಗಿಯೂ ಜಾರಿಗೆ ತಂದು ಬದ್ಧತೆ ಪ್ರದರ್ಶಿಸಿದ್ದೆವು. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನತೆಗೆ ನೀಡಿದ್ದ ಶೇ.90 ಭರವಸೆಗಳನ್ನು ಈಡೇರಿಸದೆ ದ್ರೋಹ ಎಸಗಿತ್ತು.

ವಿಡಿಯೊದಲ್ಲಿ ತಿರುಚಲಾಗಿದೆ

ನಮ್ಮ ಪಕ್ಷದ ನಾಯಕರಾದ ಉಗ್ರಪ್ಪ ಅವರು 2009ರಲ್ಲಿ ಸಾಲ ಮನ್ನಾ ಮಾಡುವಂತೆ ಸದನದಲ್ಲಿ ಒತ್ತಾಯಿಸಿದ್ದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಏನು ಉತ್ತರ ಕೊಟ್ಟಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ. ರೈತರ ಸಾಲ ಮನ್ನಾ ಮಾಡಲು ನಾವೇನು ನೋಟು ಪ್ರಿಂಟಿಂಗ್ ಮಷಿನ್ ಇಟ್ಟಿದ್ದೇವೆಯೇ? ಎಂದು ಅವರು ಹೇಳಿಲ್ಲವೇ? ಎಂದು ನಾನು ಕೇಳಿದ್ದೆ. ಈಗ ಮೊನ್ನೆ ವಿಧಾನಸಭೆಯಲ್ಲಿ ನಾನು ಹೇಳಿದ ವಿಡಿಯೊವನ್ನು ತಪ್ಪು ಅರ್ಥ ಬರುವಂತೆ ನಿಮಗೆ ಬೇಕಾದಷ್ಟೆ ಕಟ್ ಮಾಡಿ ಹಾಕಿ ವಿಕೃತ ಸಂತೋಷ ಪಡುತ್ತಿದ್ದೀರಿ.

ಆದರೆ, ಅಶ್ವತ್ಥ್ ನಾರಾಯಣ ಕೂಡ ಇದೇ ರೀತಿ ವಿಡಿಯೊ ಶೇರ್ ಮಾಡಿದ್ದು ನೋಡಿ ಆಶ್ಚರ್ಯವಾಗುತ್ತಿದೆ. ಹಾಲಿ ಶಾಸಕರಾಗಿರುವವರು ಸದನದಲ್ಲಿ ಕುಳಿತು ಅಭಿವೃದ್ಧಿ ಕಾರ್ಯಗಳ ಬಗ್ಗೆಯ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚಿಯ ಮೇಲೆ ಇದೆಯೆಂದು ಕಾಣುತ್ತದೆ.

ನೀವು ಶೇರ್ ಮಾಡಿರುವ ತಿರುಚಿದ ವಿಡಿಯೊಗಳನ್ನು ನಂಬುವಷ್ಟು ರಾಜ್ಯದ ಜನ ಮೂರ್ಖರಲ್ಲ. ನಿಮ್ಮ ಗಮನಕ್ಕೆ ಇರಲಿ ಎಂದು ಪೂರ್ತಿ ವಿಡಿಯೊವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಬಿಜೆಪಿ ನಾಯಕರೇ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ನೀವು ಶೇರ್ ಮಾಡಿರುವ ವಿಡಿಯೊವನ್ನು ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.

ಬೊಗಳೆ ಜನತಾ ಪಾರ್ಟಿ

ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಬಿಜೆಪಿ ಎಂದರೆ “ಬೊಗಳೆ ಜನತಾ ಪಾರ್ಟಿ” ಎಂಬ ಕುಖ್ಯಾತಿಯನ್ನು ದೃಢೀಕರಿಸುವಂತಿದೆ. ಫೇಕ್ ನ್ಯೂಸ್‌ಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ.

ಇದನ್ನೂ ಓದಿ: DK Shivakumar: ನಿಗಮ ಮಂಡಳಿ ಪಟ್ಟಿಗೆ ಸೈನ್‌ ಮಾಡಿಸೋಕೆ ದೆಹಲಿಗೆ ಪಯಣ: ಡಿ.ಕೆ. ಶಿವಕುಮಾರ್

ನರೇಂದ್ರ ಮೋದಿ ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಈ ಕೂಡಲೇ ಫೇಕ್ ನ್ಯೂಸ್ ಪೆಡ್ಲರ್‌ಗಳಾದ ಸಿ.ಟಿ ರವಿ ಮತ್ತು ಅಶ್ವತ್ಥ ನಾರಾಯಣ ಅವರನ್ನು ಪಕ್ಷದಿಂದ ಆಚೆಗಟ್ಟಲಿ” ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಪೋಸ್ಟ್‌ ಮೂಲಕ ಕಿಡಿಕಾರಿದ್ದಾರೆ.

Exit mobile version